ವಿಜಯಪುರ ನಗರದಲ್ಲಿ ಬಿಜೆಪಿಯಿಂದ ಹಮ್ಮಿಕೊಂಡಿದ್ದ ಟ್ರಾೃಕ್ಟರ್ ರ‌್ಯಾಲಿಯನ್ನುದ್ದೇಶಿಸಿ ಶಾಸಕ ಜನಾರ್ಧನ ರೆಡ್ಡಿ ಮಾತನಾಡಿದರು. ಎ.ಎಸ್. ಪಾಟೀಲ ನಡಹಳ್ಳಿ, ವಿಜುಗೌಡ ಪಾಟೀಲ, ಗುರುಲಿಂಗಪ್ಪ ಅಂಗಡಿ ಮತ್ತಿತರರಿದ್ದಾರೆ.
- ರಾಜ್ಯದಲ್ಲಿ ಸಿಎಂ ಸ್ಥಾನದ ಬದಲಾವಣೆ ನಿಶ್ಚಿತ
- ರೈತರ ಬಾಯಿಗೆ ಮಣ್ಣು-ಸಿಎಂಗೆ ನಾಟಿಕೋಳಿ
- ಬೆಳಗಾವಿ ಅಧಿವೇಶನಕ್ಕೆ ಮುತ್ತಿಗೆ ಹಾಕುವ ಎಚ್ಚರಿಕೆ
- ಸಹಕಾರ ಮುಗೀತು ಇನ್ನು ಸಂಘರ್ಷ ಶುರು
ವಿಜಯಪುರ: ಅವೈಜ್ಞಾನಿಕ ಬೆಳೆ ಸಮೀಕ್ಷೆ, ಅಸಮರ್ಪಕ ಪರಿಹಾರ ವಿತರಣೆ, ಖರೀದಿ ಕೇಂದ್ರಗಳ ಸ್ಥಾಪನೆಯಲ್ಲಿ ವಿಳಂಬ ಮತ್ತು ಖರೀದಿಗೆ ವಿಧಿಸಿರುವ ಮಿತಿ ಸೇರಿದಂತೆ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಬಿಜೆಪಿಯಿಂದ ಟ್ರಾೃಕ್ಟರ್‌ಗಳ ಬೃಹತ್ ಪ್ರತಿಭಟನಾ ರ‌್ಯಾಲಿ ನಡೆಯಿತು.
ಗುರುವಾರ ನಗರ ಹೊರವಲಯದ ಬೆಂಗಳೂರು ಹೆದ್ದಾರಿಯಲ್ಲಿ ಜಮಾಯಿಸಿದ ನೂರಾರು ಕಾರ್ಯಕರ್ತರು ಹಾಗೂ ಹಲವು ಟ್ರಾೃಕ್ಟರ್‌ಗಳು ರ‌್ಯಾಲಿಗೆ ಶಾಸಕ ಜನಾರ್ಧನ ರೆಡ್ಡಿ ಹಾಗೂ ಬಿಜೆಪಿ ರೈತ ಮೋರ್ಚಾದ ರಾಜ್ಯಾಧ್ಯಕ್ಷ ಎ.ಎಸ್. ಪಾಟೀಲ ನಡಹಳ್ಳಿ ಚಾಲನೆ ನೀಡಿದರು. ರ‌್ಯಾಲಿ ಆರಂಭದಲ್ಲೇ ಪೊಲೀಸ್ ಇಲಾಖೆ ಕೆಲವು ನಿರ್ಬಂಧ ವಿಧಿಸಲು ಮುಂದಾದಾಗ ಕಾರ್ಯಕರ್ತರು ಆಕ್ರೋಶ ಹೊರಹಾಕಿದರು. ಅಲ್ಲದೇ, ಕೆಲವೇ ಕೆಲವು ಟ್ರಾೃಕ್ಟರ್‌ಗಳಲ್ಲಿ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ಆರಂಭಿಸಿದರು. ಹಸಿರು ಶಲ್ಯ ಧರಿಸಿ, ಬಿಜೆಪಿ ಬಾವುಟ ಹಿಡಿದ ನೂರಾರು ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಮೊಳಗಿಸಿದರು.
ಟೋಲ್ ನಾಕಾದಿಂದ ಬಬಲೇಶ್ವರ ನಾಕಾ, ಛತ್ರಪತಿ ಶಿವಾಜಿವೃತ್ತ, ಮಹಾತ್ಮ ಗಾಂಧಿ, ಬಸವೇಶ್ವರ ವೃತ್ತದ ಮಾರ್ಗವಾಗಿ ಸುಮಾರು 9 ಕಿಮೀ ಕ್ರಮಿಸಿದ ಟ್ರಾೃಕ್ಟರ್ ರ‌್ಯಾಲಿ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಬಹಿರಂಗ ಸಮಾವೇಶವಾಗಿ ಮಾರ್ಪಟ್ಟಿತು. ರಾಜ್ಯ ಕಾಂಗ್ರೆಸ್ ಸರ್ಕಾರ ರೈತರ ವಿಷಯದಲ್ಲಿ ತೋರಿದ ಬೇಜವಾಬ್ದಾರಿ ಹಾಗೂ ನಿಷ್ಕಾಳಜಿ ಕುರಿತು ಎಳೆಎಳೆಯಾಗಿ ಬಿಚ್ಚಿಟ್ಟ ನಾಯಕರು, ಮುಂಬರುವ ಅಧಿವೇಶನದಲ್ಲಿ ಬೆಳಗಾವಿಯ ಸುವರ್ಣ ಸೌಧ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದರು. ರಾಜ್ಯ ಕಾಂಗ್ರೆಸ್ ಸರ್ಕಾರ ಸತ್ತಿದೆ ಎಂದು ಆರೋಪಿಸಿದರು. ಮೆಕ್ಕೆಜೋಳ, ಈರುಳ್ಳಿ ಹಾಗೂ ತೊಗರಿ ಬೆಳೆ ಬೀದಿಗೆ ಚೆಲ್ಲಿ ಆಕ್ರೋಶ ಹೊರಹಾಕಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ, ಮಾಜಿ ಶಾಸಕ ರಮೇಶ ಭೂಸನೂರ, ವಿಜುಗೌಡ ಪಾಟೀಲ, ಚಂದ್ರಶೇಖರ ಕವಟಗಿ, ಉಮೇಶ ಕಾರಜೋಳ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಬಾಲರಾಜ ರೆಡ್ಡಿ, ಸಾಬು ಮಾಶ್ಯಾಳ, ಸಂಜಯ ಪಾಟೀಲ ಕನಮಡಿ, ಕಾಸುಗೌಡ ಬಿರಾದಾರ, ಸಂದೀಪ ಪಾಟೀಲ, ಡಾ.ಸುರೇಶ ಬಿರಾದಾರ, ಮಹೇಂದ್ರ ನಾಯಕ, ಗೋಪಾಲ ಘಟಕಾಂಬಳೆ, ಮಳುಗೌಡ ಪಾಟೀಲ, ಈರಣ್ಣ ರಾವೂರ, ಸ್ವಪ್ನಾ ಕಣ್ಮುಚನಾಳ, ಸಂಜೀವ ಐಹೊಳ್ಳಿ ಮತ್ತಿತರರಿದ್ದರು.