ವಿಜಯಪುರ ನಗರದ ಬಿಜೆಪಿ ಕಚೇರಿಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ ಸುದ್ದಿಗೋಷ್ಠಿ ನಡೆಸಿದರು. ಗುರುಲಿಂಗಪ್ಪ ಅಂಗಡಿ, ಮುಖಂಡರಾದ ಈರಣ್ಣ ರಾವೂರ, ಭೀಮಾಶಂಕರ ಹದನೂರ ಇತರರಿದ್ದಾರೆ. 
ವಿಜಯಪುರ

ವಿದ್ಯಾ ಮಂದಿರ ‘ಕೈ’ಯಾರೆ ಕಲುಷಿತ, ಸರ್ಕಾರದ ವಿರುದ್ಧ ಅರುಣ ಶಹಾಪುರ ತೀವ್ರ ವಾಗ್ದಾಳಿ

ಪ್ರಮುಖ ಮುಖ್ಯಾಂಶಗಳು

  • ಸಮವಸ್ತ್ರ ಸಂಹಿತೆಯ ಉಲ್ಲಂಘನೆ
  • ಶಿಕ್ಷಣ ಸಚಿವ ಸೂತ್ರದ ಗೊಂಬೆ
  • ರಾಜ್ಯ ಸರ್ಕಾರದ ವಿರುದ್ಧ ಕಿಡಿ
ವಿಜಯಪುರ: ‘ಸಮವಸ್ತ್ರದ ವಿಷಯದಲ್ಲಿ ಶಿಕ್ಷಣ ಸಚಿವರು ಸೂತ್ರದ ಗೊಂಬೆಯಾಗಿದ್ದಾರೆ, ಈ ವಿಷಯದಲ್ಲಿ ಅವರಿಗೆ ನಿರ್ದೇಶನಗಳು ಬರುತ್ತಿದ್ದು, ಆ ಪ್ರಕಾರ ನಡೆದುಕೊಳ್ಳುತ್ತಿದ್ದಾರೆ’ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪೂರ ಲೇವಡಿ ಮಾಡಿದರು.
ಶಿಕ್ಷಣ ಸಚಿವರು ಸ್ವಂತ ವಿವೇಚನೆ ಕಳೆದುಕೊಂಡಿದ್ದಾರೆ. ಈಚೆಗೆ ನಡೆದ ಸುದ್ದಿಗೋಷ್ಠಿಯೊಂದರಲ್ಲೂ ಅವರ ಪಕ್ಕದಲ್ಲಿದ್ದ ಶಾಸಕ ರಿಜ್ವಾನ್ ಅರ್ಷದ್ ಮಾರ್ಗದರ್ಶನ ನೀಡುತ್ತಿದ್ದರು. ಅವರ ಸೂಚನೆಯಂತೆ ಶಿಕ್ಷಣ ಸಚಿವರು ಹೇಳಿಕೆ ಕೊಡುತ್ತಿದ್ದರೆಂದು ಶಹಾಪುರ ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಕಿಚಾಯಿಸಿದರು.
ಪೂರ್ವ ಪ್ರಾಥಮಿಕ ಶಾಲಾ ಶಿಕ್ಷಣದಲ್ಲಿ ಸಮವಸ್ತ್ರ ಇದೆ, ಎಲ್ಲರೂ ಒಂದೇ ಎಂಬ ಭಾವನೆ ಬರಲು ಸಮವಸ್ತ್ರ ಪದ್ಧತಿ ಇದೆ, ಆದರೆ ಶಾಲೆಗಳಲ್ಲಿ ವಸ್ತ್ರಗಳನ್ನು ಇರಿಸಿಕೊಂಡು ಮತ ರಾಜಕಾರಣಲ್ಲಿ ಕಾಂಗ್ರೆಸ್ ತೊಡಗಿದೆ, ಭಾರತೀಯ ಸಂವಿಧಾನದ ಸಮ ಭಾವವನ್ನು ಹಾಳು ಮಾಡುತ್ತಿದೆ ಎಂದು ಕಿಡಿಕಾರಿದರು.
ಸಮವಸ್ತ್ರ ಸಂಹಿತೆ ಸಂಬಂಧಿಸಿದಂತೆ ಮೂರು ವರ್ಷದ ಹಿಂದಿನ ಸುತ್ತೋಲೆ ಈಗ ಏಕೆ ರದ್ದುಗೊಳಿಸಿದ್ದೀರಿ? ನಿಗದಿಪಡಿಸಿದ ಸಮವಸ್ತ್ರದ ಜೊತೆಗೆ ಸೀಮಿತ ಸಂಪ್ರದಾಯದ ವಸ್ತ್ರಗಳನ್ನು ಧರಿಸುವ ದ್ವಂದ್ವ ನೀತಿ ಏನಿದು? ಶಾಲೆಗಳು ಶಾಲೆಗಳಾಗಿ ಇರಲಿ, ಶಾಲೆ ಎಂದರೆ ವಿದ್ಯೆಯ ಮಂದಿರ. ಅದನ್ನು ನಿಮ್ಮ ಕಲುಷಿತ ರಾಜಕಾರಣದ ತಾಣವಾಗಿಸಬೇಡಿ ಎಂದರು.
ಆರ್.ವಿ. ದೇಶಪಾಂಡೆ, ಬಸವರಾಜ ರಾಯರೆಡ್ಡಿ, ಟಿ.ಬಿ. ಜಯಚಂದ್ರ ಅವರಿಗೆ ಮಂತ್ರಿಗಿರಿ ಒಲಿದಿಲ್ಲ, ನಿಮಗೆ ಆ ಅವಕಾಶ ದೊರಕಿದೆ. ಒಣ ರಾಜಕಾರಣಕ್ಕೆ ನಿಮ್ಮ ಮಂತ್ರಿಗಿರಿ ಬಳಸಿಕೊಳ್ಳಬೇಡಿ ಎಂದು ಮಧು ಬಂಗಾರಪ್ಪ ಅವರಿಗೆ ಕಿವಿಮಾತು ಹೇಳಿದರು.
ಸರ್ಕಾರಿ ಶಾಲೆ ಮುಚ್ಚುತ್ತಿವೆ, ಶಿಕ್ಷಕರ ಕೊರತೆ ವ್ಯಾಪಕವಾಗಿದೆ, ಸಾವಿರಾರು ಹುದ್ದೆಗಳು ಖಾಲಿ ಇವೆ, ವರ್ಗ ಕೋಣೆಗಳು ದುಸ್ಥಿತಿಯ ಆಗರವಾಗಿವೆ, ಶಾಲಾ ಅಭಿವೃದ್ಧಿ ನೀಡಲು ಹಣವಿಲ್ಲ, ಹೀಗಾಗಿ ಸಾಲ ಪಡೆದುಕೊಳ್ಳಲು ಪಬ್ಲಿಕ್ ಶಾಲೆ ಎಂಬ ಲೇಬಲ್ ಅಂಟಿಸುವ ಕೆಲಸ ಮಾಡುತ್ತಿದೆ, ಇದು ವೈಫಲ್ಯ ಮುಚ್ಚಿಕೊಳ್ಳುವ ಕಾರಣದಿಂದ ಸಮವಸ್ತ್ರ ವಿಷಯ ಮುನ್ನೆಲೆಗೆ ಬಂದಿದೆ ಎಂದರು.
ಶಾಲೆಗಳನ್ನು ಸುಸ್ಥಿತಿಗೆ ತರುವುದನ್ನು ಬಿಟ್ಟು ಅಧೋಗತಿಗೆ ತಳ್ಳುವ ಕೆಲಸ ಮಾಡಿದ್ದಾರೆ ಎಂದು ಹರಿಹಾಯ್ದರು.
ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮುಖಂಡರಾದ ಈರಣ್ಣ ರಾವೂರ, ಭೀಮಾಶಂಕರ ಹದನೂರ, ಸಾಬು ಮಾಶ್ಯಾಳ, ವಿಜಯ ಜೋಶಿ ಇತರರಿದ್ದರು.