ಹೋರ್ತಿ ತಾಲೂಕಿನ ಝಳಕಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಗುರು ಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿದರು. ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ, ಶಿಕ್ಷಣಾಽಕಾರಿ ಚಿದಾನಂದ ಕಟ್ಟಿಮನಿ, ಎ.ಎಸ್. ಸೊನ್ನಗಿ, ಎಸ್.ಎಸ್. ಪಾಟೀಲ, ಬಸವಂತ ಉಮರಾಣಿ ಇತರರಿದ್ದಾರೆ.
- ಗುರುಸ್ಪಂದನ ಕಾರ್ಯಕ್ರಮ
- ಶಾಸಕ ಯಶವಂತರಾಯಗೌಡ ವಿ. ಪಾಟೀಲ ಅಭಿಪ್ರಾಯ
ಹೋರ್ತಿ: ಶಿಕ್ಷಕರ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸುವ ನಿಟ್ಟಿನಲ್ಲಿ ನನ್ನ ಮತಕ್ಷೇತ್ರದಲ್ಲಿ ಹಮ್ಮಿಕೊಂಡ ಗುರುಸ್ಪಂದನಾ ರಾಜ್ಯಕ್ಕೆ ಮಾದರಿ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಝಳಕಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡ ಗುರುಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಕರ ಮೇಲೆ ರಾಷ್ಟ್ರದ ನಿರ್ಮಾಣ ಮಾಡುವ ದೊಡ್ಡ ಜವಾಬ್ದಾರಿ ಇದೆ. ಗ್ರಾಮೀಣ ಕ್ರಪಾಂಕ ನೌಕರರ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದರು. ಶಿಕ್ಷಕರ ಸಮಸ್ಯೆ ಬಗೆಹರಿಸಲು ವಿಜಯಪುರ ಜಿಲ್ಲೆ ಉಪನಿರ್ದೇಶಕರ ಕಚೇರಿ ಸ್ಪಂದಿಸುತ್ತಿಲ್ಲ ಎಂದು ಅಸಮಾಧಾನ ಹೊರ ಹಾಕಿದರು.
ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ ಮಾತನಾಡಿ, ನೌಕರರ ಸಂಪೂರ್ಣ ಮಾಹಿತಿ ಒಳಗೊಂಡ ಸೇವಾ ಪುಸ್ತಕ ನೌಕರರ ಸಂವಿಧಾನವಿದ್ದಂತೆ. ಆದ್ದರಿಂದ ನೌಕರರು ಸೇವಾ ಪುಸ್ತಕದಲ್ಲಿ ಸರಿಯಾದ ಮಾಹಿತಿ ಇರುವಂತೆ ನೋಡಿಕೊಳ್ಳಬೇಕು. ಶಿಕ್ಷಣ ಸಚಿವರ ಸಮ್ಮುಖದಲ್ಲಿಯೇ ಗ್ರಾಮೀಣ ನೌಕರರ ಸಮಸ್ಯೆ ಬಗೆಹರಿಸಿಲಾಗುವುದು ಎಂದರು.
ಶಿಕ್ಷಣಾಧಿಕಾರಿ ಚಿದಾನಂದ ಕಟ್ಟಿಮನಿ ಮಾತನಾಡಿ, ಇಂಡಿ ಹಾಗೂ ನಾಗಠಾಣ ಶಾಸಕರ ಶಿಕ್ಷಣ ಹಾಗೂ ಶಿಕ್ಷಕರ ಬಗ್ಗೆ ಇರುವ ಅಪಾರ ಕಾಳಜಿ ಹಾಗೂ ಶಿಕ್ಷಕರ ಸಂಘದ ಸಹಕಾರದಿಂದ 2002ರಿಂದ ಬಾಕಿ ಉಳಿದ ಎಲ್ಲ ಸೇವಾ ವಿವರಗಳನ್ನು ಗುರುಸ್ಪಂದನ ಕಾರ್ಯಕ್ರಮದ ಮೂಲಕ ಬಗೆಹರಿಸಲಾಗಿದೆ. ಎಸ್‌ಎಸ್‌ಎಲ್ ಸಿ ಫಲಿತಾಂಶದಲ್ಲಿ ವಿಜಯಪುರ ಜಿಲ್ಲೆ ಯಲ್ಲಿ ಚಡಚಣ ವಲಯ ಪ್ರಥಮ ಸ್ಥಾನದಲ್ಲಿ ಇರುವಂತೆ ಮಾಡುವೆ ಎಂದು ಶಾಸಕರಿಗೆ ಭರವಸೆ ನೀಡಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎ.ಎಸ್. ಸೊನ್ನಗಿ ಮಾತನಾಡಿ, ಮುಂದಿನ ಕೆಲವೇ ದಿನಗಳಲ್ಲಿ ಶಿಕ್ಷಕರ ಸೇವಾ ಪುಸ್ತಕ ಸಂಪೂರ್ಣ ಡಿಜಿಟಲೀಕರಣ ಆಗಲಿದೆ. ಆದ್ದರಿಂದ ಶಿಕ್ಷಕರು ತಮಗೆ ಒದಗಿಸಲಾದ ಸೇವಾ ಪುಸ್ತಕದಲ್ಲಿ ತಮ್ಮ ಮಾಹಿತಿಗಳನ್ನು ಸರಿಯಾದ ರೀತಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು
ಎಸ್.ಎಸ್. ಪಾಟೀಲ ಮಾತನಾಡಿ, ಶಿಕ್ಷಕರ ಸಮಸ್ಯೆಗಳನ್ನು ಶಿಕ್ಷಕರ ಸಮ್ಮುಖದಲ್ಲಿ ಬಗೆಹರಿಸಿ ಶಿಕ್ಷಕರು ತರಗತಿಯಲ್ಲಿ ನೆಮ್ಮದಿಯಾಗಿ ಪಾಠ ಮಾಡಬೇಕು ಎಂಬುದು ಗುರುಸ್ಪಂದನ ಕಾರ್ಯಕ್ರಮದ ಮುಖ್ಯ ಉದ್ದೇಶ ಆಗಿದೆ. ಶಿಕ್ಷಣ ಹಾಗೂ ಶಿಕ್ಷಕರ ಬಗ್ಗೆ ಅಪಾರ ಗೌರವ ಹೊಂದಿದ್ದು, ಶಿಕ್ಷಕರ ಎರಡು ಕಣ್ಣಾಗಿರುವ ಇಬ್ಬರು ಶಾಸಕರು ತಾಲೂಕಿನಲ್ಲಿ ಗುರು ಭವನ ನಿರ್ಮಿಸಬೇಕು ಎಂದು ಶಿಕ್ಷಕರು ಬೇಡಿಕೆ ತಿಳಿಸಿದರು.
ಪ್ರಾಥಮಿಕ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಬಸವಂತ ಉಮರಾಣಿ ಮಾತನಾಡಿದರು. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ಮಜ್ಜಗಿ, ಮುಖ್ಯ ಶಿಕ್ಷಕ ಎಸ್.ಕೆ. ಸೋನಕನಳ್ಳಿ, ವಿಠ್ಠಲ ಕಾಂಬಳೆ, ಎಂ.ಎ. ಕಂಬಾರ, ಸಂಜಯ ಝಳಕಿಕರ, ಗಂಗಾಧರ ಹೂಗಾರ, ಎಸ್.ಜೆ. ಪಾಟೀಲ, ರಾಘವೇಂದ್ರ ಕಾಪಸೆ, ಸಣ್ಣಪ್ಪ ತಳವಾರ, ನಾರಾಯಣ ಜಹಾಗಿರದಾರ ಪೀರಪ್ಪ ಕಂಬಾರ, ಶಂಕರಗೌಡ ಬಿರಾದಾರ, ರಮೇಶಗೌಡ ಪಾಟೀಲ, ರವಿ ತೇಲಿ, ನಿಂಬಣ್ಣ ವಾಲಿಕಾರ ಇತರರಿದ್ದರು.
ಶಿಕ್ಷಕ ಸುನೀಲ ಯಳಮೇಲಿ ಸ್ವಾಗತಿಸಿದರು. ಶಿಕ್ಷಕ ಗುರು ಜೇವೂರ ನಿರೂಪಿಸಿದರು.