ವಿಜಯಪುರ ನಗರದಲ್ಲಿ ವಿವಿಧ ಸಂಘಟನೆಗಳು ಮನವಿ ಸಲ್ಲಿಸಿದವು. 
ವಿಜಯಪುರ

ಸರ್ಕಾರಿ ವೈದ್ಯಕೀಯ ಕಾಲೇಜ್‌ಗಾಗಿ ಹೋರಾಟ, ಧರಣಿ ನಿರತರ ಬಂಧನಕ್ಕೆ ತೀವ್ರ ವಿರೋಧ, ವಿವಿಧ ಸಂಘಟನೆಗಳಿಂದ ಪ್ರತಿಭಟನೆ-ಮನವಿ

ಪ್ರಮುಖ ಮುಖ್ಯಾಂಶಗಳು

  • ಸರ್ಕಾರಿ ವೈದ್ಯಕೀಯ ಕಾಲೇಜ್ ಸ್ಥಾಪನೆಗೆ ಆಗ್ರಹ
  • ಪಿಪಿಪಿ ಮಾದರಿಗೆ ತೀವ್ರ ವಿರೋಧ
  • ಧರಣಿ ನಿರತರ ಬಂಧನಕ್ಕೆ ವ್ಯಾಪಕ ವಿರೋಧ
  • ಎಫ್‌ಐಆರ್ ರದ್ದುಗೊಳಿಸಲು ಆಗ್ರಹ
ವಿಜಯಪುರ: ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವ (ಪಿಪಿಪಿ) ಮಾದರಿ ಕೈಬಿಟ್ಟು ಕೂಡಲೇ ಸರ್ಕಾರಿ ವೈದ್ಯಕೀಯ ಕಾಲೇಜ್ ಸ್ಥಾಪಿಸಲು ಆಗ್ರಹಿಸಿ ನಡೆಯುತ್ತಿದ್ದ ಧರಣಿಯ ಟೆಂಟ್ ತೆರವುಗೊಳಿಸಿ, ಹೋರಾಟಗಾರರ ಮೇಲೆ ಎಫ್‌ಐಆರ್ ದಾಖಲಿಸಿದ್ದಲ್ಲದೇ ಕೆಲವರನ್ನು ಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ಸ್ವಾಮೀಜಿ ಮೇಲಿನ ಹಲ್ಲೆ, ಹೋರಾಟಗಾರ್ತಿಯೊಬ್ಬಳ ಮೇಲಿನ ದೌರ್ಜನ್ಯಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಅಲ್ಲದೇ, ಕೂಡಲೇ ಎಫ್‌ಐಆರ್ ರದ್ದುಗೊಳಿಸಿ ಹೋರಾಟಗಾರರನ್ನು ಬಿಡುಗೊಳಿಸಬೇಕೆಂಬ ಆಗ್ರಹ ಹೆಚ್ಚಾಗಿದೆ.

ಕೆಆರ್‌ಎಸ್ ಪಕ್ಷದಿಂದ ಮನವಿ

ಸೋಮವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿರುವ ಕೆಆರ್‌ಎಸ್ ಪಕ್ಷದ ಪದಾಧಿಕಾರಿಗಳು, ಕೂಡಲೇ ಎಫ್‌ಆರ್ ರದ್ದುಗೊಳಿಸಿ ಬಂಧಿತರನ್ನು ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿದ್ದಾರೆ.
ಸರ್ಕಾರಿ ವೈದ್ಯಕೀಯ ಕಾಲೇಜ್‌ಗಾಗಿ ಶಾಂತಿಯುತವಾಗಿಯೇ ಹೋರಾಟ ನಡೆದಿದ್ದು, 106 ದಿನಗಳ ಕಾಲ ಅತ್ಯಂತ ಅಚ್ಚುಕಟ್ಟಾಗಿ ಧರಣಿ ನಡೆಸಲಾಗಿದೆ. ಎಲ್ಲೂ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಸಾಂವಿಧಾನಿಕ ಚೌಕಟ್ಟಿನಲ್ಲಿ ಹೋರಾಟ ನಡೆಸಲಾಗಿದೆ. ಆದರೂ, ಧರಣಿ ಹತ್ತಿಕ್ಕಿರುವ ರಾಜ್ಯ ಸರ್ಕಾರದ ಕ್ರಮ ಖಂಡನೀಯ ಎಂದು ಕೆಆರ್‌ಎಸ್ ಪಕ್ಷದ ಪದಾಧಿಕಾರಿಗಳು ಆಕ್ರೋಶ ಹೊರಹಾಕಿದ್ದಾರೆ.
ಪೊಲೀಸ್ ದೌರ್ಜನ್ಯದ ಮೂಲಕ ಹೋರಾಟ ಹತ್ತಿಕ್ಕಿರುವುದು ನಾಚಿಕೆಗೇಡಿನ ಸಂಗತಿ. ಸುಳ್ಳು ಪ್ರಕರಣ ದಾಖಲಿಸಿ 6 ಜನ ಹಿರಿಯ ಹೋರಾಟಗಾರರನ್ನು ಬಂಧಿಸಿದ್ದು ಖಂಡನೀಯ ಎಂದು ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಾನಂದ ಯಡಹಳ್ಳಿ ತಿಳಿಸಿದರು.
ಮುಖಂಡರಾದ ದುರ್ಗಪ್ಪ ಬೂದಿಹಾಳ, ವಿಕ್ರಮ ವಾಘಮೋರೆ, ಸೀನು ಹಿಪ್ಪರಗಿ, ರಾಕೇಶ ಇಂಗಳಗಿ, ಪ್ರವೀಣ ಕನಸೇ, ಸುರೇಂದ್ರ ಕುನಸಲೇ, ನಬಿರಸೂಲ ಹುಣಶ್ಯಾಳ, ಹಮಿದ ಇನಾಮದಾರ, ಸಿದ್ದರಾಯ ಬಿರಾದಾರ, ಅಣ್ಣಾ ಪೂಜಾರಿ, ಗಣಪತಿ ರಾಠೋಡ, ಮಲ್ಲಿಕಾರ್ಜುನ ಬಿರಾದಾರ ಮತ್ತಿತರರಿದ್ದರು.

ಆಮ್ ಆದ್ಮಿ ಪಕ್ಷದಿಂದ ತೀವ್ರ ಆಕ್ರೋಶ

ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನಾ ಹೋರಾಟ ಸಮಿತಿ ಸದಸ್ಯ, ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಭೋಗೇಶ ಸೋಲಾಪುರ ಸೇರಿದಂತೆ ಆರು ಜನ ಹೋರಾಟಗಾರ ಬಂಧನಕ್ಕೆ ಆಮ್ ಆದ್ಮಿ ಪಕ್ಷ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಬಂಧಿತರನ್ನು ಬಿಡುಗಡೆಗೊಳಿಸಬೇಕೆಂದು ಪಕ್ಷದ ರಾಜ್ಯ ಕಾರ್ಯಾಧ್ಯಕ್ಷ ಸೀತಾರಾಮ ಗುಂಡಪ್ಪ ಆಗ್ರಹಿಸಿದರು.
ಪೊಲೀಸ್ ಇಲಾಖೆಯನ್ನು ಬಳಸಿಕೊಂಡು ಹೋರಾಟ ಹತ್ತಿಕ್ಕಲಾಗಿದೆಯಲ್ಲದೇ ಹೋರಾಟಗಾರರನ್ನು ಬಂಧಿಸಿರುವುದು ಖಂಡನೀಯ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಉತ್ತರ ಕರ್ನಾಟಕ ಉಸ್ತುವಾರಿ ಅರ್ಜುನ ಹಲಗಿಗೌಡರ ಮಾತನಾಡಿ, ರಾತ್ರೋ ರಾತ್ರಿ ಟೆಂಟ್ ತೆರವುಗೊಳಿಸಿರುವುದು ಸರ್ವಾಧಿಕಾರಿ ಧೋರಣೆಗೆ ಹಿಡಿದ ಕೈಗನ್ನಡಿ, ಅಭಿವ್ಯಕ್ತಿ ಸ್ವಾತಂತ್ರೃದ ಮೇಲಿನ ದಾಳಿ ಎಂದರು.
ಮಾಧ್ಯಮ ವಕ್ತಾರ ಸಂಜೀವಕುಮಾರ ಶೆಟಗಾರ ಮಾತನಾಡಿ, ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರಿ ಸಂಸ್ಥೆಗಳ ಮಾರಾಟದಲ್ಲಿ ಪೈಪೋಟಿಗಿಳಿದಿವೆ ಎಂದರು.
ರಾಜ್ಯ ಉಪಾಧ್ಯಕ್ಷ ಶ್ರೀಕಾಂತ ರಾವ್, ವಿಜಯ ಶರ್ಮಾ, ಫರೀದ್ ನದಾಫ್, ಶಬ್ಬೀರ ಪಟೇಲ, ರಮೇಶ ದೊಡ್ಡಮನಿ, ತಸ್ಮೀಯಾ ತಳೇವಾಡ, ಶಿವು ಕೋಳಾರಿ, ಪ್ರಕಾಶ ಸಬರದ, ಸೋಮು ಹಟ್ಟಿ ಮತ್ತಿತರರಿದ್ದರು.

ಪತ್ರಕರ್ತರಿಂದ ಖಂಡನೆ; ಮನವಿ

ಸರ್ಕಾರಿ ವೈದ್ಯಕೀಯ ಕಾಲೇಜ್ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ಹಿರಿಯ ಪತ್ರಕರ್ತ ಅನೀಲ ಹೊಸಮನಿ ಸೇರಿದಂತೆ ವಿವಿಧ ಹೋರಾಟಗಾರರ ಬಂಧನ ಖಂಡಿಸಿರುವ ಪತ್ರಕರ್ತರು ಸೋಮವಾರ ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಪತ್ರಕರ್ತರಾದ ನವೀದ್‌ಅಂಜುಮ್ ಮಮದಾಪುರ, ಪರಶುರಾಮ ಶಿವಶರಣ, ಯುಸೂಫ್ ನೇವಾರ, ಖಾಜಾಮೈನುದ್ದೀನ್ ಪಟೇಲ್, ಕಲ್ಲು ಶಿವಶರಣ, ಸಂತೋಷ ಮಲಘಾಣಕರ, ಅಬ್ಬಾಸಲಿ ಬಸರಗಿ, ಮೊಹ್ಮದ್ ಎಹಕಾಮ್ ಕರ್ಜಗಿ, ಶಖೀಲ್‌ಅಹ್ಮದ್ ಗೋಡೆಸವಾರ, ರಜಾಕ್ ಇನಾಮದಾರ, ಮಕ್ಸೂದ್‌ಅಹ್ಮದ್ ಚೌಧರಿ, ಝೈದ್ ಇನಾಮದಾರ, ಸೂಫಿಯಾನ ಮುಲ್ಲಾ, ಇರ್ಫಾನ್ ಬೀಳಗಿ ಮತ್ತಿತರರಿದ್ದರು.

ದಲಿತ ವಿದ್ಯಾರ್ಥಿ ಪರಿಷತ್‌ನಿಂದ ಆಕ್ರೋಶ

ಸರ್ಕಾರಿ ವೈದ್ಯಕೀಯ ಕಾಲೇಜ್ ಸ್ಥಾಪನೆಗೆ ಆಗ್ರಹಿಸಿ ಧರಣಿ ನಡೆಸುತ್ತಿದ್ದ ಹೋರಾಟಗಾರರನ್ನು ಬಂಧಿಸಿರುವ ಸರ್ಕಾರದ ನಡೆ ಖಂಡಿಸಿರುವ ದಲಿತ ವಿದ್ಯಾರ್ಥಿ ಪರಿಷತ್‌ನ ಮುಖಂಡರು ಕೂಡಲೇ ಬಂಧಿತರನ್ನು ಬಿಡುಗಡೆಗೊಳಿಸದೇ ಹೋದರೆ ಹೋರಾಟದ ಸ್ವರೂಪವೇ ಬದಲಾಗಲಿದೆ ಎಂದು ಎಚ್ಚರಿಸಿದ್ದಾರೆ.
ಪೊಲೀಸರ ವರ್ತನೆ ದಲಿತ ಹಾಗೂ ಶೋಷಿತ ಸಮುದಾಯಗಳಿಗೆ ನೋವುಂಟು ಮಾಡಿದ್ದು, ಮುಂದಿನ ದಿನಗಳಲ್ಲಿ ಬೇರೆ ರೀತಿಯ ಸಮಸ್ಯೆಗಳಿಗೆ ಕಾರಣವಾಗುವ ಸಾಧ್ಯತೆ ಇದೆ. ಆದ್ದರಿಂದ ಕೂಡಲೇ ಬೇಷಾರತ್ತಾಗಿ ಬಿಡುಗಡೆ ಮಾಡಬೇಕು ಎಂದು ದಲಿತ್ ವಿದ್ಯಾರ್ಥಿ ಪರಿಷತ್ ರಾಜ್ಯಾಧ್ಯಕ್ಷ ಶ್ರೀನಾಥ ಪೂಜಾರಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಮುಖಂಡರಾದ ಪ್ರಭುಗೌಡ ಪಾಟೀಲ, ಚನ್ನು ಕಟ್ಟಿಮನಿ, ಅಕ್ಷಯಕುಮಾರ ಅಜಮನಿ ಇದ್ದರು.