ವಿಜಯಪುರದ ವೀರಶೈವ ಲಿಂಗಾಯತ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಮಾಸಿಕ ಶಿವಾನುಭವ ಗೋಷ್ಠಿಯಲ್ಲಿ ಉಪನ್ಯಾಸಕಿ ಶಿಲ್ಪಾ ಭಸ್ಮೆ ಅವರನ್ನು ಪುಸ್ತಕ ನೀಡಿ ಗೌರವಿಸಲಾಯಿತು. ವಿ.ಸಿ. ನಾಗಠಾಣ, ಸಂಗಮೇಶ ಬಾದಾಮಿ ಮತ್ತಿತರರಿದ್ದಾರೆ.
ವಿಜಯವಾಣಿ ಸುದ್ದಿಜಾಲ ವಿಜಯಪುರ
೧೨ನೇ ಶತಮಾನದ ಬಸವಾದಿ ಶರಣ ಶಿವನ ಭಕ್ತರಾದ ರಾಮಯ್ಯನವರು ಸತ್ಯ, ಶುದ್ಧ, ಕಾಯಕದೊಂದಿಗೆ ನಿರಾಳ ವ್ಯಕ್ತಿತ್ವ ಕಾಯಕ ನಿಷ್ಠೆ ಶಿವನ ಕುರಿತು ಧ್ಯಾನಸ್ತರಾಗಿ ಏಕಾಂತದಲ್ಲಿ ತಲ್ಲಿನರಾಗಿ ಶಿವನನ್ನು ಒಲಿಸಿಕೊಂಡವರು. ಅವರದು ಭ್ರಮರೇಶ್ವರ ದೇವರ ಗುಪ್ತ ಭಕ್ತಿ ಕಾಯಕ ತತ್ವ ತಿಳಿಸುತ್ತ ಜನರ ಜೀವನವನ್ನು ಪಾವನಗೊಳಿಸಿ ಭಕ್ತರನ್ನು ಮುಕ್ತರನ್ನಾಗಿ ಮಾಡಿದರು. ಭೌತಿಕ, ಆಧ್ಯಾತ್ಮಿಕ ಸತ್ಯ ತತ್ವಗಳನ್ನು ಜಗತ್ತಿಗೆ ನೀಡಿದ ಮಹಾತ್ಮರು ಎಂದು ಉಪನ್ಯಾಸಕಿ ಶಿಲ್ಪಾ ಭಸ್ಮೆ ಹೇಳಿದರು.
ನಗರದ ವೀರಶೈವ ಲಿಂಗಾಯತ ಸಭಾಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ೭೬ನೇ ಮಾಸಿಕ ಶಿವಾನುಭವ ಗೋಷ್ಠಿಯಲ್ಲಿ ಶರಣ ಏಕಾಂತ ರಾಮಯ್ಯನವರ ಅನುಭಾವ ಕುರಿತು ಅವರು ಉಪನ್ಯಾಸ ನೀಡಿದರು.
ಏಕಾಂತ ರಾಮಯ್ಯನವರು ಎನ್ನಅಯ್ಯ ಚನ್ನರಾಮೇಶ್ವರ ಎಂಬ ಅಂಕಿತ ನಾಮದಲ್ಲಿ ರಚಿಸಿದ ೧೦ ವಚನಗಳು ಸದ್ಯ ಲಭ್ಯವಾಗಿವೆ. ಅವೆಲ್ಲವೂ ಶಿವನ ಧ್ಯಾನ, ಕಾಯಕತತ್ವ ನಿಷ್ಠೆಗೆ ಸಂಬಂಧಪಟ್ಟದ್ದಾಗಿವೆ ಎಂದು ತಿಳಿಸಿದರು.
ಮಹಾಸಭೆಯ ಜಿಲ್ಲಾಧ್ಯಕ್ಷ ವಿ.ಸಿ. ನಾಗಠಾಣ ಮಾತನಾಡಿ, ಏಕಾಂತ ರಾಮಯ್ಯನವರು ಸೋಮನಾಥನ ವರಪ್ರಸಾದದಿಂದ ಜನಿಸಿದರು. ಸದಾಕಾಲ ಶಿವನ ಸಮ್ಮುಖದಲ್ಲಿ ಧ್ಯಾನಸ್ತರಾಗಿರುತ್ತಿದ್ದರು. ಹೀಗಾಗಿ ಅವರಿಗೆ ಏಕಾಂತ ರಾಮಯ್ಯ ಎಂದು ಕರೆಯುತ್ತಿದ್ದರು ಎಂದರು.
ಜ್ಯೋತಿ ಬಾಗಲಕೋಟ, ವಿ.ಡಿ. ಐಹೊಳ್ಳಿ, ಕಾಶಿನಾಥ ಅಣೆಪ್ಪನವರ, ನಿವೃತ್ತ ಎಎಸ್‌ಐ ಪಟ್ಟಣಶೆಟ್ಟಿ, ಎಸ್.ಎನ್. ಶಿವಣಗಿ, ಸುಭಾಸ ಬೆಟಗೇರಿ, ಮಲ್ಲಿಕಾರ್ಜುನ ಅಮರಣ್ಣವರ, ಮಹಾದೇವ ಹಾಲಳ್ಳಿ, ಜಗದೀಶ ಮೋಟಗಿ ಮತ್ತಿತರರಿದ್ದರು.
ಅಪ್ಪಾಸಾಹೇಬ ಕೋರಿ ವಚನಗೀತೆ ಪ್ರಸ್ತುತ ಪಡಿಸಿದರು. ಬಿ.ಟಿ. ಈಶ್ವರಗೊಂಡ ಸ್ವಾಗತಿಸಿದರು. ಸಾಹಿತಿ ಸಂಗಮೇಶ ಬಾದಾಮಿ ನಿರೂಪಿಸಿದರು. ಸಹದೇವ ನಾಡಗೌಡರ ವಂದಿಸಿದರು.