RAMESH-JIGAJINAGI 
ವಿಜಯಪುರ

‘ವಂದೇ ಭಾರತ’ಕ್ಕೆ ತಾಂತ್ರಿಕ ತೊಡಕು, ಶೀಘ್ರದಲ್ಲೇ ಗ್ರೀನ್ ಸಿಗ್ನಲ್ ಸಿಗಲಿದೆ ಎಂದ ಸಂಸದ ರಮೇಶ ಜಿಗಜಿಣಗಿ

ಪ್ರಮುಖ ಮುಖ್ಯಾಂಶಗಳು

  • ಕೇಂದ್ರದ ಸಚಿವರೊಂದಿಗೆ ಸಮಾಲೋಚನೆ
  • ರೈಲ್ವೆ ಅಧಿಕಾರಿಗಳೊಂದಿಗೆ ಚರ್ಚೆ
  • ಸಮಗ್ರ ಮಾಹಿತಿ ಪಡೆದ ಸಂಸದ ಜಿಗಜಿಣಗಿ
  • ವ್ಯರ್ಥ ಆರೋಪಗಳಿಗೆ ಖಡಕ್ ಸಂದೇಶ
ವಿಜಯಪುರ: ಐತಿಹಾಸಿಕ ಜಿಲ್ಲೆಯ ಬಹುದಿನದ ಬೇಡಿಕೆಯಾಗಿರುವ ವಂದೇ ಭಾರತ ರೈಲು ಸಂಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ರೈಲ್ವೆ ಮಂತ್ರಿಗಳೊಂದಿಗೆ ಚರ್ಚೆ ನಡೆಸಿದ್ದು, ಕೆಲವು ತಾಂತ್ರಿಕ ತೊಂದರೆಗಳು ನಿವಾರಣೆಯಾಗುತ್ತಿದ್ದಂತೆ ಬೇಡಿಕೆ ಈಡೇರಲಿದೆ ಎಂದು ಸಂಸದ ರಮೇಶ ಜಿಗಜಿಣಗಿ ತಿಳಿಸಿದ್ದಾರೆ.
ಈಗಾಗಲೇ ರೈಲ್ವೆ ಮಂತ್ರಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಈ ಕುರಿತು ಚರ್ಚಿಸಲಾಗಿದೆ. ಸಕಾರಾತ್ಮಕ ಸ್ಪಂದನೆಯೂ ವ್ಯಕ್ತವಾಗಿದೆ. ಈ ಹಿಂದೆಯೂ ಸಾಕಷ್ಟು ಬಾರಿ ಈ ಕುರಿತು ಚಿಂತನೆ ನಡೆಸಲಾಗಿತ್ತು. ಇದೀಗ ಉತ್ತಮ ಸ್ಪಂದನೆ ಸಿಕ್ಕಿದ್ದು, ಶೀಘ್ರದಲ್ಲೇ ಕಾರ್ಯಗತಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ವಂದೇ ಭಾರತ ರೈಲು ಸಂಚಾರ ಆರಂಭಿಸುವಂತೆ ಸಾರ್ವಜನಿಕರು ಅನೇಕ ಬಾರಿ ಮನವಿ ಸಲ್ಲಿಸಿದ್ದರು. ಸಂಘ-ಸಂಸ್ಥೆಗಳು ಸಹ ಒತ್ತಾಯಿಸಿದ್ದವು. ಆದರೆ, ಕೆಲವರು ವಾಸ್ತವ ಅರಿಯದೇ ವ್ಯರ್ಥ ಆರೋಪ ಮಾಡುತ್ತಿದ್ದರು. ಅಂಥ ಆರೋಪಗಳಿಗೆ ಕಿವಿಗೊಡುವ ಅವಶ್ಯಕತೆ ಇಲ್ಲ ಎಂದು ಸಂಸದರು ಸಾರ್ವಜನಿಕರಿತು ಕಿವಿಮಾತು ಹೇಳಿದ್ದಾರೆ.
ಕಲಬುರಗಿ, ಹುಬ್ಬಳ್ಳಿ, ಬೆಳಗಾವಿಯಲ್ಲಿ ಸದ್ಯ ರೈಲು ಸಂಚರಿಸುತ್ತಿದೆ. ಸೊಲ್ಲಾಪುರ, ವಿಜಯಪುರ, ಗದಗ, ಹುಬ್ಬಳ್ಳಿಯವರೆಗೆ ರೈಲು ಮಾರ್ಗ ಕಾಮಗಾರಿ ಪೂರ್ಣಗೊಂಡಿರುವುದಿಲ್ಲ. ಸದ್ಯ ಓಡುತ್ತಿರುವ ರೈಲಿನ ವೇಗವು 92 ರಿಂದ 100 ರವರೆಗೆ ಇರುತ್ತದೆ. ಆದರೆ ವಂದೇ ಭಾರತ ರೈಲಿನ ವೇಗ 110 ರಿಂದ 140ರಷ್ಟಿದೆ. ಆದ ಕಾರಣ ರೈಲಿನ ಮಾರ್ಗದ ಕಾಮಗಾರಿ ಪ್ರಗತಿಯಲ್ಲಿದ್ದು, ಈ ರೈಲು ಚಾಲನೆಯಾದರೆ ಏನಾದರೂ ಸಮಸ್ಯೆಯಾಗಭಾರದೆಂಬ ಹಿನ್ನೆಲೆ ವಂದೇ ಭಾರತ ರೈಲು ಸಂಚಾರ ಮಾಡುವುದು ವಿಳಂಭವಾಗುತ್ತಿದೆ.
ಕೇವಲ 2-3 ತಿಂಗಳಲ್ಲಿ ಪೂರ್ಣಪ್ರಮಾಣದಲ್ಲಿ ಕಾಮಗಾರಿ ಮುಗಿಯಲಿದೆ. ನಂತರ ಈ ರೈಲು ಸಂಚರಿಸಲಿದೆ. ಪ್ರಜ್ಞಾವಂತರು ಇದನ್ನು ಅರಿತುಕೊಳ್ಳಬೇಕು. ಯಾವುದೇ ರೀತಿಯ ದ್ವಂದ್ವಕ್ಕೆ ಅಂಟಿಕೊಳ್ಳಬಾರದು. ರೈಲಿನ ಕುರಿತ ಅಪಪ್ರಚಾರ ಮಾಡಬಾರದು ಎಂದು ರಮೇಶ ಜಿಗಜಿಣಗಿ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.