ಸಿಂದಗಿ ತಾಲೂಕಿನ ಹೊನ್ನಳ್ಳಿಯಿಂದ ಸಲಾದಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹದಗೆಟ್ಟಿರುವುದು. 
ವಿಜಯಪುರ

ಅವಳಿ ರಸ್ತೆಗಿಲ್ಲ ಅಭಿವೃದ್ಧಿ ಭಾಗ್ಯ...!

ಪ್ರಮುಖ ಮುಖ್ಯಾಂಶಗಳು

  • ಹೊನ್ನಳ್ಳಿ - ಸಲಾದಹಳ್ಳಿ ರಸ್ತೆಯುದ್ಧಕ್ಕೂ ತಗ್ಗು-ದಿನ್ನೆ ಕಾಟ
  • ದೊಡ್ಡ ಗುಂಡಿಗಳ ದರ್ಶನ
  • 5 ಕಿ.ಮೀ ರಸ್ತೆ ದಾಟಲು ಅರ್ಧ ಗಂಟೆ
ಮಲ್ಲಿಕಾರ್ಜುನ ಎನ್. ಕೆಂಭಾವಿ, ಬ್ರಹ್ಮದೇವನಮಡು
ಸಿಂದಗಿ ತಾಲೂಕಿನ ಹೊನ್ನಳ್ಳಿಯಿಂದ ಸಲಾದಹಳ್ಳಿ ಗ್ರಾಮಕ್ಕೆ ತಲುಪಲು ರಸ್ತೆಯುದ್ದಕ್ಕೂ ತಗ್ಗು, ದಿನ್ನೆ, ಅಲ್ಲಲ್ಲಿ ದೊಡ್ಡ ಗುಂಡಿಗಳ ದರ್ಶನದಿಂದಾಗಿ 5 ಕಿ.ಮೀ ರಸ್ತೆ ದಾಟಲು ಅರ್ಧ ಗಂಟೆಕ್ಕೂ ಹೆಚ್ಚು ಸಂಚಾರದಿಂದಾಗಿ ಸವಾರರು ಸೊರಗಿ ಹೋಗಿದ್ದಾರೆ. 3 ಕಿ.ಮೀ ರಸ್ತೆ ಸಿಂದಗಿ ಮತಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟಿದ್ದು, ಇನ್ನುಳಿದ 2 ಕಿ.ಮೀ ರಸ್ತೆ ದೇವರಹಿಪ್ಪರಗಿ ಮತಕ್ಷೇತ್ರಕ್ಕೆ ಒಳಪಡುತ್ತಿದೆ. ಅವಳಿ ರಸ್ತೆ ಅಭಿವೃದ್ಧಿ ಯಾವ ಶಾಸಕರು ಮಾಡಬೇಕು ಎಂಬುದು ಗೊಂದಲಕ್ಕೆ ಸಿಲುಕಿದೆ.
ಕಳೆದ ಎರಡು ವರ್ಷಗಳಿಂದ ರಸ್ತೆ ಮೇಲಿನ ಗುಂಡಿ ತಪ್ಪಿಸಲು ಹೋಗಿ ವಾಹನ ಸವಾರರು ಅಪಘಾತಗಳಿಗೆ ತುತ್ತಾಗಿದ್ದಾರೆ. ಗುಂಡಿಗಳನ್ನು ಸರಿಪಡಿಸುವಂತೆ ಜನರು ಅಧಿಕಾರಿ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜವಾಗಿಲ್ಲ. ಈ ಮಾರ್ಗದ ರಸ್ತೆಯಲ್ಲಿ ಸಂಚರಿಸುವ ವಾಹನಗಳ ಸವಾರರು ಸ್ವಲ್ಪ ಎಚ್ಚರ ತಪ್ಪಿದರೂ ಅನಾಹುತ ತಪ್ಪಿದ್ದಲ್ಲ. ರಸ್ತೆ ಸಂಪೂರ್ಣ ಹದಗೆಟ್ಟಿದ್ದರಿಂದ ಬಸ್,ಬೈಕ್, ಆಟೋ, ಕಾರು, ಟ್ರ‍್ಯಾಕ್ಟರ್ ಸೇರಿ ಹಲವು ವಾಹನಗಳ ಸವಾರರಿಗೆ ನುಂಗಲಾರದ ತುತ್ತಾಗಿದೆ.

ರಸ್ತೆ ಸಂಪೂರ್ಣ ಹಾಳಾಗಿದ್ದು, ಮಳೆ ಬಂದರೆ ವಾಹನ ಚಾಲಕರು ಜೀವ ಕೈಯಲ್ಲಿ ಹಿಡಿದು ವಾಹನ ಚಲಾಯಿಸುವಂತಾಗಿದೆ. ಶೀಘ್ರದಲ್ಲಿ ರಸ್ತೆ ದುರಸ್ತಿಗೊಳಿಸಬೇಕು.