ವಿಜಯಪುರ ತಾಲೂಕಿನ ಜುಮನಾಳ ಗ್ರಾಮದಲ್ಲಿ ರಾತ್ರಿ ಕಳ್ಳತನಕ್ಕಿಳಿದ ಚಡ್ಡಿಗ್ಯಾಂಗ್‌ನ ಸಿಸಿಟಿವಿ ದೃಶ್ಯಾವಳಿ. 
ವಿಜಯಪುರ

ಮತ್ತೆ ಬಂತು ಚಡ್ಡಿ ಗ್ಯಾಂಗ್ ! ಬೆಚ್ಚಿ ಬೀಳಿಸುತ್ತಿರುವ ಸಿಸಿಟಿವಿ ದೃಶ್ಯಾವಳಿ

ಪ್ರಮುಖ ಮುಖ್ಯಾಂಶಗಳು

  • ಜುಮನಾಳದಲ್ಲಿ ರಾತ್ರಿ ಕಳ್ಳರ ಕೈಚಳಕ
  • 20 ಗ್ರಾಂ ತೂಕದ ಚಿನ್ನದ ತಾಳಿಸರ ಕಳವು
  • 60 ಸಾವಿರ ನಗದು ದೋಚಿ ಪರಾರಿ
ವಿಜಯಪುರ: ಕಳೆದ ಹಲವು ತಿಂಗಳುಗಳಿಂದ ತಣ್ಣಗಾಗಿದ್ದ ಚಡ್ಡಿ ಗ್ಯಾಂಗ್ ಹಾವಳಿ ಇದೀಗ ಮತ್ತೆ ಜೋರಾಗಿದೆ !
ವಿಜಯಪುರ ತಾಲೂಕಿನ ಜುಮನಾಳ ಗ್ರಾಮದಲ್ಲಿ ಈ ಗ್ಯಾಂಗ್ ಕಾಣಿಸಿಕೊಂಡಿದೆ. ಬರೀ ಚಡ್ಡಿ, ಕಚ್ಚೆ ಧರಿಸಿ, ಮುಖಕ್ಕೆ ಮುಖವಾಡ ಹಾಕಿಕೊಂಡು ಬರುವ ಈ ಗ್ಯಾಂಗ್‌ನ ಕೆಲವರು ಗ್ರಾಮದಲ್ಲಿ ರಾತ್ರಿ ಕಳ್ಳತನಕ್ಕೆ ಯತ್ನಿಸಿದ ಸಿಸಿಟಿವಿ ದೃಶ್ಯ ಬೆಚ್ಚಿ ಬೀಳಿಸುವಂತಿದೆ. ರಾತ್ರಿ ಓಣಿಗಳಲ್ಲಿ ಅಡ್ಡಾಡುವ ದೃಶ್ಯ, ಮನೆಗಳ ಗೇಟ್ ತೆಗೆದು ಒಳಬಂದ ದೃಶ್ಯಗಳು ಜನರ ನಿದ್ದೆಗೆಡಿಸಿವೆ.

ಚಿನ್ನಾಭರಣ ಕಳವು

ಜುಮನಾಳ ಗ್ರಾಮದ ಶ್ರೀಕಾಂತ ಪೂಜಾರಿ ಎಂಬುವರ ಮನೆಯಲ್ಲಿ ಈ ಚಡ್ಡಿ ಗ್ಯಾಂಗ್ ಭರ್ಜರಿ ಕಳ್ಳತನ ಮಾಡಿದೆ. ಮನೆಯವರು ಹೊರಗೆ ಮಲಗಿದ್ದನ್ನು ಗಮನಿಸಿ ಒಳ ನುಗ್ಗಿದ ಕಳ್ಳರು, ಮಹಿಳೆಯೊಬ್ಬರ 20 ಗ್ರಾಂ ತೂಕದ ಚಿನ್ನದ ತಾಳಿಸರ ಹಾಗೂ ಮನೆಯಲ್ಲಿದ್ದ 60 ಸಾವಿರ ನಗದನ್ನು ದೋಚಿ ಪರಾರಿಯಾಗಿದ್ದಾರೆ.
ಸದ್ಯ ಜುಮನಾಳ ಗ್ರಾಮಸ್ಥರು ಕಳ್ಳರ ಈ ಹಾವಳಿಯಿಂದ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ತಕ್ಷಣವೇ ಪೊಲೀಸರು ರಾತ್ರಿ ಗಸ್ತನ್ನು ಹೆಚ್ಚಿಸಿ, ಈ ಚಡ್ಡಿ ಗ್ಯಾಂಗ್‌ಗೆ ಬ್ರೇಕ್ ಹಾಕಬೇಕೆಂದು ಆಕ್ರೋಶದೊಂದಿಗೆ ಆಗ್ರಹಿಸುತ್ತಿದ್ದಾರೆ.
ವಿಜಯಪುರ ತಾಲೂಕಿನ ಜುಮನಾಳ ಗ್ರಾಮದಲ್ಲಿ ರಾತ್ರಿ ಕಳ್ಳತನಕ್ಕಿಳಿದ ಚಡ್ಡಿಗ್ಯಾಂಗ್‌ನ ಸಿಸಿಟಿವಿ ದೃಶ್ಯಾವಳಿ.

ಈ ಹಿಂದೆಯೂ ಜಿಲ್ಲಾದ್ಯಂತ ಇಂಥದ್ದೇ ಗ್ಯಾಂಗ್ ಸಾರ್ವಜನಿಕರು ಮಾತ್ರವಲ್ಲ ಪೊಲೀಸರದ್ದೂ ನಿದ್ದೆ ಕೆಡಿಸಿತ್ತು. ವಿಜಯಪುರ ನಗರದ ಜೈನಾಪುರ ಲೇಔಟ್‌ನಲ್ಲಿ ಓರ್ವನನ್ನು ಬಲಿ ತೆಗೆದುಕೊಂಡಿತ್ತು. ಜನ ಸ್ವಯಂಪ್ರೇರಿತವಾಗಿ ಕೈಯಲ್ಲಿ ಬಡಿಗೆ, ದೊಣ್ಣೆ ಹಿಡಿದು ರಾತ್ರಿ ಗಸ್ತು ತಿರುಗುವು ಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಮತ್ತೆ ಅಂಥದ್ದೇ ಹಾವಳಿ ಜೋರಾಗತೊಡಗಿದ್ದು, ಕೂಡಲೇ ಪೊಲೀಸರು ಎಚ್ಚೆತ್ತುಕೊಂಡು ರಾತ್ರಿ ಗಸ್ತು ಹೆಚ್ಚಿಸುವುದರ ಜೊತೆಗೆ ನಾಕಾಬಂದಿ ಮಾಡಿ ಕಳ್ಳರನ್ನು ಬಂಧಿಸಬೇಕೆಂದು ಜನ ಆಗ್ರಹಿಸಿದ್ದಾರೆ.