ಶಾಸಕ ಸಿ.ಎಸ್. ನಾಡಗೌಡ - ಸಚಿವ ಎಂ.ಬಿ. ಪಾಟೀಲ  
ವಿಜಯಪುರ

ಮಾನಸಿಕ ಕಾಯಿಲೆಗೆ ಚಿಕಿತ್ಸೆಯೇ ಮದ್ದು...! ಶಾಸಕ ನಾಡಗೌಡರಿಗೆ ಸಚಿವ ಎಂ.ಬಿ. ಪಾಟೀಲ ತಿರುಗೇಟು

ಪ್ರಮುಖ ಮುಖ್ಯಾಂಶಗಳು

  • ಬರ ಘೊಷಣೆ ವಿಚಾರದಲ್ಲಿ ವಾಗ್ದಾಳಿ
  • ಸರ್ಕಾರದ ಬಗ್ಗೆಯೇ ಮಾತನಾಡಿದ್ದ ಶಾಸಕ
  • ಸಚಿವರು ಹಾಗೂ ಅಧಿಕಾರಿ ವಿರುದ್ಧ ಆರೋಪ
  • ಉಸ್ತುವಾರಿ ಸಚಿವರಿಂದ ಸ್ಪಷ್ಟೀಕರಣ ರವಾನೆ
ವಿಜಯಪುರ: ‘ಮುದ್ದೇಬಿಹಾಳ ಶಾಸಕರು ವಯೋಸಹಜವಾಗಿ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇವರಿಗೆ ಚಿಕಿತ್ಸೆ ಅವಶ್ಯಕತೆ ಇದ್ದು, ಇಂತಹ ನೀಚತನದ ಹೇಳಿಕೆಗಳು ಮುಂದುವರೆದರೆ, ಇವರ ಮಾನಸಿಕ ಕಾಯಿಲೆಗೆ ಚಿಕಿತ್ಸೆಯೇ ಮದ್ದು’ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಡಾ.ಎಂ.ಬಿ. ಪಾಟೀಲ ತಿಳಿಸಿದ್ದಾರೆ.
ಬರ ಪೀಡಿತ ಪ್ರದೇಶ ಘೋಷಣೆಗೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅಧಿಕಾರಿಗಳ ವಿರುದ್ಧ ಶಾಸಕ ಸಿ.ಎಸ್. ನಾಡಗೌಡರ ಆರೋಪಗಳಿಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ಸಚಿವ ಎಂ.ಬಿ. ಪಾಟೀಲರು, ‘ಶಾಸಕ ಸಿ.ಎಸ್. ನಾಡಗೌಡ ಇತ್ತೀಚಿನ ದಿನಗಳಲ್ಲಿ ಸರ್ಕಾರದ ವಿರುದ್ಧ, ಹೈಕಮಾಂಡ್ ವಿರುದ್ಧ ಮತ್ತು ನನ್ನ ವಿರುದ್ಧ ಅತೀ ನೀಚ ಮಟ್ಟದ ಹೇಳಿಕೆಗಳನ್ನು ಸತತವಾಗಿ ನೀಡುತ್ತಿದ್ದಾರೆ. ಈ ಕುರಿತು ಹೈಕಮಾಂಡ್ ನನಗೆ ಸಹನೆಯಿಂದ ಇರಲು ಸೂಚನೆ ನೀಡಿದೆ. ಆದರೆ, ನನ್ನ ಸಹನೆ ದೌರ್ಬಲ್ಯ ಎಂದು ಕೆಲವರು ತಿಳಿದಿದ್ದಾರೆ’ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
‘ವಿಜಯಪುರ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯೂ ಮಳೆ ಅಭಾವದಿಂದ ಬರದ ತೀವ್ರ ಸ್ಥಿತಿ ಇದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ವಯ ರಾಜ್ಯದ ವಿಪತ್ತು ಕೋಶದವರು ಕಾಲ-ಕಾಲಕ್ಕೆ ಸ್ಯಾಟ್‌ಲೈಟ್ ಮೂಲಕ ಮಾಹಿತಿ ಪಡೆದು, ಪ್ರತಿವಾರ ವಸ್ತು ಸ್ಥಿತಿಯನ್ನು ಅವಲೋಕಿಸಿ, ಬರದ ತಾಲೂಕುಗಳನ್ನು ಘೋಷಿಸುತ್ತಾರೆ. ವಿಜಯಪುರ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸುವಂತೆ ಸಭೆ ನಡೆಸಿ, ಸರ್ಕಾರಕ್ಕೆ ಮಾಹಿತಿ ನೀಡಿ, ಪತ್ರವನ್ನು ನೀಡಿದ್ದೇನೆ. ಮುಂದಿನ ವಾರಗಳಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳು ಬರ ಪೀಡಿತ ಎಂದು ಘೋಷಣೆ ಆಗಲಿವೆ. ಮೊದಲ ಪಟ್ಟಿ ಬಿಡುಗಡೆ ಆದಾಗ ನನ್ನ ಕ್ಷೇತ್ರವೂ ಸೇರಿರಲಿಲ್ಲ. ಇದರಲ್ಲಿ ಯಾವುದೇ ರಾಜಕೀಯ ಹಸ್ತಕ್ಷೇಪ ಅಸಾಧ್ಯ. ಈ ಎಲ್ಲ ಮಾಹಿತಿಯೂ ಎಲ್ಲ ಶಾಸಕರಿಗೂ ತಿಳಿದಿರುವ ಸಂಗತಿ’ ಎಂದಿದ್ದಾರೆ.
‘ಮುಖ್ಯಮಂತ್ರಿಗಳ ಸೂಚನೆ ಮೆರೆಗೆ ಬರದ ಅಧ್ಯಯನಕ್ಕೆ ಇವರ ಕ್ಷೇತ್ರಗಳಿಗೆ ಜಿಲ್ಲಾಡಳಿತ ಅಧಿಕಾರಿಗಳ ತಂಡವನ್ನು ಕರೆದುಕೊಂಡು ಎರಡು ಬಾರಿ ಹೊರಟಾಗಲೂ, ನಾನು ದೆಹಲಿಯಲ್ಲಿದ್ದೇನೆ, ಬೆಂಗಳೂರಿನಲ್ಲಿದ್ದೇನೆ ಎಂದು ಅಲ್ಲಿಗೆ ಬಾರದೆ, ಇದೀಗ ರೈತರ ಹೆಸರಿನಲ್ಲಿ ಸರ್ಕಾರದ ವಿರುದ್ಧ ಹೇಳಿಕೆ ನೀಡಿರುವುದು ಹಾಸ್ಯಾಸ್ಪದ. ಬರ ಕಂದಾಯ ಇಲಾಖೆ ವ್ಯಾಪ್ತಿಗೆ ಸೇರಿದ್ದು, ಉಪಮುಖ್ಯಮಂತ್ರಿಗಳಿಗೆ ಕಂದಾಯ ಇಲಾಖೆ ಸೇರಿದೆ. ಅನ್ಯಾಯವಾಗಿದ್ದರೆ ಮುಖ್ಯಮಂತ್ರಿಗಳನ್ನು ಹಾಗೂ ಕಂದಾಯ ಸಚಿವರನ್ನು ಭೇಟಿ ಮಾಡಿ ಚರ್ಚಿಸಬಹುದಿತ್ತು. ಅದನ್ನು ಬಿಟ್ಟು ಕ್ಷೇತ್ರದ ಜನರನ್ನು ವಂಚಿಸಲು ನಾಟಕ ಮಾಡಿದ್ದೀರಿ. ಜನತೆ ನಿಮ್ಮ ಮಾತಿಗೆ ಮರುಳಾಗಲು ಮೂರ್ಖರಲ್ಲ. ಅವರಿಗೆ ನಿಮ್ಮ ನಿಜಬಣ್ಣ ತಿಳಿಯುತ್ತದೆ’ ಎಂದು ಎಂ.ಬಿ. ಪಾಟೀಲರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.