ವಿಜಯಪುರ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಿಕೋಟಾ ಪಟ್ಟಣದ ತಳವಾರ ಸಮಾಜದ ಮುಖಂಡರನ್ನು ಸಚಿವ ಎಂ.ಬಿ. ಪಾಟೀಲ ಕಾಂಗ್ರೆಸ್ಸಿಗೆ ಬರಮಾಡಿಕೊಂಡು ಮಾತನಾಡಿದರು. ಮುಖಂಡರಾದ ಬಿ.ಜಿ. ವಿಭೂತಿ, ಜೆ.ಎಂ. ಪಾಟೀಲ, ಮಮ್ಮು ಮುಜಾವರ, ಬಾಪು ಚೌಧರಿ ಇತರರಿದ್ದಾರೆ.
- ಕಾಂಗ್ರೆಸ್‌ನಲ್ಲಿ ಸರ್ವರಿಗೂ ಸಮಸ್ಥಾನ
- ಕಾಂಗ್ರೆಸ್ ಪಕ್ಷ ಅನುಭವ ಮಂಟಪದಂತೆ
- ಎಲ್ಲ ಜಾತಿ-ಜನಾಂಗಗಳಿಗೆ ಅವಕಾಶ
ವಿಜಯಪುರ: ಕಾಂಗ್ರೆಸ್ ಪಕ್ಷವೆಂಬುದು ಅನುಭವ ಮಂಟಪ. ಈ ಮಂಟಪದಲ್ಲಿ ಎಲ್ಲ ಜಾತಿ-ಜನಾಂಗಗಳಿಗೆ ಸಮಸ್ಥಾನ. ಆ ಸಾಮಾಜಿಕ ಹಿನ್ನೆಲೆಯನ್ನು ಅನುಸರಿಸಿ ಬಹಳಷ್ಟು ಹಿಂದುಳಿದ ಸಮಾಜಗಳು ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ. ಈ ಕಾರ್ಯ ಮುಂದುವರೆದಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಸಮಾಜಗಳು ಕಾಂಗ್ರೆಸ್ ಪಕ್ಷದ ತೆಕ್ಕೆಗೆ ಬರಲಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.
ನಗರದ ಗೃಹ ಕಚೇರಿಯಲ್ಲಿ ಗುರುವಾರ ತಿಕೋಟಾ ಪಟ್ಟಣದ ತಳವಾರ ಸಮುದಾಯದ ವಿವಿಧ ಮುಖಂಡರನ್ನು ಕಾಂಗ್ರೆಸ್ಸಿಗೆ ಬರಮಾಡಿಕೊಂಡು ಅವರು ಮಾತನಾಡಿದರು.
ಮತಕ್ಷೇತ್ರದಲ್ಲಿ ಕೈಗೊಳ್ಳಲಾದ ಅಭಿವೃದ್ಧಿ ಯೋಜನೆಗಳು ಸಕಲ ಸಮುದಾಯಗಳ ಮೆಚ್ಚುಗೆಗೆ ಪಾತ್ರವಾಗಿದ್ದು, ತಿಕೋಟಾ ತಳವಾರ ಸಮುದಾಯದ ಪ್ರಮುಖ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿರುವುದು ಇದಕ್ಕೆ ಸಾಕ್ಷಿಯಾಗಿದೆ. ಬಬಲೇಶ್ವರ ಮತಕ್ಷೇತ್ರದಲ್ಲಿ ಇಂದು ರಾಜಕೀಯ ಚಿತ್ರಣವೇ ಬದಲಾಗಿದೆ. ನುಡಿದಂತೆ ನಡೆಯುವ ನಮ್ಮ ಗ್ಯಾರಂಟಿ ಸರ್ಕಾರದ ಜನಪರ ಆಡಳಿತಕ್ಕೆ ಮನಸೋತು, ಬಿಜೆಪಿಯ ಪ್ರಮುಖರು, ಕಾರ್ಯಕರ್ತರು ತಮ್ಮ ಪಕ್ಷಕ್ಕೆ ಗುಡ್ ಬೈ ಹೇಳಿ ಕಾಂಗ್ರೆಸ್‌ಗೆ ಜೈ ಎಂದಿದ್ದಾರೆ. ನಮ್ಮ ಅಭಿವೃದ್ಧಿಯ ಹಾದಿ ಮತ್ತು ಗಟ್ಟಿಯಾದ ಸಿದ್ಧಾಂತವನ್ನು ನಂಬಿ ಬಂದ ಈ ಎಲ್ಲ ನಾಯಕರನ್ನು ಆತ್ಮೀಯವಾಗಿ ಸ್ವಾಗತಿಸುತ್ತೇನೆ. ಅವರ ಸೇರ್ಪಡೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಟು ಬಲ ಬಂದಿದೆ. ಮುಂಬರುವ ದಿನಗಳಲ್ಲಿ ಅವರ ಬೇಡಿಕೆಗಳಿಗೆ ಸ್ಪಂದಿಸಲಾಗುವುದು ಎಂದರು.
ಮುಖಂಡರಾದ ಸುರೇಶ ತೊರವಿ, ಎಚ್.ಎಲ್. ತಳವಾರ, ಪರಶುರಾಮ ಕೋಳಿ, ಗಣಪತಿ ತೊರವಿ, ಅಪ್ಪಸಾಹೇಬ ಡ್ಯಾಬೇರಿ, ದಯಾನಂದ ಶಿರಹಟ್ಟಿ, ಪ್ರಕಾಶ ಹಾಲಳ್ಳಿ, ಭೀಮು ಹಾಲಳ್ಳಿ, ರಮೇಶ ಗುಡದಿನ್ನಿ, ವಿಲಾಸ ಮಾಳಿ, ನಾಗಪ್ಪ ಮಾಳಿ, ಶಾಂತಾಭಾಯಿ ತಳವಾರ, ಗೀತಾ ತೊರವಿ, ಪುಷ್ಪಾ ತೊರವಿ, ಮಂಗಲಾ ತಳವಾರ, ಮನಿಷಾ ತಳವಾರ, ಕವಿತಾ ಹಾಲಳ್ಳಿ ಪಕ್ಷ ಸೇರ್ಪಡೆಗೊಂಡರು.
ಮುಖಂಡರಾದ ಬಿ.ಜಿ. ವಿಭೂತಿ, ಜೆ.ಎಂ. ಪಾಟೀಲ, ಮಮ್ಮು ಮುಜಾವರ, ಬಾಪು ಚೌಧರಿ, ರಾಜುಗೌಡ ಪಾಟೀಲ, ಬಿ.ಎಲ್. ನಾಟೀಕಾರ ಇತರರಿದ್ದರು.