ದೇವರಹಿಪ್ಪರಗಿಯಲ್ಲಿ ನಡೆದ ಬ್ಲಾಕ್‌ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ. ಪಾಟೀಲ ಮಾತನಾಡಿದರು. ಡಾ. ಪ್ರಭುಗೌಡ ಲಿಂಗದಳ್ಳಿ, ಶರಣಪ್ಪ ಸುಣಗಾರ, ಸುಭಾಷ ಛಾಯಾಗೋಳ, ಬಿ.ಎಸ್. ಪಾಟೀಲ ಯಾಳಗಿ ಮತ್ತಿತರರಿದ್ದರು.
- ಸಚಿವ ಡಾ. ಎಂ.ಬಿ. ಪಾಟೀಲ ಅಭಿಮತ
- ಮುಂದಿನ ಚುನಾವಣೆ ಗೆಲ್ಲಲು ಭರ್ಜರಿ ಪ್ಲ್ಯಾನ್
ದೇವರಹಿಪ್ಪರಗಿ : ಇಡೀ ಜಿಲ್ಲೆಯ ಎಂಟು ಮತಕ್ಷೇತ್ರದಲ್ಲಿ ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಪ್ರಬಲವಾಗಿದ್ದು, ಇದಕ್ಕೆ ಕಾರಣ ಬಲಿಷ್ಠ ಕಾರ್ಯಕರ್ತರ ಪಡೆ ಇಲ್ಲಿದೆ. ಹಿಂದಿನದೆಲ್ಲ ಮರೆತು ಮುಂಬರುವ ಚುನಾವಣೆ ಗೆಲ್ಲಲು ಭರ್ಜರಿ ಪ್ಲ್ಯಾನ್ ಮಾಡಿಕೊಳ್ಳಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ. ಪಾಟೀಲ ಹೇಳಿದರು.
ಪಟ್ಟಣದ ಪರದೇಶಿ ಮಠದಲ್ಲಿ ಶನಿವಾರ ಹಮ್ಮಿಕೊಂಡ ದೇವರಹಿಪ್ಪರಗಿ ಬ್ಲಾಕ್ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇವರಹಿಪ್ಪರಗಿ ಹಾಗೂ ವಿಜಯಪುರ ನಗರದಲ್ಲಿ ನಮ್ಮ ಪಕ್ಷದ ಶಾಸಕರಿಲ್ಲ ಎಂಬ ಕೊರಗಿದೆ. ಮುಂದಿನ ಸಲ ಎರಡು ಕ್ಷೇತ್ರಗಳನ್ನು ನಾನೇ ಜವಾಬ್ದಾರಿ ತೆಗೆದುಕೊಂಡು ಎಲ್ಲ ಕಾಂಗ್ರೆಸ್ ಶಾಸಕರ ಸಹಕಾರದೊಂದಿಗೆ ಜಿಲ್ಲೆಯಲ್ಲಿ 8 ಕಡೆ ಗೆಲ್ಲಲು ಶ್ರಮಿಸುತ್ತೇವೆ ಎಂದರು.
ಪಕ್ಷದ ಶಾಸಕರಿಲ್ಲದೆ ಕಾರ್ಯಕರ್ತರ ಕೆಲಸವಾಗುವಲ್ಲಿ ವಿಳಂಬವಾಗುತ್ತದೆ. ಅದಕ್ಕಾಗಿ ಶತಾಯಗತಾಯ ಗೆಲ್ಲುವ ಪಣ ತೊಡಬೇಕು. ಕಾಂಗ್ರೆಸ್ ನೇತತ್ವದ ಸರ್ಕಾರ ತಂದ ಗ್ಯಾರಂಟಿ ಯೋಜನೆ ಮನೆ ಮನೆಗೆ ತಲುಪಿಸುವ ಕಾರ್ಯ ಮಾಡಬೇಕು. ಮುಂಬರುವ ದಿನಗಳಲ್ಲಿ ಎಲ್ಲ ಚುನಾವಣೆಯನ್ನು ನಿಷ್ಠೆಯಿಂದ ಪಕ್ಷದ ಕಾಂಗ್ರೆಸ್ ಗೆಲುವಿಗಾಗಿ ಶ್ರಮಿಸಬೇಕು. ವೈಯಕ್ತಿಕ ವಿಚಾರಗಳಿಗೆ ಯಾರೂ ಕಿವಿಗೊಡಬಾರದು. ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿಗಳು ಹೆಚ್ಚಾಗಿದ್ದು, ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ಪ್ರತಿಯೊಬ್ಬರು ಬದ್ಧರಾಗಿರಬೇಕೆಂದು ಕಿವಿಮಾತು ಹೇಳಿದರು.
ಕೆಪಿಸಿಸಿ ರಾಜ್ಯ ಪ್ರಧಾನಕಾರ್ಯದರ್ಶಿ ಡಾ. ಪ್ರಭುಗೌಡ ಲಿಂಗದಳ್ಳಿ ಮಾತನಾಡಿ ಮುಂಬರುವ ಚುನಾವಣೆಗಳಲ್ಲಿ ಡಾ. ಎಂ.ಬಿ. ಪಾಟೀಲರ ಮಾರ್ಗದರ್ಶನದಲ್ಲಿ ಉತ್ತಮ ಸಂಘಟನೆಮಾಡಿ ಪಕ್ಷ ಕಟ್ಟುವ ಕಾರ್ಯ ಮಾಡೋಣ ಕ್ಷೇತ್ರದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ತರುವಲ್ಲಿ ಶ್ರಮಿಸೋಣ ಎಂದರು.
ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದಗೌಡ ದೊಡ್ಡಮನಿ ಮಾತನಾಡಿ, ವ್ಯಕ್ತಿ ನಿಷ್ಠೆಗಿಂತ ಪಕ್ಷ ನಿಷ್ಠೆ ಪ್ರಮುಖವಾಗಿದ್ದು, ಕಾಂಗ್ರೆಸ್ ಬಲ ಪಡಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸೋಣ, ಪಕ್ಷ ನೀಡಿದ ಜವಾಬ್ದಾರಿಯನ್ನು ನಿಭಾಯಿಸಿ ಮುಂಬರುವ ತಾಪಂ, ಜಿಪಂ ಚುನಾವಣೆಗಳಲ್ಲಿ ಪ್ರತಿಷ್ಠೆಯಾಗಿ ಸ್ವೀಕರಿಸಿ ಎಲ್ಲ ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸುವ ನಿಟ್ಟಿನಲ್ಲಿ ಶ್ರಮಿಸೋಣ ಎಂದರು.
ಮಾಜಿ ಶಾಸಕ ಶರಣಪ್ಪ ಸುಣಗಾರ, ಗಡಿ ಅಭಿವದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸುಭಾಷ ಛಾಯಾಗೋಳ, ಕೆಪಿಸಿಸಿ ಸದಸ್ಯ ಬಿ.ಎಸ್. ಪಾಟೀಲ ಯಾಳಗಿ, ಜಿಪಂ ಮಾಜಿ ಸದಸ್ಯೆ ಗೌರಮ್ಮ ಮುತ್ತತ್ತಿ, ಬ್ಲಾಕ್ ಅಧ್ಯಕ್ಷ ಬಸೀರ ಅಹಮ್ಮದ ಬೇಪಾರಿ, ಬಾಳನಗೌಡ ಪಾಟೀಲ, ಅಶೋಕಗೌಡ ಪಾಟೀಲ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಮೀಜಾ ನದಾ, ಸಂಗಮೇಶ ಛಾಯಾಗೊಳ ಮತ್ತಿತರರಿದ್ದರು.