ಗೊಳಸಂಗಿ ಸಮೀಪದ ಬುದ್ನಿ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲಾ ಕೋಣೆಗಳ ಮೇಲ್ಛಾವಣಿ ಮಳೆಯಿಂದ ಸೋರಿ ಬೀಳುವ ಹಂತ ತಲುಪಿರುವುದು. 
ವಿಜಯಪುರ

ಸೋರುತಿಹುದು ಬುದ್ನಿ ಶಾಲೆ ಮಾಳಿಗೆ..!

ಪ್ರಮುಖ ಮುಖ್ಯಾಂಶಗಳು

  • ಅಪಾಯದ ಅಂಚಿನಲ್ಲಿ ಮೇಲ್ಛಾವಣಿ ಕಚೇರಿಯಲ್ಲಿಯೇ ತರಗತಿ ಶಾಸಕರಿಗೆ ಗ್ರಾಮಸ್ಥರಿಂದ ಮನವಿ
  • 106 ಮಕ್ಕಳು ಕಲಿಯುತ್ತಿದ್ದಾರೆ.
ಗೊಳಸಂಗಿ: ಸರ್ಕಾರಿ ಶಾಲೆಗಳು ಉಳಿಯಲಿ, ಬೆಳೆಯಲಿ, ನೆರೆಹೊರೆಯ ಸಮಾನ ಶಾಲೆಗಳಾಗಲಿ ಎಂಬ ಕೂಗು ಎಲ್ಲೆಡೆ ಕೇಳಿ ಬರುತ್ತಿದ್ದರೂ ನಿಡಗುಂದಿ ತಾಲೂಕಿನ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡ ಅವಸಾನದ ಹಂತ ತಲುಪಿ ಕೆಲವು ವರ್ಷಗಳೇ ಉರುಳಿರುವುದು ಶೋಚನೀಯ.
ಒಂದರಿಂದ ಏಳನೇ ತರಗತಿ ಇರುವ ಈ ಶಾಲೆಯಲ್ಲಿ 106 ಮಕ್ಕಳು ಕಲಿಯುತ್ತಿದ್ದಾರೆ. ಮಂಜೂರಾತಿ ಪಡೆದ 6 ಶಿಕ್ಷಕರ ಪೈಕಿ ಮುಖ್ಯೋಪಾಧ್ಯಾಯ ಸೇರಿ ಐವರು ಮತ್ತು ಓರ್ವ ಅತಿಥಿ ಶಿಕ್ಷಕರು, ಮೂವರು ಅಡುಗೆ ಸಿಬ್ಬಂದಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ.
ಕಾರ್ಯಾಲಯ, ತರಗತಿ ಕೊಠಡಿಗಳು, ಅಡುಗೆ ಕೋಣೆ ಎಲ್ಲ ಸೇರಿ ಒಟ್ಟು ಐದು ಕೋಣೆಗಳು ಮಾತ್ರ ಲಭ್ಯವಿದೆ. ಅಡುಗೆ ಕೋಣೆ ಹೊರತುಪಡಿಸಿ ಬಾಕಿ ನಾಲ್ಕು ಕೋಣೆಯಲ್ಲಿ ಕಾರ್ಯಾಲಯ ಸೇರಿ ಏಳು ತರಗತಿಗಳನ್ನು ನಡೆಸುವಲ್ಲಿ ಶಿಕ್ಷಕರು ಹರಸಾಹಸ ಪಡುವಂತಾಗಿದೆ.
ಆರಂಭಿಕ ಹಂತದ 1968ರಲ್ಲಿ ಒಂದು ಕೋಣೆಯಲ್ಲಿ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯಾಗಿ ಚಾಲನೆ ಪಡೆದು ಹಲವು ದಶಕಗಳ ನಂತರ 2005-06ರಲ್ಲಿ ಹಿರಿಯ ಹಿರಿಯ ಪ್ರಾಥಮಿಕ ಶಾಲೆಯಾಗಿ ಬಡ್ತಿ ಪಡೆಯಿತು.
ಬಳಿಕ ಅಡುಗೆ ಕೋಣೆ ಸೇರಿ ಹಂತ ಹಂತವಾಗಿ 4 ಕೋಣೆಗಳು ನಿರ್ಮಾಣಗೊಂಡಿದ್ದರೂ ಕೆಲವೇ ವರ್ಷಗಳಲ್ಲಿ ಮೇಲ್ಛಾವಣಿ ಸೋರಿ ಬೀಳುವಂತ ದುಸ್ಥಿತಿ ಎದುರಾಗಿದೆ.
ಹೊಸ ಕೋಣೆಗಳ ನಿರ್ಮಾಣಕ್ಕೆ ಶಾಸಕ ಶಿವಾನಂದ ಪಾಟೀಲರ ಆದಿಯಾಗಿ ಇಲಾಖೆಯ ಮುಖ್ಯಸ್ಥರಿಗೆ 2-3 ಬಾರಿ ಮನವಿ ಮಾಡಿಕೊಳ್ಳಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಗ್ರಾಮಸ್ಥರು.
ಏತನ್ಮಧ್ಯೆ ಜು. 21ರಂದು ಮತ್ತೆ ಶಾಸಕ ಶಿವಾನಂದ ಪಾಟೀಲರಿಗೆ ಬುದ್ನಿ ಗ್ರಾಮದ ಪ್ರಮುಖರು ಸೇರಿ ಅವಸಾನದ ಅಂಚಿನಲ್ಲಿರುವ ಬುದ್ನಿ ಗ್ರಾಮದ ಸರ್ಕಾರಿ ಶಾಲಾ ಕಟ್ಟಡಕ್ಕೆ ಮರುಜನ್ಮ ನೀಡಬೇಕೆಂದು ಒತ್ತಾಯಿಸಿದ್ದಾರೆ.
"

ಬುದ್ನಿ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಅಡುಗೆ ಕೋಣೆ ಹೊರತುಪಡಿಸಿ ಬಾಕಿ ಇರುವ 4 ಕೋಣೆಯಲ್ಲಿ ಕಾರ್ಯಾಲಯವೂ ಸೇರಿ 7 ತರಗತಿವರೆಗೆ 106 ಮಕ್ಕಳು ಅಕ್ಷರಾಭ್ಯಾಸ ಮಾಡುತ್ತಿದ್ದಾರೆ. ಇವುಗಳಲ್ಲಿ ಭಾಗಶಃ ಕೋಣೆಗಳ ಮೇಲ್ಛಾವಣಿ ಹಲವು ವರ್ಷಗಳಿಂದ ಸೋರಿ ಯಾವುದೇ ಕ್ಷಣದಲ್ಲಿ ಬೀಳುವ ಆತಂಕ ಮನೆ ಮಾಡಿದೆ. ಸಂಬಂಧಪಟ್ಟವರಿಗೆ ನಮ್ಮ ಎಸ್‌ಡಿಎಂಸಿಯವರು, ಗ್ರಾಮದ ಪ್ರಮುಖರು ಮನವಿ ಮಾಡಿಕೊಂಡಿದ್ದರೂ ಪ್ರಯೋಜನವಾಗಿಲ್ಲ. ಈಗಲಾದರೂ ಸರ್ಕಾರಿ ಶಾಲೆಯ ಬಡ ಮಕ್ಕಳ ಮೇಲೆ ಕಾಳಜಿ ತೋರಿ ನೂತನ ಕೋಣೆಗಳನ್ನು ನಿರ್ಮಿಸಬೇಕಿದೆ.

ಸರಸ್ವತಿ ಮಾದರ ಎಸ್‌ಡಿಎಂಸಿ ಅಧ್ಯಕ್ಷರು.