ವಿಜಯಪುರ ನಗರದ ಎಸ್‌ಬಿಜೆ ಕಲಾ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸವನ್ನು ಗಣ್ಯರು ಉದ್ಘಾಟಿಸಿದರು. ಬಿ.ಎಸ್. ಬೆಳಗಲಿ, ಇಂದುಮತಿ ಲಮಾಣಿ, ಜಂಬುನಾಥ ಕಂಚ್ಯಾಣಿ ಮತ್ತಿತರರಿದ್ದಾರೆ.
ವಿಜಯಪುರ: ಶಿವಶರಣರ ವಚನಗಳು ಸಮಾನತೆ, ಸೌಹಾರ್ದತೆ ಮತ್ತು ಮಾನವೀಯ ಮೌಲ್ಯಗಳ ಸಾರವನ್ನು ಹೊಂದಿದ್ದು, ಅವುಗಳ ಆಶಯ ಅರಿತು ಸನ್ಮಾರ್ಗದಲ್ಲಿ ನಡೆಯಬೇಕೆಂದು ತಿಕೋಟಾ ನೂತನ ಕಲಾ ಮಹಾವಿದ್ಯಾಲಯ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಬಿ.ಎಸ್. ಬೆಳಗಲಿ ಹೇಳಿದರು.
ನಗರದ ಎಸ್‌ಬಿಜೆ ಕಲಾ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್, ಜಿಲ್ಲಾ ಯುವ ವೇದಿಕೆ, ಎಸ್‌ಬಿಜೆ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯಗಳ ಸಂಯುಕ್ತಾಶ್ರಯದಲ್ಲಿ ವಿವಿಧ ಮಹನೀಯರ ಸ್ಮರಣಾರ್ಥ ಇತ್ತೀಚೆಗೆ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸದಲ್ಲಿ ಅವರು ಮಾತನಾಡಿದರು.
ಸದ್ಯ ಸಮಾಜದ ವಿವಿಧ ವರ್ಗಗಳ ನಡುವೆ ಸಾಂಸ್ಕೃತಿಕ ಹಾಗೂ ನೈತಿಕ ಮೌಲ್ಯಗಳ ಕೊರತೆ ಕಂಡುಬರುತ್ತಿದೆ. ಹೀಗಾಗಿ ಶರಣರ ವಚನಗಳ ಅಧ್ಯಯನ ಮತ್ತು ಪ್ರಚಾರ ಇಂದಿ ಅವಶ್ಯಕತೆಯಾಗಿದೆ. ವಚನಗಳು ಜಾತಿ, ಧರ್ಮ, ವರ್ಗ ಭೇದಗಳನ್ನು ಮೀರಿ ಎಲ್ಲರಿಗೂ ಸಮಾನ ಗೌರವ ನೀಡುವ ಸಂದೇಶ ಸಾರುತ್ತವೆ. ಅಂತಹ ಸಂದೇಶಗಳನ್ನು ದತ್ತಿಗೋಷ್ಠಿಗಳ ಮೂಲಕ ಜನರಿಗೆ ತಲುಪಿಸಿದಲ್ಲಿ ಅವರ ಮನೋಭಾವದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಸಾಧ್ಯ ಎಂದರು.
ಸಾಹಿತಿ ಇಂದುಮತಿ ಲಮಾಣಿ ಮಾತನಾಡಿ, ಸಂತ ಸೇವಾಲಾಲರು ತಮ್ಮ ಜೀವನವನ್ನು ಸಮಾನತೆ, ಸತ್ಯ ಮತ್ತು ಸೇವೆಯ ತತ್ವಗಳಿಗೆ ಅರ್ಪಿಸಿದರು. ಅಲ್ಲದೇ, ಸಮುದಾಯದಲ್ಲಿ ನಡೆಯುತ್ತಿದ್ದ ಅನಾಚಾರಗಳು, ಅಂಧಶ್ರದ್ಧೆಗಳು ಮತ್ತು ಸಾಮಾಜಿಕ ಕೆಡುಕುಗಳನ್ನು ದೂರ ಮಾಡುವಲ್ಲಿ ಅವರು ಪ್ರಮುಖ ಪಾತ್ರವಹಿಸಿದ್ದರು. ಆಧುನಿಕ ಸಮಾಜದಲ್ಲಿ ಸೇವಾಲಾಲರ ಆದರ್ಶಗಳು ಪ್ರಸ್ತುತವಾಗಿದ್ದು, ಸಮಾನತೆ, ಸಹಾನುಭೂತಿ ಮತ್ತು ಸೇವಾಭಾವನೆಯಂತಹ ಮೌಲ್ಯಗಳನ್ನು ಬೆಳೆಸಲು ಅವರ ಜೀವನ ಮಾರ್ಗದರ್ಶಕವಾಗಿದೆ ಎಂದರು.
ಕಲ್ಲಪ್ಪ ಶಿವಶರಣ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪ್ರಾಚಾರ್ಯೆ ವಿ.ಎಸ್. ಕೆಂಗನಾಳ ಅಧ್ಯಕ್ಷತೆ ವಹಿಸಿದ್ದರು. ಮಾತನಾಡಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಜಂಬುನಾಥ ಕಂಚ್ಯಾಣಿ, ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ವಿ.ಸಿ. ನಾಗಠಾಣ, ರಾಜಶೇಖರ ನಾಡಗೌಡ, ಈರಣ್ಣ ತೊಂಡಿಕಟ್ಟಿ, ಮ.ಗು. ಯಾದವಾಡ, ಸೋಮನಗೌಡ ಪಾಟೀಲ ಇತರರಿದ್ದರು.
ಅಮರೇಶ ಸಾಲಕ್ಕಿ ಸ್ವಾಗತಿಸಿದರು. ಸುಂದರಾಬಾಯಿ ಪಾಟೀಲ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮಕ್ಕೂ ಮುನ್ನ ಜಗಜ್ಯೋತಿ ಬಸವೇಶ್ವರ ಹಾಗೂ ಸಂತ ಸೇವಾಲಾಲರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು.