ವಿಜಯಪುರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಎಸ್.ಎಂ. ಪಾಟೀಲ ಗಣಿಹಾರ ಮಾತನಾಡಿದರು. ಡಾ. ರವಿಕುಮಾರ ಬಿರಾದಾರ, ನಾಗರಾಜ್ ಲಂಬು, ಫಯಾಜ್ ಕಲಾದಗಿ ಮತ್ತಿರರಿದ್ದಾರೆ.
- ಅಹಿಂದ ಮುಖಂಡ ಎಸ್.ಎಂ. ಪಾಟೀಲ ಗಣಿಹಾರ ಅಸಮಾಧಾನ
- ಸುದ್ದಿಗೋಷ್ಠಿ
ವಿಜಯಪುರ: ಎಸ್‌ಐಆರ್ ಪ್ರಕ್ರಿಯೆ ಗೊಂದಲದ ಗೂಡಾಗಿದೆ. ಅಲ್ಲದೆ ಅದೊಂದು ಅವೈಜ್ಞಾನಿಕ, ತರ್ಕವಿಲ್ಲದ ಮತ್ತು ಅಸಂಬದ್ಧ ನಿಯಮಾವಳಿಗಳಿಂದ ನಾಗರಿಕತ್ವ ಪ್ರಶ್ನೆ ಮೂಡುವ ಕೆಲಸ ನಡೆಯುತ್ತಿದೆ. ನಾಗರಿಕನ ನಾಗರಿಕತ್ವ ರದ್ದು ಗೊಳಿಸುವುದು ಒಂದು ರೀತಿ ಮರಣ ಶಾಸನಕ್ಕಿಂತಲೂ ಘೋರವಾಗಿದ್ದು, ಈ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳಬೇಕಿದ್ದ ರಾಜ್ಯ ಸರ್ಕಾರ ಈಗಲೂ ಕಾನೂನಾತ್ಮಕ ಸಲಹೆ ಕೇಳುವುದಾಗಿ ಕಾಲಹರಣ ಮಾಡುತ್ತಿದೆ ಎಂದು ಅಹಿಂದ ಮುಖಂಡ ಎಸ್.ಎಂ. ಪಾಟೀಲ ಗಣಿಹಾರ ಅಸಮಾಧಾನ ವ್ಯಕ್ತಪಡಿಸಿದರು.
ಪಟ್ಟಣದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಎಸ್‌ಐಆರ್ ವಿಷಯವಾಗಿ ಜನಪ್ರತಿನಿಧಿಗಳು ಸಹ ಗಮನ ಹರಿಸುತ್ತಿಲ್ಲ. ಅಲ್ಲದೇ, ಅದರ ಗೊಂದಲಕ್ಕೆ ತೆರೆ ಎಳೆಯುವ ಕೆಲಸ ಸಹ ಮಾಡುತ್ತಿಲ್ಲ. ಈ ವಿಷಯವನ್ನು ಕಾಂಗ್ರೆಸ್ ಸರ್ಕಾರ ಗಂಭೀರವಾಗಿ ಪರಿಗಣಿಸದೇ ಹೋದರೆ ಅವರ ಬುಡಕ್ಕೆ ಬೆಂಕಿ ಬರುವ ದಿನ ದೂರವಿಲ್ಲ ಎಂದರು.
ಎಸ್‌ಐಆರ್ ಗೊಂದಲ ನಿವಾರಣೆ ಮಾಡುವ ಜತೆಗೆ ಅದರ ಬಗ್ಗೆ ಸೂಕ್ತ ಜಾಗೃತಿ ಮೂಡಿಸಿ ಎಸ್‌ಐಆರ್ ಅಸಂಬದ್ಧ ನಿಯಮಗಳ ವಿರುದ್ಧ ಗಮನ ಹರಿಸಬೇಕಾದ ರಾಜ್ಯ ಸರ್ಕಾರ ಈ ವಿಷಯದಲ್ಲಿ ಉದಾಸೀನ ನೀತಿ ಅನುಸರಿಸುತ್ತಿದೆ. ಕೇವಲ ಕಾನೂನಾತ್ಮಕ ಸಲಹೆ ಕೇಳುತ್ತಿದ್ದೇವೆ ಎಂದು ಹೇಳುತ್ತಿದೆ. ಕಾನೂನು ಸಲಹೆ ಪಡೆಯಲು ಇನ್ನೆಷ್ಟ್ಟು ದಿನ ಬೇಕು ಎಂದು ಪಾಟೀಲ ಪ್ರಶ್ನಿಸಿದರು.
ಈ ಹಿಂದೆ ಬೇರೆ ರಾಜ್ಯದಲ್ಲಿ ನಡೆದ ಎಸ್‌ಐಆರ್ ಪ್ರಕ್ರಿಯೆಯಲ್ಲಿ ನೋಬೆಲ್ ಪಾರಿತೋಷಕ ಪುರಸ್ಕೃತರು, ಹೈಕೋರ್ಟ್ ನ್ಯಾಯಮೂರ್ತಿಗಳ ಹೆಸರುಗಳೇ ಮತಪಟ್ಟಿಯಲ್ಲಿ ಮಾಯವಾಗಿರುವಾಗ ಇನ್ನು ಸಾಮಾನ್ಯ ಜನರ ಗತಿಯೇನು? ಎಂದು ಪ್ರಶ್ನಿಸಿದ ಅವರು, ಇದೊಂದು ಹಿಟ್ಲರ್ ರೀತಿ ಸರ್ವಾಧಿಕಾರ ಧೋರಣೆಯ ರೂಪವಾಗಿ ಕೇಂದ್ರ ಸರ್ಕಾರ ಹಿಡನ್ ಅಜೆಂಡಾ ಇರಿಸಿ ಮುಸ್ಲಿಂರ ನಾಗರಿಕತ್ವದ ಮೇಲೆ ಪ್ರಹಾರ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಉತ್ತರ ಕರ್ನಾಟಕ ಭಾಗದಲ್ಲಿ ಹಲವರು ಬೇರೆ ರಾಜ್ಯಗಳಿಗೆ ಗುಳೇ ಹೋಗುತ್ತಾರೆ. ಹೀಗಾಗಿ, ಅನೇಕರು ಮತದಾನದಿಂದ ವಂಚಿತರಾಗುತ್ತಿದ್ದರು. ಎಸ್‌ಐಆರ್ ಪ್ರಕ್ರಿಯೆಯಲ್ಲಿ ವಿಧಿಸಲಾಗಿರುವ ಅನೇಕ ನಿಯಮಾವಳಿಗಳು ತರ್ಕಹೀನವಾಗಿದ್ದು, ಈ ತರ್ಕಹೀನ ನಿಯಮಗಳಿಂದ ಹಲವರು ನಾಗರಿಕತ್ವ ಕಳೆದುಕೊಂಡರೆ ಹೇಗೆ ಎಂಬ ಆತಂಕ ಎದುರಾಗಿದೆ. ಚುನಾವಣಾ ಆಯೋಗಕ್ಕೆ ನಾಗರಿಕತ್ವ ಸಿಂಧುಗೊಳಿಸುವ ಯಾವ ಪರಮಾಧಿಕಾರ ಇಲ್ಲ. ಕೇವಲ ಮತದಾರ ಪಟ್ಟಿ ಸೇರ್ಪಡೆ ಮಾತ್ರ ಚುನಾವಣಾ ಆಯೋಗಕ್ಕೆ ಸೀಮಿತವಾಗಿದೆ. ಈ ಬಗ್ಗೆ ಗಂಭೀರವಾಗಿ ಆತಂಕ ನಿವಾರಿಸುವ ಕೆಲಸ ನಡೆಯಬೇಕಿದೆ ಎಂದು ತಿಳಿಸಿದರು.
ಬಿಜೆಪಿ ಪಕ್ಷದ ಚಿಹ್ನೆ ಚುನಾವಣಾ ಆಯೋಗದ ಲೆಟರ್ ಪ್ಯಾಡ್ ಮೇಲೆ ನಮೂದಾಗಿದೆ, ಇದು ಕಣ್ತಪ್ಪಿ ಆಗಿದೆ ಎಂದು ಒಪ್ಪಿಕೊಂಡರೂ ಸಹ ಚುನಾವಣಾ ಆಯೋಗದಲ್ಲಿ ಬಿಜೆಪಿ ಚಿಹ್ನೆ ಇರಿಸಿಕೊಂಡಿದ್ದು ಏಕೆ? ಇದು ರಾಷ್ಟ್ರ ಮಟ್ಟದಲ್ಲಿ ಉನ್ನತ ತನಿಖೆ ನಡೆಯಬೇಕು ಎಂದು ಅಹಿಂದ ಮುಖಂಡ ಎಸ್.ಎಂ. ಪಾಟೀಲ ಗಣಿಹಾರ ಒತ್ತಾಯಿಸಿದರು.
ಅಹಿಂದ ಮುಖಂಡರಾದ ಡಾ. ರವಿಕುಮಾರ ಬಿರಾದಾರ, ನಾಗರಾಜ್ ಲಂಬು, ಫಯಾಜ್ ಕಲಾದಗಿ, ವಸಂತ ಹೊನಮೊಡೆ ಮತ್ತಿತರರಿದ್ದರು.