ವಿಜಯಪುರ: ‘ಉತ್ತರ ಕರ್ನಾಟಕದ ಅತೀ ದೊಡ್ಡ ದಸರಾ ಉತ್ಸವಕ್ಕೆ ತಾಂಬಾ ಸಜ್ಜಾಗಿದ್ದು, ಈ ಬಾರಿ ನಾಡದೇವಿಯ ನವರಾತ್ರಿ ಉತ್ಸವವನ್ನು ಅತ್ಯಂತ ವಿಶಿಷ್ಟವಾಗಿ, ವಿಭಿನ್ನವಾಗಿ ಹಾಗೂ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ’ ಎಂದು ಜಗದಂಬ ವಿದ್ಯಾವರ್ಧಕ ಸಂಸ್ಥೆಯ ಮುಖ್ಯಸ್ಥರೂ ಆಗಿರುವ ಮಾಜಿ ಶಾಸಕ ದೇವಾನಂದ ಚವಾಣ್ ತಿಳಿಸಿದರು.
‘ಕಳೆದ 55 ವರ್ಷಗಳಿಂದ ಈ ಉತ್ಸವ ಆಚರಿಸಿಕೊಂಡು ಬರಲಾಗುತ್ತಿದ್ದು, ದಿ.ಫೂಲಸಿಂಗ್ ಚವಾಣ್ ಮನೆತನ ಹಾಕಿಕೊಟ್ಟಿರುವ ಭವ್ಯ ಸಂಸ್ಕೃತಿ ಇದಾಗಿದೆ. ದೇವಿಯ ಆರಾಧಕರೂ ಆಗಿರುವ ಫೂಲಸಿಂಗ್ ಚವಾಣ್ ಅವರ ಆಶಯದ ಅನುಗುಣವಾಗಿ ತಪ್ಪದೇ ಈ ಆಚರಣೆ ಪಾಲಿಸಿಕೊಂಡು ಬರಲಾಗುತ್ತಿದೆ. ಸುತ್ತಲಿನ ಗ್ರಾಮಸ್ಥರ ಸಹಕಾರ ಈ ಜಾತ್ರೆಗೆ ತುಂಬಾ ಇದೆ. ಹೀಗಾಗಿ ಈ ಬಾರಿಯೂ ಅತ್ಯಂತ ವೈಭವದಿಂದ ಉತ್ಸವ ಆಚರಿಸಲಾಗುತ್ತಿದೆ’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
‘ಅ.11 ರಂದು ಅದ್ಧೂರಿಯಾಗಿ ಚಾಲನೆ ಪಡೆದುಕೊಳ್ಳಲಿರುವ ಉತ್ಸವ ಅ. 21ರವರೆಗೆ ಪ್ರತಿ ದಿನ ವಿಭಿನ್ನ ಅರ್ಥಪೂರ್ಣ ಕಾರ್ಯಕ್ರಮಗಳೊಂದಿಗೆ ಸಾಂಗವಾಗಿ ನೆರವೇರಲಿದೆ. 2001 ಕುಂಭಮೇಶ, ಆನೆ ಕುದುರೆಗಳು, ಯಕ್ಷಗಾನ, ಲೇಝಿಮ್ ಕುಣಿತ, ನಾಶಿಕದ ಡೋಲು ವಾದನ, ಜಗ್ಗಲಿಗೆ ಮೇಳ, ಕೀಲು ಕುದುರೆ ಕುಣಿತ, ಬ್ರಾಸ್ ಬ್ಯಾಂಡ್, ನವಿಲು ಕುಣಿತ, ಮಹಿಳಾ ಡೊಳ್ಳು ಕುಣಿತ, ಝಾಂಜ್ ಪಥಕ ಸೇರಿ ಅನೇಕ ಕಲಾಪ್ರಕಾರಗಳು ಮೈಸೂದು ದಸರಾ ಉತ್ಸವವನ್ನು ನೆನಪಿಸುತ್ತವೆ’ ಎಂದರು.
ಅ.11ರಂದು ಬೆಳಗ್ಗೆ 10ಕ್ಕೆ ಬಂಥನಾಳದ ಸಂಗನಬಸವ ಶ್ರೀಗಳ ದಿವ್ಯ ಸಾನ್ನಿಧ್ಯದಲ್ಲಿ ಸಿಂದಗಿ ಶಾಸಕ ಅಶೋಕ ಮನಗೂಳಿ ಉದ್ಘಾಟನೆ ನೆರವೇರಿಸುವರು. ಜಗನು ಮಹಾರಾಜರು, ಸೋಮಲಿಂಗ ಮಹಾರಾಜರು, ಧನಸಿಂಗ ಮಹಾರಾಜರು ಸಾನ್ನಿಧ್ಯ ವಹಿಸುವರು. ಜಗದಂಬ ವಿವ ಸಂಘದ ಅಧ್ಯಕ್ಷ ಜಿ.ಬಿ. ಅಂಗಡಿ ಅಧ್ಯಕ್ಷತೆ ವಹಿಸಲಿದ್ದು, ಎಸ್‌ಪಿ ಲಕ್ಷ್ಮಣ ನಿಂಬರಗಿ, ವಿಶ್ರಾಂತ ಡಿವೈಎಸ್‌ಪಿ ಆರ್.ಕೆ. ನಾಯಕ, ಸಿಪಿಐ ಸುನೀಲ ಪಾಟೀಲ, ಬಿಜೆಪಿ ಮುಖಂಡ ಮಹೇಂದ್ರಕುಮಾರ ನಾಯಕ, ಜಿಪಂ ಮಾಜಿ ಸದಸ್ಯ ಪಂಚಪ್ಪ ಕಲಬುರ್ಗಿ ಇತರರು ಭಾಗವಹಿಸಲಿದ್ದಾರೆಂದು ತಿಳಿಸಿದರು.
‘ಹಗರಿ ಬೊಮ್ಮನಳ್ಳಿ ಶಾಸಕ ಎಸ್. ಭೀಮಾನಾಯಕ ಹಾಗೂ ಸಮಾಜ ಸೇವಕ ಡಾ.ಪ್ರಭುಗೌಡ ಪಾಟೀಲ ಕುಂಭಮೇಳ ಹಾಗೂ ವೈಭವದ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಅನ್ನದಾಸೋಹ ಕಾರ್ಯಕ್ಕೆ ಮಾಜಿ ಶಾಸಕ ರಮೇಶ ಭೂಸನೂರ ಚಾಲನೆ ನೀಡಲಿದ್ದಾರೆ’ ಎಂದರು.
‘ಈ ಬಾರಿ ಮುಂಬೈನ ಮಹಾಕಾಲಿ ಇವೆಂಟ್ಸ್ ಸಹಯೋಗದಲ್ಲಿ ಅಘೋರಿ ಕಾರ್ಯಕ್ರಮ ಮೆರವಣಿಗೆಯ ಕೇಂದ್ರ ಬಿಂದುವಾಗಲಿದೆ, ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಮೆರವಣಿಗೆಗೆ ಕಳೆ ಕಟ್ಟಲಿವೆ’ ಎಂದರು.
ಅ.12 ರಂದು ರಾತ್ರಿ 8 ಕ್ಕೆ ಮುಕ್ತ ಕೋಲಾಟ, ಅ.13 ರಂದು ಬೆಳಗ್ಗೆ 11 ಕ್ಕೆ ಖೋಖೋ ಪಂದ್ಯಾವಳಿ, ಅದೇ ದಿನ ರಾತ್ರಿ 8 ಕ್ಕೆ ರಸಮಂಜರಿ, ಅ.14 ರಂದು ಮ್ಯೂಸಿಕಲ್ ಚೇರ್, ಹಿಟ್ಟಿನಲ್ಲಿ ನಾಣ್ಯ ತೆಗೆಯುವ ವಿಭಿನ್ನ ಸ್ಪರ್ಧೆಗಳು ಸೇರಿ ಅನೇಕ ಕಾರ್ಯಕ್ರಮಗಳು ನಡೆಯಲಿವೆ. ಅ.15 ರಂದು ತೆರಬಂಡಿ ಸ್ಪರ್ಧೆ, ಸಮಸ್ತ ನಾಡಿನ ಜನತೆಯ ಒಳಿತಿಗಾಗಿ ನವಚಂಡಿ ಹೋಮ ಹಮ್ಮಿಕೊಳ್ಳಲಾಗುತ್ತಿದೆ’ ಎಂದರು.
ಉತ್ಸವ ಸಮಿತಿ ಅಧ್ಯಕ್ಷ ಅಭಿನವ ಚವಾಣ್, ಪ್ರೀತಮ್ ಚವಾಣ್ ಇತರರಿದ್ದರು.