ಸಂಸದ ರಮೇಶ ಜಿಗಜಿಣಗಿ 
ವಿಜಯಪುರ

ವಜ್ರಹನುಮಾನ್ ರೈಲ್ವೆ ಕೆಳಸೇತುವೆ ಕಾಮಗಾರಿ, ಅನುದಾನ ವಾಪಸ್ ಭೀತಿ-ತಪ್ಪದು ಫಜೀತಿ

ಪ್ರಮುಖ ಮುಖ್ಯಾಂಶಗಳು

  • ರೈಲ್ವೆ ಕೆಳಸೇತುವೆ ನಿರ್ಮಾಣಕ್ಕೆ ಅಸ್ತು
  • ರಾಜ್ಯ ಸರ್ಕಾರದಿಂದ ದಿವ್ಯ ನಿರ್ಲಕ್ಷೃ
  • ‘ಯುಟಿಲಿಟಿ’ ಕಾಮಗಾರಿಗೆ ಅಸಹಕಾರ
  • ಸಂಸದ ರಮೇಶ ಜಿಗಜಿಣಗಿ ಹೇಳಿಕೆ
ವಿಜಯಪುರ: ಐತಿಹಾಸಿಕ ಗುಮ್ಮಟ ನಗರಿಯ ವಜ್ರಹನುಮಾನ್ ದೇವಸ್ಥಾನದ ಬಳಿಯ ರೈಲ್ವೆ ಕೆಳಸೇತುವೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಸಮರ್ಪಕವಾಗಿ ಸಹಕಾರ ನೀಡದ ಹಿನ್ನೆಲೆ ಕೇಂದ್ರದ ಅನುದಾನ ವಾಪಸ್ ಆಗುವ ಭೀತಿ ಎದುರಾಗಿದೆ ಎಂದು ಸಂಸದ ರಮೇಶ ಜಿಗಜಿಣಗಿ ಆತಂಕ ವ್ಯಕ್ತಪಡಿಸಿದ್ದಾರಲ್ಲದೇ, ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ಹಾಗೂ ಆಕ್ರೋಶ ಹೊರಹಾಕಿದ್ದಾರೆ.
ಬಹುದಿನದ ಬೇಡಿಕೆಯಾಗಿರುವ ರೈಲ್ವೆ ಕೆಳಸೇತುವೆ ನಿರ್ಮಾಣಕ್ಕಾಗಿ ಕೇಂದ್ರದ ನಾಯಕರ ಕೈ-ಕಾಲು ಹಿಡಿದು ಅನುದಾನ ತಂದರೆ ಸ್ಥಳೀಯ ಆಡಳಿತ ಸಹಕಾರ ನೀಡುತ್ತಿಲ್ಲ. ಅಂದಾಜು 19 ಕೋಟಿ ರೂಪಾಯಿ ಅನುದಾನ ಮಂಜೂರಾಗಿದ್ದು, ಸಾರ್ವಜನಿಕ ಸೌಲಭ್ಯ ಕಾಮಗಾರಿ (ಯುಟಿಲಿಟಿ)ಗೆ ಸ್ಥಳೀಯ ಸರ್ಕಾರ ಮುಂದಾಗುತ್ತಿಲ್ಲ. ಹೀಗಾಗಿ ಮಹತ್ತರ ಯೋಜನೆಯೊಂದಕ್ಕೆ ಹಿನ್ನಡೆಯಾಗುತ್ತಿದ್ದು, ಸಾರ್ವಜನಿಕರು ಕೂಡಲೇ ಎಚ್ಚೆತ್ತುಕೊಳ್ಳದಿದ್ದರೆ ಸಮಸ್ಯೆ ಶಾಶ್ವತಗೊಳ್ಳಲಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಈಗಾಗಲೇ ಜಿಲ್ಲಾಧಿಕಾರಿ, ಪ್ರಧಾನ ಕಾರ್ಯದರ್ಶಿ ಒಳಗೊಂಡು ಎಲ್ಲರಿಗೂ ಈ ಕುರಿತು ಮನವರಿಕೆ ಮಾಡಲಾಗಿದೆ. ಕೇಬಲ್, ನೀರಿನ ಪೈಪ್‌ಲೈನ್ ಸೇರಿ ಹಲವು ಮೂಲ ಸೌಕರ್ಯಗಳನ್ನು ಸ್ಥಳಾಂತರಿಸಬೇಕಿದೆ. ಅದಕ್ಕಾಗಿ ಸ್ಥಳೀಯ ಆಡಳಿತ ಅನುದಾನ ಮೀಸಲಿಡಬೇಕು. ಅನ್ಯರಾಜ್ಯಗಳಲ್ಲೆಲ್ಲ ಆಯಾ ಸ್ಥಳೀಯ ಸರ್ಕಾರವೇ ನೋಡಿಕೊಂಡಿದೆ. ಆದರೆ, ಇಲ್ಲಿ ಮಾತ್ರ ಕೇಂದ್ರವೇ ಆ ಕಾರ್ಯ ಮಾಡಬೇಕೆಂಬ ಗೊಡ್ಡು ವಾದ ಹಾಕಲಾಗುತ್ತಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಕೇಂದ್ರದ ಅನುದಾನ ವಾಪಸ್ ಆಗಲಿದ್ದು, ಸಂಚಾರ ದಟ್ಟಣೆ ಸಮಸ್ಯೆ ಶಾಶ್ವತವಾಗಿ ಉಳಿಯಲಿದೆ. ಹೀಗಾಗಿ ಸಾರ್ವಜನಿಕರು ಸ್ಥಳೀಯ ಸರ್ಕಾರದ ಮೂಗು ಹಿಂಡಿ ಕೆಲಸ ಮಾಡಿಸಿಕೊಳ್ಳಬೇಕೆಂದರು.
ಕೇಂದ್ರ ಸರ್ಕಾರ ಎಲ್ಲೂ ಯುಟಿಲಿಟಿ ಕಾಮಗಾರಿಗೆ ಅನುದಾನ ನೀಡಿಲ್ಲ. ಗ್ರಾಮದ ಹೊರವಲಯದಲ್ಲಿದ್ದರೆ ಕೇಂದ್ರ ಸರ್ಕಾರ ಮಾಡುತ್ತಿತ್ತು. ನಗರದಲ್ಲಿಯೂ ಕೇಂದ್ರವೇ ಮಾಡೋದಾದರೆ ಸ್ಥಳೀಯ ಸರ್ಕಾರಗಳ ಜವಾಬ್ದಾರಿ ಏನು? ಇದೇ ಜಿಲ್ಲೆಯಲ್ಲಿ ಇಂಡಿ, ಬಸವನಬಾಗೇವಾಡಿ ಮುಂತದ ಕಡೆ ಇಂಥದ್ದೇ ಕಾಮಗಾರಿಗೆ ಎಲ್ಲೂ ಕೇಂದ್ರದ ಅನುದಾನ ಮೀಸಲಿಟ್ಟಿಲ್ಲ. ಹೀಗಾಗಿ ವಜ್ರಹನುಮಾನ್ ರೈಲ್ವೆ ಕೆಳಸೇತುವೆಗೆ ಮಾತ್ರ ಇಂಥ ಕಟ್ಟಳೆ ವಿಧಿಸುತ್ತಿರುವುದೇಕೆ? ಎಂದ ಜಿಗಜಿಣಗಿ, ಜನರು ಕೂಡಲೇ ಎಚ್ಚೆತ್ತುಕೊಳ್ಳಬೇಕು. ಇಲ್ಲವಾದರೆ ರೈಲ್ವೆ ಗೇಟ್ ಬಂದ್ ಆಗಲಿದೆ. ಸಮಸ್ಯೆ ಉಲ್ಭಣಗೊಳ್ಳಲಿದೆ. ಕಿಲೋ ಮೀಟರ್‌ಗಟ್ಟಲೆ ವಾಹನಗಳು ನಿಲ್ಲಲಿವೆ. ಆನಂತರ ಸಂಸದರ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದರು.
ಇನ್ನು ಫಂಡರಪುರಕ್ಕೆ ಹೋಗವ ಗೋಳಗುಮ್ಮಟ ರೈಲು ಬೈಪಾಸ್ ಮಾರ್ಗಕ್ಕೆ ಸಮ್ಮತಿ ಸಿಕ್ಕಿದ್ದು, ಕೆಲವು ಮಾರ್ಪಾಡುಗಳೊಂದಿಗೆ ಶೀಘ್ರದಲ್ಲೇ ಕಾರ್ಯ ಕೈಗೂಡಲಿದೆ ಎಂದರು.

ಕಾಂಗ್ರೆಸ್ ಸರ್ಕಾರವೇ ಹೋದರೆ ಛಲೋ...! 

 ರಾಜ್ಯದಲ್ಲಿ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಸಂಸದ ರಮೇಶ ಜಿಗಜಿಣಗಿ ‘ಈ ಕಾಂಗ್ರೆಸ್ ಸರ್ಕಾರವೇ ಹೋದರೆ ಛಲೋ’ ಎಂದರು. 

ಕಾಂಗ್ರೆಸ್‌ನಲ್ಲಿ ಹಿಂದುಳಿದ, ದಲಿತ ಹಾಗೂ ಅಲ್ಪಸಂಖ್ಯಾತರಿಗೆ ಬೆಲೆ ಇಲ್ಲ. ಕೇವಲ ಮತಬ್ಯಾಂಕ್ ಆಗಿ ಬಳಸಿಕೊಳ್ಳುತ್ತಾರೆ. ದಲಿತರು, ಮುಸ್ಲಿಂರಿಗೆ ಇವರೇನು ಸಿಎಂ ಮಾಡುತ್ತಾರಾ? ಕುರಿಗೆ ಹಸಿಮೇವು ತೋರಿಸಿದಂತೆ ಸಣ್ಣಪುಟ್ಟ ಹುದ್ದೆ ತೋರಿಸುತ್ತಾರಷ್ಟೇ. ಹೀಗಾಗಿ ಆ ಜನ ಎಚ್ಚೆತ್ತುಕೊಳ್ಳಬೇಕು. ಕಾಂಗ್ರೆಸ್‌ನಲ್ಲಿರುವ ದಲಿತರು ಬಿಜೆಪಿಗೆ ಬರಬೇಕೆಂದು ಆಹ್ವಾನ ನೀಡಿದರು. 

ಕಾಂಗ್ರೆಸ್‌ನಲ್ಲಿ ದಲಿತರನ್ನು ಸಿಎಂ ಮಾಡುತ್ತಾರೆಂಬ ನಿರೀಕ್ಷೆ ಹುಸಿಯಾಗಿದೆ. ಡಾ.ಅಂಬೇಡ್ಕರ್ ಕಾಲದಿಂದಲೂ ಈ ವರ್ಗಕ್ಕೆ ಅನ್ಯಾಯ ಆಗುತ್ತಿದೆ. ದಲಿತರಿಗೇನು ಇವರು ಬಂಗಾರದ ಮನೆ ಕಟ್ಟಿಸಿಕೊಟ್ಟರಾ? ಒಂದೇ ಒಂದು ಜಮೀನು ಸಹ ಇಲ್ಲ ಈ ಸಮುದಾಯಕ್ಕೆ. ದಲಿತರ ಬಗ್ಗೆ ಕಾಳಜಿ ಮೆರೆದಿರುವುದು ಬಿಜೆಪಿ. ಈ ಹಿಂದೆ ರಾಮಕೃಷ್ಣ ಹೆಗಡೆ, ಜೆ.ಎಚ್. ಪಟೇಲರ ಕಾಲದಲ್ಲೂ ದಲಿತರ ಕಾಳಜಿ ಮೆರೆಯಲಾಗಿತ್ತು. ಈಗ ಆ ಕಾಳಜಿ ಉಳಿದಿಲ್ಲ ಎಂದರು. 

ಈ ರಾಜ್ಯಕ್ಕೆ ಮೊದಲು ದಲಿತ ಸಿಎಂ ಬೇಡಿಕೆ ಇರಿಸಿದ್ದೇ ಜಿಗಜಿಣಗಿ. ಯಾವುದೇ ಪಕ್ಷವಾಗಲಿ ದಲಿತರು ಸಿಎಂ ಆಗಲಿ. ಸಾಯುವವರೆಗೂ ನನ್ನ ಈ ಬೇಡಿಕೆ ಇರಲಿದೆ ಎಂದರು.ನಾಗರಭಾವಿಯಲ್ಲಿ ದಲಿತ ಯುವಕನನ್ನ ಹೀನಾಯವಾಗಿ ಕೊಲೆ ಮಾಡಿದ ಪ್ರಕರಣವನ್ನು ಜಿಗಜಿಣಗಿ ಖಂಡಿಸಿದರು.