ಇಂಡಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ ಸಮಾರಂಭದಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿದರು. ವೈ.ವೈ. ಕೊಕ್ಕನವರ, ಎ.ಐ. ಹಂಜಗಿ ಮತ್ತಿತರರಿದ್ದಾರೆ. 
ವಿಜಯಪುರ

ವಿದ್ಯಾರ್ಥಿಗಳಿಗೆ ಎಐ ತಂತ್ರಜ್ಞಾನದ ಅರಿವು ಅಗತ್ಯ; ಶಾಸಕ ಯಶವಂತರಾಯಗೌಡ ಪಾಟೀಲ

ಪ್ರಮುಖ ಮುಖ್ಯಾಂಶಗಳು

  • ಸ್ವಾಗತ ಸಮಾರಂಭದ ಉದ್ಘಾಟನೆ
  • ಸಾಂಸ್ಕೃತಿಕ ಚಟುವಟಿಕೆಗಳಿಗೆ ಚಾಲನೆ
  • ವಿದ್ಯಾರ್ಥಿಗಳಿಗೆ ಅನುಪಮ ಮಾರ್ಗದರ್ಶನ
ವಿಜಯಪುರ: ‘ವಿದ್ಯಾರ್ಥಿಗಳು ಆಧುನಿಕ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ (ಎಐ) ಹಾಗೂ ಕಲಿಕೆಯೊಂದಿಗೆ ಸಂಸ್ಕಾರಿತ ಜೀವನವನ್ನು ರೂಢಿಸಿಕೊಳ್ಳಬೇಕು’ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಇಂಡಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಪ್ರಸಕ್ತ ಶೈಕ್ಷಣಿಕ ಸಾಲಿನ ಸಾಂಸ್ಕೃತಿಕ, ಕ್ರೀಡೆ, ರೆಡ್‌ಕ್ರಾಸ್, ಸ್ಕೌಟ್ಸ್ ಮತ್ತು ಗೈಡ್ಸ್, ಎನ್‌ಎಸ್‌ಎಸ್ ಮತ್ತು ವಿವಿಧ ಚಟುವಟಿಕೆಗಳ ಉದ್ಘಾಟನೆ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿ ಡಾ. ವೈ.ವೈ. ಕೊಕ್ಕನವರ ವಿದ್ಯಾರ್ಥಿಗಳಿಗೆ ಮೌಲ್ಯ ಆಧಾರಿತ ಶಿಕ್ಷಣ ಕುರಿತು ಅನೇಕ ಉದಾಹರಣೆಗಳನ್ನು ಉಲ್ಲೇಖಿಸುವುದರೊಂದಿಗೆ ಮಾತನಾಡಿದರು.
ಪ್ರಾಚಾರ್ಯ ಎ.ಐ. ಹಂಜಗಿ ಮಾತನಾಡಿ, ವಿಧ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಯುಗದಲ್ಲಿ ಶಿಸ್ತಿನ ಶಿಕ್ಷಣದ ಅವಶ್ಯಕತೆ ಕುರಿತು ತಿಳಿಸಿದರಲ್ಲದೇ, ಉತ್ತಮ ವ್ಯಕ್ತಿತ್ವ ಅಳವಡಿಸಿಕೊಳ್ಳುವುದರ ಜೊತೆಗೆ ಸದ್ಗುಣ ಮತ್ತು ಸದ್ಭಾವದೊಂದಿಗೆ ಶೈಕ್ಷಣಿಕ ಸಾಧನೆಯಲ್ಲಿ ತೊಡಗಿಸಿಕೊಳ್ಳಬೇಕೆಂದರು.
ಸತತ ಪರಿಶ್ರಮ ಮತ್ತು ಪ್ರಯತ್ನವೇ ಸಾಧನೆಗೆ ರಹದಾರಿ. ಪ್ರಾಮಾಣಿಕ ಪ್ರಯತ್ನದಿಂದ ಮಾತ್ರ ಪ್ರತಿಫಲ ಸಿಗಲು ಸಾಧ್ಯ ಎಂದರು.
ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥ ರವಿಕುಮಾರ ಅರಳಿಯ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಧರ್ಮಣ್ಣ ಕಾಗವಾಡಕರ, ರಮೇಶ ಪವಾರ, ನೀಲಾಬಾಯಿ ಆರ್., ಹೀನಾಕೌಸರ್ ಅರಬ್, ಧನರಾಜ, ಗೊಲ್ಲ ಶಿವರಾಜ, ವಿದ್ಯಾರ್ಥಿ ಪ್ರತಿನಿಧಿ ಸುಮಾ ಹಲಸಂಗಿ ಮತ್ತಿತರರಿದ್ದರು.