ವಿಜಯಪುರ ನಗರದ ಬಿಜೆಪಿ ಕಚೇರಿಯಲ್ಲಿ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಸುದ್ದಿಗೋಷ್ಠಿ ನಡೆಸಿದರು. ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈರಣ್ಣ ರಾವೂರ, ಮಲ್ಲು ಕಲಾದಗಿ, ವಿಜಯ ಜೋಶಿ ಇದ್ದಾರೆ.
ವಿಜಯವಾಣಿ ಸುದ್ದಿಜಾಲ ವಿಜಯಪುರ
ಭಾರತೀಯ ಜನತಾ ಪಕ್ಷ ಕಟ್ಟಿ ಬೆಳೆಸುವಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಪಾತ್ರ ಅಗಾಧವಾಗಿದೆ ಎಂದು ಜಮಖಂಡಿಯ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಹೇಳಿದರು.
ರಾಜ್ಯದಲ್ಲಿ ಬಿಜೆಪಿಯನ್ನು ಬೇರು ಮಟ್ಟದಿಂದ ಗಟ್ಟಿಗೊಳಿಸಿದವರು ಯಡಿಯೂರಪ್ಪ. ಅವರ ಪರಿಶ್ರಮದ ಫಲವಾಗಿ ರಾಜ್ಯದಲ್ಲಿ ಕಮಲ ಅರಳಲು ಸಾಧ್ಯವಾಗಿದೆ. ಇಂದು ಅವರ ಅಭಿಮಾನೋತ್ಸವ ಅದ್ಧೂರಿಯಾಗಿ ನೆರವೇರುತ್ತಿರುವುದು ಶ್ಲಾಘನೀಯ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ನಮ್ಮಂಥ ನೂರಾರು ಕಾರ್ಯಕರ್ತರನ್ನು ಬೆಳೆಸಿದ್ದು ಬಿಜೆಪಿ ಮತ್ತು ಯಡಿಯೂರಪ್ಪನವರು. ಅಖಂಡ ವಿಜಯಪುರ ಜಿಲ್ಲೆಯಲ್ಲಿಯೂ ಅನೇಕರು ಪಕ್ಷ ಸಂಘಟನೆಗಾಗಿ ಶ್ರಮಿಸಿದ್ದಾರೆ. ಡಾ. ಮಹೀಂದ್ರಕರ, ಜ್ಯೋತಿ ಪ್ರಕಾಶ ಸಾಳುಂಕೆ, ಗಣಪತರಾವ ಕಾಂಬಳೆ, ಮಾಲಗಾರ ಮಾಸ್ತರ, ಗಣಪತರಾವ ಕಾಂಬಳೆ, ಗುಳೇದಗುಡ್ಡದ ರಾಠಿ ಹೀಗೆ ಅನೇಕರನ್ನು ಒಳಗೊಂಡ ತಂಡವಿತ್ತು. ಬಸನಗೌಡ ಪಾಟೀಲ, ಪಿ.ಎಚ್. ಪೂಜಾರ, ಸಿದ್ಧಲಿಂಗ ಹಂಜಗಿ ಹೀಗೆ ಅನೇಕರು ಪಕ್ಷಕ್ಕಾಗಿ ದುಡಿದಿದ್ದಾರೆ ಎಂದು ಸ್ಮರಿಸಿದರು.
ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಜಾರಿಗೊಳಿಸಿದ ಅನೇಕ ಯೋಜನೆಗಳು ಇಂದಿಗೂ ಜನಮಾನಸದಲ್ಲಿವೆ. ಅವರೊಬ್ಬ ಶ್ರೇಷ್ಠ ನಾಯಕ. ಅವರ ಅಭಿಮಾನೋತ್ಸವದಲ್ಲಿ ಅಭಿಮಾನದಿಂದ ಪಾಲ್ಗೊಳ್ಳುವುದಾಗಿ ತಿಳಿಸಿದರು.
ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈರಣ್ಣ ರಾವೂರ , ಮಲ್ಲು ಕಲಾದಗಿ, ವಿಜಯ ಜೋಶಿ ಇತರರಿದ್ದರು.