ವಿಜಯಪುರ ನಗರದಲ್ಲಿ ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಸುದ್ದಿಗೋಷ್ಠಿ ನಡೆಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮುಖಂಡರಾದ ವಿಜುಗೌಡ ಪಾಟೀಲ, ನವೀನ ಅರಕೇರಿ ಇದ್ದಾರೆ.
- ನೇಮಕಾತಿ ವಿಚಾರದಲ್ಲಿ ಗೊಂದಲ
- ಪರಿಶಿಷ್ಟರ ಮೀಸಲಿಗೆ ಅನ್ಯಾಯ
- ಕಾಂಗ್ರೆಸ್ ಸರ್ಕಾರದಿಂದ ಮೋಸ
ವಿಜಯಪುರ: ಪರಿಶಿಷ್ಟರ ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರ ವಿನಾಕಾರಣ ಗೊಂದಲ ಸೃಷ್ಠಿಸುತ್ತಿದೆ ಎಂದು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಕಿಡಿಕಾರಿದ್ದಾರೆ.
ಪರಿಶಿಷ್ಟ ಜಾತಿಯ ಮೀಸಲಾತಿಯನ್ನು ಶೇ.15ರಿಂದ 17 ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ.3ರಿಂದ 7ಕ್ಕೆ ಹೆಚ್ಚಿಸಿರುವುದರಿಂದ ಒಟ್ಟು ಮೀಸಲಾತಿ ಪ್ರಮಾಣ ಸಹ ಶೇ.50ರಿಂದ ಶೇ.56ಕ್ಕೆ ಹೆಚ್ಚಳವಾಗಿದೆ. ಇದು ವಿಧಾನಸಭೆಯಲ್ಲಿ ಅಂಗೀಕಾರವಾಗಿದೆ. ಇದಕ್ಕೆ ರಾಜ್ಯಪಾಲರು ಸಹ ಅಂಕಿತ ಹಾಕಿದ್ದಾರೆ. ಈಗ ಯಾರೋ ನ್ಯಾಯಾಲಯಕ್ಕೆ ಹೋಗಿದ್ದಾರೆ ಎಂದು ಹೇಳಿ ಮೀಸಲಾತಿ ಹೆಚ್ಚಳವನ್ನು ತಡೆಹಿಡಿಯುವ ಮೂಲಕ ಕಾಂಗ್ರೆಸ್ ಸರ್ಕಾರ ಮೋಸ ಮಾಡುತ್ತಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಹರಿಹಾಯ್ದರು.
ನ್ಯಾ.ನಾಗಮೋಹನದಾಸ್ ವರದಿ ಆಧರಿಸಿ ಈ ಹಿಂದೆಯೇ ಬಸವರಾಜ ಬೊಮ್ಮಾಯಿ ಸರ್ಕಾರ ಒಳಮೀಸಲಾತಿ ಜಾರಿಗೊಳಿಸಿದೆ. ಆದರೆ, ಇದರಿಂದ ಸಂವಿಧಾನದ ಶೇ.50 ರಷ್ಟು ಮೀಸಲಾತಿ ಮೀರಬಾರದು ಎಂಬ ಇಂದಿರಾ ಸಹಾನಿ ಪ್ರಕರಣದ ತೀರ್ಪು ಉಲ್ಲೇಖಿಸಿ ಕೆಲವರು ಕೋರ್ಟ್‌ಗೆ ಹೋಗಿದ್ದಾರೆ. ಹಾಗೆ ಕೋರ್ಟ್‌ಗೆ ಹೋಗಲು ರಾಜ್ಯ ಸರ್ಕಾರವೇ ಕುಮ್ಮಕ್ಕು ನೀಡಿದೆ ಎಂದು ಅವರು ಆಪಾದಿಸಿದ್ದಾರೆ.
ಡಾ.ಬಿ.ಆರ್. ಅಂಬೇಡ್ಕರ್ ಅವರೇ ಜನಸಂಖ್ಯೆ ಅಧಿಕವಾಗಿದ್ದರೆ ಮೀಸಲಾತಿ ಪ್ರಮಾಣ ಏರಿಕೆ ಮಾಡಲು ಸಂವಿಧಾನದಲ್ಲಿ ಅವಕಾಶ ನೀಡಿದ್ದಾರೆ. ಹೀಗಿರುವಾಗ ರಾಜ್ಯ ಸರ್ಕಾರ ಮಾಡುತ್ತಿರುವುದು ಮೋಸವಲ್ಲದೆ ಮತ್ತೇನು? ದೇಶದಲ್ಲಿ ತುಳಿತ ಮತ್ತು ಶೋಷಣೆಗೆ ಒಳಗಾದವರನ್ನು ಮುಖ್ಯವಾಹಿನಿಗೆ ತರಲೆಂದು ನೆಹರು, ಗಾಂಧೀಜಿ, ಅಂಬೇಡ್ಕರ್, ಬಾಬು ಜನಜೀವನ್ ರಾಮ್ ಸೇರಿ ಅನೇಕ ನಾಯಕರು ಮೀಸಲಾತಿ ಸೌಲಭ್ಯ ಒದಗಿಸಿದರು. ಆದರೆ, ಕಾಂಗ್ರೆಸ್ ಸರ್ಕಾರ ನೇಮಕಾತಿ ಕುರಿತು ಆದೇಶದಲ್ಲಿ ಮೀಸಲಾತಿ ಪ್ರಮಾಣವನ್ನು ಶೇ.50ಕ್ಕೆ ನಿಗದಿ ಮಾಡುವ ಮೂಲಕ ದಲಿತ ವಿರೋಧಿ ಮತ್ತು ಸಂವಿಧಾನ ವಿರೋಧಿ ನಡೆ ಅನುಸರಿಸುತ್ತಿದೆ ಎಂದರು.
ಕೋರ್ಟ್‌ಗೆ ಹೋಗಲು ಕುಮ್ಮಕ್ಕು
ಮೀಸಲಾತಿ ಪ್ರಮಾಣ ಶೇ.56ಕ್ಕೆ ಹೆಚ್ಚಳ ಪ್ರಶ್ನಿಸಿ ಯಾವುದೋ ಸಾಮಾನ್ಯ ವರ್ಗದವರು ಕೋರ್ಟ್‌ಗೆ ಹೋಗಿಲ್ಲ. ಬದಲಿಗೆ ಪರಿಶಿಷ್ಟ ಜಾತಿಯ ಚಲವಾದಿ, ಮಾದಿಗ ಸಮುದಾಯದ ತಲಾ ಒಬ್ಬರು ಕೋರ್ಟ್‌ಗೆ ಹೋಗಿದ್ದಾರೆ. ಇವರು ಸಹ ಕಾಂಗ್ರೆಸ್‌ನ ಕುಮ್ಮಕ್ಕಿನಿಂದಲೇ ಅರ್ಜಿ ಹಾಕಿದ್ದಾರೆ. ಮೇಲಾಗಿ ನ್ಯಾಯಾಲಯದಲ್ಲಿ ಮೀಸಲಾತಿ ಪ್ರಮಾಣ ಏರಿಕೆಯ ಬಗ್ಗೆ ಸರ್ಕಾರ ಬದ್ಧತೆಯ ಬಗ್ಗೆ ಹೇಳಿಕೆ ನೀಡಿಲ್ಲ. ಬದಲಾಗಿ ಶೇ.50ರಷ್ಟು ಮೀಸಲಾತಿ ಮೀರುವುದಿಲ್ಲ ಎಂಬ ಹೇಳಿಕೆ ನೀಡಿದೆ. ಇದು ಮೋಸವಲ್ಲದೇ ಮತ್ತೇನು? ಎಂದು ಕಿಡಿಕಾರಿದರು.
ಬೇಕಾಬಿಟ್ಟಿಯಾಗಿ ಹಂಚಿಕೆ
ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿಗಾಗಿ ಕಳೆದ 30 ವರ್ಷಗಳಿಂದ ಹೋರಾಟ ನಡೆಸಲಾಗಿದೆ. ಆದರೆ, ಒಳಮೀಸಲಾತಿ ಕುರಿತ ವಿವಿಧ ವರದಿಗಳನ್ನು ಕಾಂಗ್ರೆಸ್ ಸರ್ಕಾರ ಮುಚ್ಚಿಟ್ಟಿದೆ. ಸಚಿವರಾದ ಡಾ.ಜಿ.ಪರಮೇಶ್ವರ, ಎಚ್.ಸಿ. ಮಹಾದೇವಪ್ಪ, ಆರ್.ಬಿ. ತಿಮ್ಮಾಪುರ, ಕೆ.ಎಚ್. ಮುನಿಯಪ್ಪ, ಪ್ರಿಯಾಂಕ್ ಖರ್ಗೆ ಸೇರಿ ಐವರು ಕೂಡಿಕೊಂಡು ತಾವೇ ಹಂಚಿಕೊಂಡಿದ್ದಾರೆ. ತಮ್ಮ ಪಿತ್ರಾರ್ಜಿತ ಆಸ್ತಿ ಎಂಬಂತೆ ಮನಸೋ ಇಚ್ಛೆಯಂತೆ ಹಂಚಿಕೆ ಮಾಡಿಕೊಂಡಿದ್ದಾರೆ. ಮೀಸಲಾತಿ ಒಂದು ಸಮುದಾಯದ ಸ್ವತ್ತಲ್ಲ. 101 ಜಾತಿಗಳ ಹಿತವನ್ನು ಕಾಪಾಡಬೇಕು ಎಂದು ಕಾರಜೋಳ ಆಗ್ರಹಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮುಖಂಡರಾದ ವಿಜುಗೌಡ ಪಾಟೀಲ, ನವೀನ ಅರಕೇರಿ ಇದ್ದರು.