ವಿಜಯಪುರ ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಹಸಿರು ಕ್ರಾಂತಿ ಹರಿಕಾರ ಡಾ. ಬಾಬು ಜಗಜೀವನ ರಾಂ ಅವರ ಜಯಂತಿ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಡಾ. ಆನಂದ ಕೆ., ರಿಷಿ ಆನಂದ, ವಿಠಲ ಕಟಕಧೋಂಡ ಮತ್ತಿತರರಿದ್ದಾರೆ.
- ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ ಹೇಳಿಕೆ
- ಜಿಲ್ಲಾಡಳಿತದಿಂದ ಆಚರಣೆ
ವಿಜಯಪುರ: ಡಾ. ಬಾಬು ಜಗಜೀವನ ರಾಮ್ ಅವರು ಕೃಷಿ ಕ್ಷೇತ್ರದಲ್ಲಿ ವಿನೂತನ ಆವಿಷ್ಕಾರಗೈದು, ಕೃಷಿ ಪದ್ಧತಿಗಳಲ್ಲಿ ಆಧುನಿಕತೆ ಬಳಸಿ ಕೃಷಿ ಉತ್ಪನ್ನಗಳ ಉತ್ಪಾದನೆ ಹೆಚ್ಚಿಸುವ ಜತೆಗೆ ದೇಶದ ಆಹಾರ ಭದ್ರತೆಗೆ ನಾಂದಿ ಹಾಡಿದ ಮಹಾನ್ ಚಿಂತಕರು ಮತ್ತು ಹಸಿರು ಕ್ರಾಂತಿಯ ಹರಿಕಾರರಾಗಿದ್ದರು ಎಂದು ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ ಹೇಳಿದರು.
ಜಿಲ್ಲಾಡಳಿತ, ಜಿ.ಪಂ. ಹಾಗೂ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಗಳ ಸಹಯೋಗದಲ್ಲಿ ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹಸಿರು ಕ್ರಾಂತಿ ಹರಿಕಾರ, ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನ ರಾಮ್ ಅವರ 119ನೇ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ದೇಶ ಅಭಿವೃದ್ದಿಗೆ ಕೊಡುಗೆ ನೀಡಿದ ಮಹನೀಯರನ್ನು ನಾವು ನಿತ್ಯ ಸ್ಮರಿಸಬೇಕು. ಅಂದಾಗಲೇ ಅವರ ಚಿಂತನೆಗಳು ಸಾಕಾರಗೊಳ್ಳುತ್ತವೆ. ಶೋಷಿತರ ಸಮಸ್ಯೆ, ಅನ್ಯಾಯಗಳ ವಿರುದ್ಧ ಹಾಗೂ ಸಮ ಸಮಾಜಕ್ಕಾಗಿ ಹೋರಾಡಿದ ಡಾ. ಬಾಬಾಸಾಹೇಬ ಅಂಬೇಡ್ಕರ್ ಹಾಗೂ ಡಾ. ಬಾಬು ಜಗಜೀವನ ರಾಮ್ ಅವರು ನಮ್ಮ ದೇಶದ ಎರಡು ಕಣ್ಣುಗಳಿದ್ದಂತೆ ಎಂದರು.
ಡಾ. ಬಾಬು ಜಗಜೀವನ ರಾಂ ಅವರು ರಕ್ಷಣಾ ಮಂತ್ರಿಗಳಾಗಿ ದೇಶದ ರಕ್ಷಣೆಗೆ ಮಹತ್ವದ ಕಾಯಿದೆಗಳನ್ನು ಜಾರಿಗೆ ತಂದರು. ಕೃಷಿ ಸಚಿವರಾಗಿ ಕೃಷಿ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ತಂದು ಆಹಾರ ಉತ್ಪಾದನೆಯಲ್ಲಿ ಗಣನೀಯ ಹೆಚ್ಚಳ ಮಾಡಿ, ದೇಶದ ಆರ್ಥಿಕತೆಗೆ ಮತ್ತಷ್ಟು ಶಕ್ತಿ ತುಂಬಿ ಹಸಿರು ಕ್ರಾಂತಿಯ ಯಶಸ್ವಿಗೆ ಕಾರಣೀಕರ್ತರಾದರು ಎಂದು ಬಣ್ಣಿಸಿದರಲ್ಲದೇ, ಅವರ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ. ಆನಂದ ಕೆ. ಮಾತನಾಡಿ, ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನರಾಮ್ ಅವರ ಬದುಕೇ ಆದರ್ಶವಾಗಿದೆ ಎಂದರು.
ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿಯ ನಿರ್ದೇಶಕಿ ಲಕ್ಷ್ಮೀದೇವಿ ವೈ. ಉಪನ್ಯಾಸ ಡಾ. ಜಗಜೀವನರಾಂ ಅವರು ಪ್ರಬುದ್ಧ ರಾಜನೀತಿಜ್ಞ ಆಗಿದ್ದರು. ಜತೆಗೆ ಅವರು ಬದುಕು ಆದರ್ಶ. ಅವರ ಜೀವನವೇ ನಮಗೆಲ್ಲ ದಾರಿ ದೀಪವಾಗಿದೆ. ಈ ದೇಶದ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಹಾಗೂ ರಾಜಕೀಯ ಸ್ಥಿತಿಗತಿ ಸುಧಾರಣೆಗೆ ಡಾ. ಬಾಬು ಜೀವನರಾಮ್ ಅಪಾರವಾಗಿ ಶ್ರಮಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಸಂವಿಧಾನ ಪೀಠಿಕೆ ಬೋಧಿಸಲಾಯಿತು. ಶಾಸಕ ವಿಠಲ ಕಟಕಧೋಂಡ, ಜಿ.ಪಂ. ಸಿಇಒ ರಿಷಿ ಆನಂದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಉಪ ವಿಭಾಗಾಧಿಕಾರಿ ಗುರುನಾಥ ದಡ್ಡೆ, ಪಾಲಿಕೆಯ ಆಯುಕ್ತ ವಿಜಯ ಮೆಕ್ಕಳಕಿ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಹೇಶ ಪೋತದಾರ, ಸಮಾಜ ಮುಖಂಡರಾದ ಅಡಿವೆಪ್ಪ ಸಾಲಗಲ್, ಭೀಮರಾಯ ಜಿಗಜಿಣಗಿ, ಶ್ರೀನಿವಾಸ ಶಹಾಪೂರ, ಪರಶುರಾಮ ರೋಣಿಹಾಳ ಮತ್ತಿತರರಿದ್ದರು.
ಭವ್ಯ ಮೆರವಣಿಗೆ : ಕಾರ್ಯಕ್ರಮಕ್ಕೂ ಮುನ್ನ ನಗರದ ಶ್ರೀ ಬಾಬು ಜಗಜೀವನರಾಂ ವೃತ್ತದಿಂದ ಮಹನೀಯರ ಭಾವಚಿತ್ರದ ಮೆರವಣಿಗೆ ನಡೆಯಿತು. ವಿವಿಧ ಕಲಾತಂಡಗಳ ಭಾಗವಹಿಸಿದ್ದವು.