ಹಾವಿನಾಳ ಗ್ರಾಮದ ಚರಮೂರ್ತಿ ಮಠದ ಪೀಟಾಧ್ಯಕ್ಷ ಗುರು ವಿಜಯ ಮಹಾಂತೇಶ್ವರ ಶಿವಾಚಾರ್ಯರ ದ್ವಾದಶ ಪಟ್ಟಾಽಕಾರ, ವರ್ಧಂತಿ ಮಹೋತ್ಸವ, ತುಲಾಭಾರ ಮತ್ತು ಪುರಾಣ ಮಹಾಮಂಗಲ ಸಮಾರಂಭದ ನಿಮಿತ್ತ ಹಮ್ಮಿಕೊಂಡಿದ್ದ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ರಂಭಾಪುರಿ ಜಗದ್ಗುರುಗಳು ಆಶೀರ್ವಚನ ನೀಡಿದರು.
ಮಾನವ ಜೀವನದ ಉನ್ನತಿಗೆ ಮತ್ತು ಶ್ರೇಯಸ್ಸಿಗೆ ಧರ್ಮ ಮುಖ್ಯವಾಗಿದ್ದು, `ತಾನು ಎಲ್ಲರಿಗಾಗಿ' ಅನ್ನುವುದೇ ನಿಜವಾದ ಧರ್ಮ ಎಂದು ಬಾಳೆಹೊನ್ನೂರು ರಂಭಾಪುರಿ ಮಠದ ಡಾ. ಶ್ರೀ ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ಹಾವಿನಾಳ ಗ್ರಾಮದ ಚರಮೂರ್ತಿ ಮಠದ ಪೀಠಾಧ್ಯಕ್ಷ ಶ್ರೀ ಗುರು ವಿಜಯ ಮಹಾಂತೇಶ್ವರ ಶಿವಾಚಾರ್ಯರ ದ್ವಾದಶ ಪಟ್ಟಾಧಿಕಾರ ವರ್ಧಂತಿ ಮಹೋತ್ಸವ, ತುಲಾಭಾರ ಮತ್ತು ಪುರಾಣ ಮಹಾಮಂಗಲ ಸಮಾರಂಭದ ನಿಮಿತ್ತ ಹಮ್ಮಿಕೊಂಡಿದ್ದ ಶ್ರೀ ಜಗದ್ಗುರು ಪಂಚ ಪೀಠಾದೀಶ್ವರ ಅಡ್ಡಪಲ್ಲಕ್ಕಿ ಮಹೋತ್ಸವ, ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಭಾರತ ಪುಣ್ಯಭೂಮಿಯಲ್ಲಿ ಅನೇಕ ಧರ್ಮಗಳಿವೆ. ಅವುಗಳೆಲ್ಲ ಮಾನವೀಯ ಮೌಲ್ಯಗಳನ್ನು ಉತ್ತಮ ಸರಿದಾರಿಯಲ್ಲಿರಿಸಿ ಜನಮನಕ್ಕೆ ಬೆಳಕನ್ನು ನೀಡಿ ಉದ್ಧರಿಸಿವೆ. ವೀರಶೈವ ಧರ್ಮ ಸನಾತನ ಧರ್ಮ. ಶಿವನ ಪಂಚಮುಖಗಳಿಂದ ಅವತರಿಸಿ, ಶಿವನ ಅಪ್ಪಣೆಯ ಅನುಸಾರ ಭುವಿಯಲ್ಲಿ ಸುಪ್ರಸಿದ್ಧ ಲಿಂಗಗಳಲ್ಲಿ ಉದಯಿಸಿದ ಶ್ರೀ ಜಗದ್ಗುರು ರೇಣುಕಾಚಾರ್ಯರು ವೀರಶೈವ ಧರ್ಮವನ್ನು ಸ್ಥಾಪನೆ ಮಾಡಿ, ಪಂಚ ಪೀಠಗಳನ್ನು ಕಟ್ಟಿ ಶಿವಾದ್ವಿತ ಸಿದ್ಧಾಂತವನ್ನು ಸ್ಥಿರಗೊಳಿಸಿ, ಇಷ್ಟಲಿಂಗದೀಕ್ಷೆ ಸರ್ವಮಾನ್ಯಗೊಳಿಸಿದ್ದಾರೆ. ತತ್ವವನ್ನು ಅರಿತವನಿಗೆ ಸತ್ಯದ ಬೆಳಕು ಗೋಚರವಾಗುತ್ತದೆ. ಮಾನವ ಧರ್ಮ ಪರಿಪಾಲನೆಯಿಂದ ಎಲ್ಲ ಧರ್ಮಗಳು ಉಳಿದು ಬೆಳೆಯಲು ಸಾಧ್ಯವಿದ್ದು ಜಗತ್ಕಲ್ಯಾಣಕ್ಕೆ ಮಾನವ ಧರ್ಮ ಪರಿಪಾಲನೆ ಅವಶ್ಯಕವಾಗಿದೆ ಎಂದು ಹೇಳಿದರು.
ಜಾತಿ- ಜನಾಂಗಗಳ ಗಡಿ ಮೀರಿ ವಿಶ್ವ ಬಂಧುತ್ವ ಸಾರಿದ ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ದಶಧರ್ಮ ಸೂತ್ರಗಳು ಸಕಲರಿಗೂ ಹಿತಕಾರಿ, ವೈಚಾರಿಕತೆ ಹೆಸರಿನಲ್ಲಿ ಭಾರತೀಯ ಉತ್ಕೃಷ್ಟ ಸಂಸ್ಕೃತಿ ನಾಶಗೊಳ್ಳಬಾರದು. ವೀರಶೈವ ಧರ್ಮದ ರಾಷ್ಟ್ರೀಯ ಗುರುಪೀಠಗಳೆಂದು ಪ್ರಖ್ಯಾತಿ ಪಡೆದ ಪಂಚಪೀಠಗಳು ಸಾಮರಸ್ಯ ಸೌಹಾರ್ದತೆ ಬೆಳೆಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಾ ಬಂದಿವೆ. ಹಾವಿನಾಳ ಗ್ರಾಮದ ಚರಮೂರ್ತಿ ಮಠ ವಿಶಾಲ ಸ್ಥಳ ಹೊಂದಿದ್ದು, ಇಲ್ಲಿ ಗುರುಕುಲ ತೆರೆದರೆ ಈ ಭಾಗದ ವಿದ್ಯಾರ್ಥಿಗಳಿಗೆ ಒಳ್ಳೆಯ ಶಿಕ್ಷಣ ನೀಡಬಹುದು ಇಲ್ಲಿ ಗುರುಕುಲ ತೆರೆಯುವುದಾದರೆ ಬಾಳೆಹೊನ್ನೂರಿನ ರಂಭಾಪುರಿ ಪೀಠದಿಂದ ಒಂದು ಲಕ್ಷ ರೂ. ನೀಡುವುದಾಗಿ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಹತ್ತಳ್ಳಿ-ಹಾವಿನಾಳ ಮಠದ ಶ್ರೀ ಗುರುಪಾದೇಶ್ವರ ಶಿವಾಚಾರ್ಯರು ಮಾತನಾಡಿ, ನಮ್ಮ ಬದುಕು ಇನ್ನೊಬ್ಬರಿಗೆ ಮಾದರಿಯಾಗಬೇಕಲ್ಲದೆ ಮಾರಕವಾಗಬಾರದು. ವಿಜ್ಞಾನ- ತಂತ್ರಜ್ಞಾನ ಬೆಳೆದಂತೆ ಮನುಷ್ಯನ ಭಾವನೆಗಳು ಬೆಳೆಯುತ್ತಿಲ್ಲ. ಪೂರ್ವಜರ ಅನುಭವದ ನುಡಿಗಳು ಬದುಕಿ ಬಾಳುವ ಜನಾಂಗಕ್ಕೆ ಆಶಾಕಿರಣ. ಪುಟ ಪುಸ್ತಕ ಬದಲಿಸಬಹುದು. ಆದರೆ ಇತಿಹಾಸವನ್ನು ಬದಲಿಸಲು ಯಾರಿಂದಲೂ ಸಾಧ್ಯವಾಗದು ಎಂದರು.
ಹಾವಿನಾಳದ ಚರಮೂರ್ತಿ ಮಠದ ಶ್ರೀ ವಿಜಯಮಹಾಂತೇಶ್ವರ ಶಿವಾಚರ್ಯರು ನೇತೃತ್ವ ವಹಿಸಿದ್ದರು.
ಸಾನ್ನಿಧ್ಯ ವಹಿಸಿದ್ದ ಚಿಟಗುಪ್ಪಾದ ಗುರುಲಿಂಗ ಶಿವಾಚಾರ್ಯರು, ಹಿರೂರ-ತಾಳಿಕೋಟೆ ಹಿರೇಮಠದ ಜಯಸಿದ್ಧೇಶ್ವರ ಶಿವಾಚಾರ್ಯರು, ಆಲಮೇಲದ ಚಂದ್ರಶೇಖರ ಶಿವಾಚಾರ್ಯರು, ತಡವಲಗಾದ ರಾಚೋಟೇಶ್ವರ ಶಿವಾಚಾರ್ಯರು, ರಾಣೆಬೆನ್ನೂರದ ಶಿವಯೋಗಿ ಶಿವಾಚಾರ್ಯರು, ಗುಡ್ಡಾಪೂರದ ಗುರುಪಾದ ಶಿವಾಚಾರ್ಯರು ಆಶೀರ್ವಚನ ನೀಡಿದರು.
ನಿವೃತ್ತ ಪ್ರಾಚಾರ್ಯ ಎಸ್.ಕೆ. ಕುಲಕರ್ಣಿ ನಿರೂಪಿಸಿದರು. ಬಾಳಾಸಾಹೇಬ ಗುಲಗಂಜಿಹಾಳ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಅಜೀತ ಮುತ್ತಿನ, ಎಂ.ಆರ್. ಪಾಟೀಲ, ಸಿದ್ದಣ್ಣ ಸಾವುಕಾರ ಬಿರಾದಾರ, ಪ.ಪಂ. ಮಾಜಿ ಅಧ್ಯಕ್ಷ ಬಾಬುಗೌಡ ಪಾಟೀಲ, ಡಾ. ಎಸ್.ಆರ್. ಡೋಣಗಾಂವ, ಎಸ್.ಆರ್. ಅವಜಿ, ರವಿಗೌಡ ಪಾಟೀಲ, ಗಣಪತಿ ಬಾಣಿಕೋಲ, ಧಾನಮ್ಮಗೌಡತಿ ಪಾಟೀಲ, ಭಕ್ತರು ಇದ್ದರು.