ವಿಜಯಪುರ ನಗರದಲ್ಲಿ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ಗಮನ ಸೆಳೆದ ತೋಟಗಾರಿಕೆ ಇಲಾಖೆಯ ಸ್ತಬ್ಧ ಚಿತ್ರ. ಜಂಟಿ ನಿರ್ದೇಶಕ ಸಿದ್ರಾಮಯ್ಯ ಬರಗಿಮಠ, ಭಗವಂತ ಜಿಗಜಿಣಗಿ ಮತ್ತಿತರರಿದ್ದರು. 
ವಿಜಯಪುರ

ರಾಜ್ಯೋತ್ಸವದಲ್ಲಿ ಗಮನ ಸೆಳೆದ ಸ್ತಬ್ಧ ಚಿತ್ರ, ತೋಟಗಾರಿಕೆ ಇಲಾಖೆಯ ವಿನೂತನ ಪ್ರಯತ್ನ

ಕ್ಯಾಲಿಫೋರ್ನಿಯಾದ ತಳಿ ಪ್ರದರ್ಶನ * ನೀರಾವರಿ ಯೋಜನೆಗಳ ಅನಾವರಣ

ವಿಜಯಪುರ: ಕನ್ನಡ ರಾಜ್ಯೋತ್ಸವದ ಅಂಗವಾಗಿ ತೋಟಗಾರಿಕೆ ಇಲಾಖೆಯಿಂದ ಹಮ್ಮಿಕೊಂಡಿದ್ದ ಸ್ತಬ್ಧ ಚಿತ್ರ ಪ್ರದರ್ಶನ ಅತ್ಯಂತ ಆಕರ್ಷಣೀಯವೂ ಹಾಗೂ ಅರ್ಥಪೂರ್ಣವೂ ಆಗಿತ್ತು.

ವಿಜಯಪುರ ಜಿಲ್ಲೆಯಲ್ಲಿ ನೀರಾವರಿ ಕ್ಷೇತ್ರದಲ್ಲಿ ಆಗಿರುವ ಪ್ರಗತಿ, ಆಧುನಿಕ ಕೃಷಿ ತಂತ್ರಜ್ಞಾನದ ಅಳವಡಿಕೆ ಹಾಗೂ ತೋಟಗಾರಿಕೆ ಕ್ಷೇತ್ರದಲ್ಲಿ ರೈತರು ಸಾಧಿಸುತ್ತಿರುವ ಯಶಸ್ಸನ್ನು ಬಿಂಬಿಸುವ ವಿಶೇಷ ಸ್ತಬ್ಧಚಿತ್ರವು ಈ ಬಾರಿಯ ಕನ್ನಡ ರಾಜ್ಯೋತ್ಸವ ಆಕರ್ಷಣೀಯ ಕೇಂದ್ರ ಬಿಂದುವಾಗಿತ್ತು.

ಪರಮಪೂಜ್ಯ ಜ್ಞಾನಯೋಗಿ ಸಿದ್ಧೇಶ್ವರ ಸ್ವಾಮೀಜಿಯವರು ವಿಜಯಪುರದ ಭೂಮಿಗೆ ಸಮರ್ಪಕವಾಗಿ ನೀರು ಒದಗಿಸಿದರೆ ಈ ಪ್ರದೇಶವು ಕ್ಯಾಲಿಫೋರ್ನಿಯಾವನ್ನೂ ಮೀರಿಸುವ ಸಾಮರ್ಥ್ಯ ಹೊಂದಿದೆ ಎಂಬ ಆಶಯ ವ್ಯಕ್ತಪಡಿಸಿದ್ದರು. ಈ ಆಶಯಕ್ಕೆ ಪೂರಕವಾಗಿ ಸಚಿವರಾದ ಡಾ. ಎಂ.ಬಿ. ಪಾಟೀಲ ಅವರ ಪ್ರಯತ್ನದಿಂದ ಆಧುನಿಕ ತಂತ್ರಜ್ಞಾನ ಬಳಸಿ ಕೃಷ್ಣಾ ನದಿಯಿಂದ ಕೆರೆಗಳಿಗೆ ನೀರು ತುಂಬಿಸುವ ಹಾಗೂ ಏತ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಜಿಲ್ಲೆಯ ಶಾಸಕರು ಹಾಗೂ ಜನಪ್ರತಿನಿಧಿಗಳ ಸಹಕಾರದೊಂದಿಗೆ ಕೈಗೊಂಡ ನೀರಾವರಿ ಯೋಜನೆಗಳು ಕೃಷಿ ಚಟುವಟಿಕೆಗಳಿಗೆ ಹೊಸ ಉತ್ತೇಜನ ನೀಡಿವೆ. ಈ ವಿಷಯ ಕೇಂದ್ರೀಕರಿಸಿಕೊಂಡು ಸ್ತಬ್ಧ ಚಿತ್ರದ ಪ್ರದರ್ಶನ ನಡೆಯಿತು.

ವಿಶೇಷವಾಗಿ ತಿಕೋಟಾ ತಾಲೂಕಿನ ಕನಮಡಿ ಸೇರಿ ಎತ್ತರದ ಪ್ರದೇಶಗಳಿಗೂ ಏತ ನೀರಾವರಿ ಮೂಲಕ ನೀರು ತಲುಪಿಸಿರುವುದು ಕೃಷಿ ಕ್ಷೇತ್ರದಲ್ಲಿ ಹೊಸ ಸಾಧ್ಯತೆಗಳನ್ನು ತೆರೆದಿದೆ. ಇದರ ಪರಿಣಾಮವಾಗಿ ತಿಕೋಟಾ ಭಾಗದ ರೈತರು ಕೃಷ್ಣವೇಣಿ ಎಫ್‌ಪಿಒ ಮೂಲಕ ಅಮೆರಿಕದ ಕ್ಯಾಲಿಫೋರ್ನಿಯಾ ಮೂಲದ ಆರಾ-36 ದ್ರಾಕ್ಷಿ ತಳಿಯನ್ನು ಸುಮಾರು 200 ಎಕರೆಗೂ ಅಧಿಕ ಪ್ರದೇಶದಲ್ಲಿ ಬೆಳೆಯುತ್ತಿದ್ದಾರೆ. ಇದರೊಂದಿಗೆ ಸ್ಪೇನ್ ಮೂಲದ ಟ್ಯಾಂಗೋ ಕಿಂಗ್ ಮೋಸಂಬಿ ತಳಿಯನ್ನು ಜಿಲ್ಲೆಯಲ್ಲಿಯೂ ಪರಿಚಯಿಸುವ ಪ್ರಯತ್ನಗಳು ನಡೆಯುತ್ತಿವೆ. ಸ್ತಬ್ಧಚಿತ್ರದಲ್ಲಿ ಸಚಿವ ಡಾ. ಎಂ.ಬಿ. ಪಾಟೀಲ ಅವರು ರೈತರ ಹೊಲದಲ್ಲಿ ಆರಾ-36 ದ್ರಾಕ್ಷಿ ಹಣ್ಣನ್ನು ಸವಿಯುತ್ತಿರುವ ಚಿತ್ರಣದೊಂದಿಗೆ ಆಧುನಿಕ ನೀರಾವರಿ ವ್ಯವಸ್ಥೆ ಹಾಗೂ ಹೊಸ ತಳಿಗಳ ಕೃಷಿ ಪದ್ಧತಿಯನ್ನು ಪ್ರದರ್ಶಿಸಲಾಗಿದೆ. ನೀರಾವರಿ ಸೌಲಭ್ಯಗಳ ವಿಸ್ತರಣೆಯಿಂದ ಜಿಲ್ಲೆಯ ರೈತರು ಸಾಂಪ್ರದಾಯಿಕ ಕೃಷಿಯೊಂದಿಗೆ ಹೊಸ ತಳಿಗಳ ಬೆಳೆಗಳತ್ತಲೂ ಆಸಕ್ತಿ ತೋರುತ್ತಿರುವುದನ್ನು ಸ್ತಬ್ಧಚಿತ್ರದಲ್ಲಿ ಬಿಂಬಿಸಲಾಗಿದೆ.

ನೀರಾವರಿ ಸೌಲಭ್ಯಗಳ ವಿಸ್ತರಣೆ, ತಂತ್ರಜ್ಞಾನ ಆಧಾರಿತ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳ ಮೂಲಕ ವಿಜಯಪುರ ಜಿಲ್ಲೆಯಲ್ಲಿ ಕೃಷಿ ಕ್ಷೇತ್ರದ ಹೊಸ ಬೆಳವಣಿಗೆಗಳನ್ನು ರಾಜ್ಯೋತ್ಸವದ ಸ್ತಬ್ಧಚಿತ್ರವು ಪರಿಚಯಿಸಿದೆ. ಜಿಲ್ಲೆಯ ನೀರಾವರಿ ಪ್ರಗತಿ ಹಾಗೂ ತೋಟಗಾರಿಕೆ ಕ್ಷೇತ್ರದ ಸಾಧನೆಗಳನ್ನು ರಾಜ್ಯೋತ್ಸವದ ಸ್ತಬ್ಧಚಿತ್ರದ ಮೂಲಕ ಬಿಂಬಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಸಿದ್ರಾಮಯ್ಯ ಬರಗಿಮಠ ಅವರು ‘ವಿಜಯವಾಣಿ’ಯೊಂದಿಗೆ ಅಭಿಪ್ರಾಯ ಹಂಚಿಕೊಂಡರು. ಅಧಿಕಾರಿ ಭಗವಂತ ಜಿಗಜಿಣಗಿ ಮತ್ತಿತರರಿದ್ದರು.