ವಿಜಯಪುರ ನಗರ ಹೊರವಲಯದ ಭೂತನಾಳ ಕೆರೆ ಬಳಿಯಿರುವ ವೆಲೋಡ್ರೋಮ್‌ನಲ್ಲಿ ಆರಂಭವಾದ ಅಸ್ಮಿತಾ ಖೇಲೋ ಇಂಡಿಯಾ ರಾಜ್ಯ ಮಟ್ಟದ ವುಮೆನ್ಸ್ ಟ್ರ್ಯಾಕ್ ಟೂರ್ನಾಮೆಂಟ್ ಗೆ ಸಂಸದ ರಮೇಶ ಜಿಗಜಿಗಣಗಿ ಚಾಲನೆ ನೀಡಿದರು. ಪಾಲಿಕೆ ಸದಸ್ಯ ರಾಹುಲ್ ಜಾಧವ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರಾಜಶೇಖರ ದೈವಾಡಿ, ಆರ್.ಎಸ್. ಪೂಜೇರಿ, ರಾಜು ಬಿರಾದಾರ ಇತರರಿದ್ದಾರೆ. 
ವಿಜಯಪುರ

ಸೈಕ್ಲಿಂಗ್ ಅಸೋಸಿಯೇಶನ್‌ಗೆ ಎರಡು ಸೈಕಲ್ ಕಾಣಿಕೆ, ಸಂಸದ ರಮೇಶ ಜಿಗಜಿಣಗಿ ಭರವಸೆ

ಸೈಕ್ಲಿಂಗ್ ಪಂದ್ಯಾವಳಿಗೆ ಚಾಲನೆ * ವೆಲೊಡ್ರೋಮ್‌ನಲ್ಲಿ ಆಯೋಜನೆ

ವಿಜಯಪುರ: ಸೈಕ್ಲಿಸ್ಟ್‌ಗಳ ತವರೂರು ಎಂದೇ ಖ್ಯಾತಿ ಪಡೆದ ಅವಿಭಜಿತ ವಿಜಯಪುರ ಜಿಲ್ಲೆಯ ಸೈಕ್ಲಿಸ್ಟ್‌ಗಳು ರಾಷ್ಟ್ರಮಟ್ಟದಲ್ಲಿ ಸಾಧನೆ ಮೆರೆಯುತ್ತಿರುವುದು ಸಂತಸದ ಸಂಗತಿ. ಸೈಕ್ಲಿಸ್ಟ್‌ಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಅಮೇಚೂರ್ ಸೈಕ್ಲಿಂಗ್ ಅಸೋಸಿಯೇಶನ್‌ಗೆ ಎರಡು ಸೈಕಲ್ ಕೊಡಿಸುವುದಾಗಿ’ ಸಂಸದ ರಮೇಶ ಜಿಗಜಿಗಣಗಿ ಭರವಸೆ ನೀಡಿದರು.

ನಗರ ಹೊರವಲಯದ ಭೂತನಾಳ ಕೆರೆ ಬಳಿಯಿರುವ ವೆಲೋಡ್ರೋಮ್‌ನಲ್ಲಿ ಶನಿವಾರ ಆರಂಭವಾದ ಅಸ್ಮಿತಾ ಖೇಲೋ ಇಂಡಿಯಾ ರಾಜ್ಯ ಮಟ್ಟದ ವುಮೆನ್ಸ್ ಟ್ರ್ಯಾಕ್ ಟೂರ್ನಾಮೆಂಟ್ ಗೆ ಚಾಲನೆ ನೀಡಿ ಅವರು ಮಾತನಾಡಿದರು.

ಸೈಕ್ಲಿಸ್ಟ್‌ಗಳ ಅಭ್ಯಾಸಕ್ಕೆ ಪೂರಕವಾಗಿ ನಗರದಲ್ಲಿ ವೆಲೋಡ್ರೋಮ್ ನಿರ್ಮಾಣವಾಗಬೇಕೆಂಬ ಹಲವು ದಶಕಗಳ ಬೇಡಿಕೆ ಈಗ ಈಡೇರಿದೆ. ಇಂದು ಅದೇ ವೆಲೋಡ್ರೋಮ್‌ನಲ್ಲಿ ಕ್ರೀಡಾಕೂಟ ನಡೆದಿದ್ದನ್ನು ಕಣ್ತುಂಬಿಸಿಕೊಂಡೆ. ಇದರಿಂದ ನನಗೆ ಅತೀವ ಸಂತಸವಾಗಿದೆ ಎಂದರು.

ಜಿಲ್ಲಾಧಿಕಾರಿ ಡಾ. ಆನದ ಕೆ. ಮಾತನಾಡಿ, ಇತ್ತೀಚೆಗಷ್ಟೇ ವೆಲೋಡ್ರೋಮ್ ನಿರ್ಮಾಣವಾಗಿದೆ. ಸೈಕ್ಲಿಸ್ಟ್‌ಗಳಿಗೆ ಏನೇ ತಾಂತ್ರಿಕ ತೊಂದರೆಗಳು ಎದುರಾದರೆ, ತಕ್ಷಣ ಸರಿಪಡಿಸಲಾಗುವುದು ಎಂದರು.

ಕರ್ನಾಟಕ ರಾಜ್ಯ ಅಮೇಚೂರ ಸೈಕ್ಲಿಂಗ್ ಅಸೋಸಿಯೇಶನ್ ಅಧ್ಯಕ್ಷ ರಾಜು ಬಿರಾದಾರ ಮಾತನಾಡಿ, ‘ಸಿಎಫ್‌ಐನ ಸಹಕಾರ ಹಾಗೂ ವಿಜಯಪುರ ನಗರ ಸೇರಿ ಜಿಲ್ಲೆಯ ದಾನಿಗಳ ನೆರವಿನಲ್ಲಿ ನಿರಂತರವಾಗಿ ಸೈಕ್ಲಿಂಗ್ ಕ್ರೀಡಾಕೂಟಗಳನ್ನು ಆಯೋಜಿಸಲು ಅನುಕೂಲವಾಗಿದೆ’ ಎಂದರು.

ಸಿಎಫ್‌ಐನ ಪಿಸಿಪಿಯಾಗಿ ಸುದಾಮ್ ರೋಕಡೆ, ಪಾಲಿಕೆ ಸದಸ್ಯ ರಾಹುಲ್ ಜಾಧವ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರಾಜಶೇಖರ ದೈವಾಡಿ, ಆರ್.ಎಸ್. ಪೂಜೇರಿ, ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಇತರರಿದ್ದರು.

ಕೇಂದ್ರ ಸರ್ಕಾರದ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ, ಸೈಕ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ, ಕರ್ನಾಟಕ ರಾಜ್ಯ ಅಮೇಚೂರ ಸೈಕ್ಲಿಂಗ್ ಅಸೋಸಿಯೇಶನ್, ಜಿಲ್ಲಾ ಸೈಕ್ಲಿಂಗ್ ಅಸೋಸಿಯೇಶನ್, ಜಿಲ್ಲಾಡಳಿತ, ವಿಜಯಪುರ ಸೈಕ್ಲಿಂಗ್ ಗ್ರುಪ್ ಹಾಗೂ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಪಂದ್ಯಾವಳಿ ನಡೆಯಿತು.