ವಿಜಯಪುರ ನಗರದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಸಚಿವ ಎಂ.ಬಿ. ಪಾಟೀಲ ಸುದ್ದಿಗೋಷ್ಠಿ ನಡೆಸಿದರು. ಮಲ್ಲಿಕಾರ್ಜುನ ಲೋಣಿ, ಪ್ರೊ.ರಾಜು ಆಲಗೂರ ಮತ್ತಿತರರಿದ್ದಾರೆ. 
ವಿಜಯಪುರ

ದಾಖಲೆ ರಾಮಯ್ಯಗೆ ಸಸ್ಪೆನ್ಸ್ ಗೌರವ ! ಸಚಿವ ಎಂ.ಬಿ. ಪಾಟೀಲ ಹಾಗೇಕೆ ಹೇಳಿದರು...?

ಪ್ರಮುಖ ಮುಖ್ಯಾಂಶಗಳು

  • ಕಿತ್ತೂರು ರಾಣಿ ಚನ್ನಮ್ಮ ಮೂರ್ತಿ ಲೋಕಾರ್ಪಣೆ
  • ರಾಜ್ಯದ ಪ್ರಥಮ ವೆಲೊಡ್ರೋಮ್ ಉದ್ಘಾಟನೆ
  • ಜಿಲ್ಲಾಡಳಿತ ಭವನ ಕಾಮಗಾರಿಗೆ ಭೂಮಿ ಪೂಜೆ
ವಿಜಯಪುರ: ರಾಜ್ಯದಲ್ಲಿ ಸುದೀರ್ಘಾವಧಿ ಸಿಎಂ ಆಗುವ ಮೂಲಕ ದಾಖಲೆ ಬರೆದ ಸಿದ್ದರಾಮಯ್ಯ ಅವರಿಗೆ ಭವ್ಯವಾಗಿ ಗೌರವಿಸಲು ಐತಿಹಾಸಿಕ ಗುಮ್ಮಟ ನಗರಿ ಸಜ್ಜಾಗಿದ್ದು, ಸದ್ಯಕ್ಕೆ ಆ ಗೌರವದ ವಿವರ ಸಸ್ಪೆನ್ಸ್ ಆಗಿಟ್ಟಿರುವುದಾಗಿ ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ತಿಳಿಸಿದರು.
ಡಿ. ದೇವರಾಜ ಅರಸು ಅವರ ದಾಖಲೆ ಹಿಂದಿಕ್ಕಿರುವ ಸಿಎಂ ಸಿದ್ದರಾಮಯ್ಯ ಅವರು ಜ. 9 ರಂದು ವಿಜಯಪುರ ಜಿಲ್ಲೆಗೆ ಆಗಮಿಸುತ್ತಿದ್ದಾರೆ. ದಾಖಲೆ ಬರೆದ ಕೇವಲ ಮೂರು ದಿನಗಳಲ್ಲಿ ವಿಜಯಪುರದಲ್ಲೂ ಅಭಿವೃದ್ಧಿ ಕಾಮಗಾರಿಗಳ ದಾಖಲೆ ಬರೆಯುತ್ತಿರುವ ಸಿದ್ಧರಾಮಯ್ಯ ಅವರಿಗೆ ಅದ್ಧೂರಿಯಾಗಿ ಗೌರವಿಸಲು ತೀರ್ಮಾನಿಸಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ದೇಶ ರಕ್ಷಣೆಯ ವಿಷಯ ಬಂದಾಗ ಇಂದಿರಾ ಗಾಂಧೀ ಅವರನ್ನು ಬಂಗಾರದಿಂದ ತೂಗಿದ ಜಿಲ್ಲೆ ನಮ್ಮದು, ಹೀಗಾಗಿ ಈ ಭಾಗಕ್ಕೆ ಕೊಡುಗೆ ನೀಡಿದ ಸಿದ್ಧರಾಮಯ್ಯ ಅವರನ್ನು ಸಹ ಅಭೂತಪೂರ್ವವಾಗಿ ಸನ್ಮಾನಿಸಲಾಗುವುದು, ಅದು ಯಾವ ರೀತಿ ಎನ್ನುವುದು ಸಮಾರಂಭದಲ್ಲಿಯೇ ಗೊತ್ತಾಗಲಿದೆ ಎಂದರು.
ಕೇಂದ್ರ ಬಸ್ ನಿಲ್ದಾಣದ ಎದುರು ನಿರ್ಮಿಸಲಾಗಿರುವ ಸ್ವಾತಂತ್ರೃ ಹೋರಾಟಗಾರ್ತಿ ಕಿತ್ತೂರು ರಾಣಿ ಚನ್ನಮ್ಮ ಪ್ರತಿಮೆ ಮತ್ತು ಸೈಕ್ಲಿಂಗ್ ವೆಲೊಡ್ರೋಮ್ ಲೋಕಾರ್ಪಣೆ ಹಾಗೂ ಜಿಲ್ಲಾಡಳಿತ ಭವನ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸುವುದು ಸೇರಿದಂತೆ ವಿವಿಧ ಇಲಾಖೆಗಳ ಅಭಿವೃದ್ಧಿ ಪರ ಯೋಜನೆಗಳಿಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡುತ್ತಿದ್ದಾರೆ. ನಗರದ ದರಬಾರ್ ಮೈದಾನದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಈ ಕಾರ್ಯಕ್ರಮ ಐತಿಹಾಸಿಕ ದಾಖಲೆ ಬರೆಯಲಿದೆ ಎಂದರು.

ಚನ್ನಮ್ಮ ಹೆಸರು ನಾಮಕರಣ

ಕಿತ್ತೂರು ರಾಣಿ ಚನ್ನಮ್ಮ ಮೂರ್ತಿ ಪ್ರತಿಷ್ಟಾಪನೆಗೆ ಸ್ಥಳಾವಕಾಶ ಕಲ್ಪಿಸಿದೆ. ಮಾತ್ರವಲ್ಲ, ಇದೀಗ ಕೇಂದ್ರ ಬಸ್ ನಿಲ್ದಾಣಕ್ಕೆ ಚನ್ನಮ್ಮಳ ಹೆಸರು ನಾಮಕರಣ ಮಾಡುವಂತೆ ಮನವಿ ಮಾಡಿದ ಪ್ರಯುಕ್ತ ಸಚಿವ ರಾಮಲಿಂಗಾ ರೆಡ್ಡಿ ಹಾಗೂ ಸಿಎಂ ಸಿದ್ದರಾಮಯ್ಯ ಸಮ್ಮತಿಸಿದ್ದಾರೆ. ಈ ನಾಮಫಲಕವನ್ನು ಸಹ ಮುಖ್ಯಮಂತ್ರಿಗಳು ಅನಾವರಣಗೊಳಿಸಲಿದ್ದಾರೆ ಎಂದರು.
ವಿಮಾನ ನಿಲ್ದಾಣಕ್ಕೆ ಮಹಾತ್ಮ ಬಸವೇಶ್ವರರ ಹೆಸರು, ರೈಲ್ವೆ ನಿಲ್ದಾಣಕ್ಕೆ ಸಿದ್ಧೇಶ್ವರ ಸ್ವಾಮೀಜಿಗಳ ಹೆಸರು ನಾಮಕರಣ ಮಾಡಲು ಈಗಾಗಲೇ ನಿರ್ಧರಿಸಲಾಗಿದೆ. ಈಗಾಗಲೇ ಮಹಿಳಾ ವಿವಿಗೆ ಅಕ್ಕಮಹಾದೇವಿ ಹೆಸರು ಇರಿಸಲಾಗಿದೆ. ಇಬ್ರಾಹಿಂ ಆದಿಲ್‌ಷಾಹಿ ಅವರ ಹೆಸರು ಚಿರಸ್ಥಾಯಿಯಾಗಿಸುವ ನಿಟ್ಟಿನಲ್ಲಿಯೂ ಕಾರ್ಯ ಯೋಜನೆ ರೂಪಿಸಲಾಗುವುದು ಎಂದು ಭರವಸೆ ನೀಡಿದರು.

ಒಮ್ಮತದಿಂದ ಪ್ರತಿಮೆ ಲೋಕಾರ್ಪಣೆ

ವೀರ ರಾಣಿ ಕಿತ್ತೂರ ಚನ್ನಮ್ಮ ಇಡೀ ದೇಶದ ಆಸ್ತಿ. ಕೂಡಲಸಂಗಮದ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ, ಹರಿಹರ ಪೀಠದ ಜಗದ್ಗುರು ಸೇರಿದಂತೆ ಎಲ್ಲರೂ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಯಾವ ಭಿನ್ನಾಭಿಪ್ರಾಯವಾಗಲಿ, ಅಪಸ್ವರವಾಗಲಿ ಇಲ್ಲವೇ ಇಲ್ಲ. ನಗರ ಶಾಸಕ ಯತ್ನಾಳ ಸೇರಿದಂತೆ ಎಲ್ಲರೂ ಭಾಗವಹಿಸಲಿದ್ದಾರೆ ಎಂದು ಸಚಿವ ಎಂ.ಬಿ. ಪಾಟೀಲ ಪ್ರತಿಕ್ರಿಯಿಸಿದರು. ಕೇಂದ್ರ ಬಸ್ ನಿಲ್ದಾಣದಲ್ಲಿ ಸಂಗೊಳ್ಳಿ ರಾಯಣ್ಣ ಭವ್ಯ ಮೂರ್ತಿ ಪ್ರತಿಷ್ಠಾಪನೆ ಮಾಡುವ ನಿಟ್ಟಿನಲ್ಲಿ ಸಮಾಜ ಬಾಂಧವರು ಮನವಿ ಮಾಡಿದ್ದು, ಪರಿಶೀಲಿಸುವುದಾಗಿ ಭರವಸೆ ನೀಡಿದರು.

ಸೈಕ್ಲಿಂಗ್ ಅಕಾಡೆಮಿ ಸ್ಥಾಪನೆ

ಸೈಕ್ಲಿಂಗ್ ಕಾಶಿ ಎಂದೇ ಹೆಸರಾದ ವಿಜಯಪುರ ಜಿಲ್ಲೆಯಲ್ಲಿ ವೆಲೊಡ್ರೋಮ್ ಲೋಕಾರ್ಪಣೆಯಾಗುತ್ತಿದ್ದು, ಕ್ರೀಡಾ ಚುಟುವಟಿಕೆಗೆ ಇನ್ನಷ್ಟು ಬಲ ನೀಡುವ ದೃಷ್ಟಿಯಿಂದ ಸೈಕ್ಲಿಂಗ್ ಅಕಾಡೆಮಿ ಸ್ಥಾಪಿಸಲು ಮಹತ್ವದ ಚರ್ಚೆ ನಡೆದಿದೆ, ವಿವಿಧ ಕಾರ್ಪೋರೇಟ್ ಕಂಪನಿಗಳ ಸಹಯೋಗದೊಂದಿಗೆ ಈ ಅಕಾಡೆಮಿ ಸ್ಥಾಪಿಸಿ ಸೈಕ್ಲಿಂಗ್‌ಗೆ ಅಮೋಘ ಸೇವೆ ಸಲ್ಲಿಸಿದವರ ಹೆಸರು ಇರಿಸಲಾಗುವುದು ಎಂದು ಸಚಿವ ಪಾಟೀಲ ಇದೇ ವೇಳೆ ಪ್ರಕಟಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಮಾಜಿ ಶಾಸಕರಾದ ಪ್ರೊ.ರಾಜು ಆಲಗೂರ, ಡಾ.ಮಕ್ಬೂಲ್ ಬಾಗವಾನ, ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಕೆಪಿಸಿಸಿ ಸದಸ್ಯ ಅಬ್ದುಲ್‌ಹಮೀದ್ ಮುಶ್ರೀಫ್, ಮಹ್ಮದ್‌ರಫೀಕ್ ಟಪಾಲ್ ಮತ್ತಿತರರಿದ್ದರು.