- ರಾಜ್ಯದಲ್ಲಿ ಹೆಚ್ಚಿದ ಬೀದಿ ನಾಯಿಗಳ ಹಾವಳಿ
- ನಾಯಿ ಕಡಿತ ಪ್ರಕರಣದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ
- ಬಿಬಿಎಂಪಿ ಬಿಟ್ಟರೆ ವಿಜಯಪುರದಲ್ಲೇ ಹೆಚ್ಚು ಪ್ರಕರಣ
ಬೀದಿ ನಾಯಿಗಳ ಹಾವಳಿ ರಾಷ್ಟ್ರೀಯ ಸಮಸ್ಯೆಯಾಗಿ ಪರಿಣಮಿಸಿದೆ. ಸುಪ್ರೀಂ ಕೋರ್ಟ್ ಸಹ ಈ ಕುರಿತು ನಿರ್ದೇಶನ ನೀಡಿದ್ದು, ಪ್ರಾಣಿ ಪ್ರಿಯರಿಂದ ಪರ-ವಿರೋಧ ಚರ್ಚೆ ಕೂಡ ಜೋರಾಗುತ್ತಿದೆ. ಏತನ್ಮಧ್ಯೆ ರಾಜ್ಯದಲ್ಲಿ ಘಟಿಸಿರುವ ಬೀದಿ ನಾಯಿ ಕಡಿತದ ಪ್ರಕರಣಗಳ ಅಂಕಿ-ಅಂಶಗಳು ಬೆಚ್ಚಿ ಬೀಳಿಸುವಂತಿದ್ದು, ಬಿಬಿಎಂಪಿ ಬಿಟ್ಟರೆ ವಿಜಯಪುರದಲ್ಲಿಯೇ ಅತೀ ಹೆಚ್ಚು ಪ್ರಕರಣ ಕಂಡು ಬಂದಿರುವುದು ಗುಮ್ಮಟ ನಗರಿಯರ ನಿದ್ದೆಗೆಡಿಸಿದೆ !
ಪ್ರಸಕ್ತ ಸಾಲಿನಲ್ಲಿ ನಾಯಿಕಡಿತ ಪ್ರಕರಣಗಳಲ್ಲಿ ವಿಜಯಪುರಕ್ಕೆ ಎರಡನೇ ಸ್ಥಾನ ಲಭಿಸಿದ್ದು, ಮೊದಲ ಸ್ಥಾನದಲ್ಲಿ ಬಿಬಿಎಂಪಿ ಇದೆ. ಹೀಗಾಗಿ ಶ್ವಾನ ಆರೈಕೆ ಕೇಂದ್ರ ಸ್ಥಾಪನೆ ಅನಿವಾರ್ಯವಾಗಿದ್ದು, ಬೆಂಗಳೂರು ಹೊರತುಪಡಿಸಿದರೆ ರಾಜ್ಯದ ಎರಡನೇ ಶ್ವಾನ ಆರೈಕೆ ಕೇಂದ್ರಕ್ಕೆ ವಿಜಯಪುರದಲ್ಲಿ ಭೂಮಿ ಪೂಜೆ ಕೂಡ ನೆರವೇರಿಸಲಾಗಿದೆ. ರಾಜ್ಯ ಸಭೆ ಸದಸ್ಯೆ ಸುಧಾಮೂರ್ತಿ ಅವರ ಅನುದಾನದಲ್ಲಿ ಶ್ವಾನ ಆರೈಕೆ ಕೇಂದ್ರ ಸ್ಥಾಪಿಸಲಾಗುತ್ತಿದೆ. ಆದರೆ, ತ್ವರಿತವಾಗಿ ಕೇಂದ್ರ ನಿರ್ಮಾಣವಾಗದೇ ಇದ್ದರೆ ಪ್ರಕರಣಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಆತಂಕ ಮನೆ ಮಾಡಿದೆ.
26 ಸಾವಿರಕ್ಕೂ ಅಧಿಕ ಪ್ರಕರಣ
ಜಿಲ್ಲೆಯಲ್ಲಿ ಕಳೆದೆರಡು ವರ್ಷಗಳಿಗಿಂತಲೂ ಈ ವರ್ಷ ನಾಯಿಕಡಿತ ಪ್ರಕರಣಗಳು ಹೆಚ್ಚಾಗಿವೆ. 2023ರಲ್ಲಿ 12263 ಪ್ರಕರಣಗಳು ಕಂಡು ಬಂದರೆ, 2024ನೇ ಸಾಲಿನಲ್ಲಿ 23409 ಪ್ರಕರಣಗಳು ಕಂಡು ಬಂದಿದ್ದವು. ಪ್ರಸಕ್ತ ಸಾಲಿನಲ್ಲಿ (ಅಕ್ಟೋಬರ್‌ವರೆಗೆ) 26561 ನಾಯಿಕಡಿತ ಪ್ರಕರಣಗಳು ದಾಖಲಾಗಿದ್ದು, ಇನ್ನೂ ಅಧಿಕಗೊಳ್ಳುವ ಸಾಧ್ಯತೆ ಇದೆ.
ಹಳೆಯ ಐದು ತಾಲೂಕುಗಳ ಪೈಕಿ ವಿಜಯಪುರ ತಾಲೂಕಿನಲ್ಲಿಯೇ ಅತೀ ಹೆಚ್ಚು ನಾಯಿ ಕಡಿತ ಪ್ರಕರಣಗಳು ಕಂಡು ಬಂದಿವೆ. ನಂತರ ಇಂಡಿ, ಬಸವನಬಾಗೇವಾಡಿ ಹಾಗೂ ಸಿಂದಗಿಯಲ್ಲಿ ಅನುಕ್ರಮವಾಗಿ ಹೆಚ್ಚಿನ ಪ್ರಕರಣಗಳು ಕಂಡು ಬಂದಿದ್ದು, ಮುದ್ದೇಬಿಹಾಳ ಕೊನೆಯ ಸ್ಥಾನದಲ್ಲಿದೆ.
ಹೆಚ್ಚುತ್ತಿರುವ ಮಾಂಸದಂಗಡಿಗಳು, ಸಮರ್ಪಕವಾಗಿ ವಿಲೇವಾರಿಯಾಗದ ತ್ಯಾಜ್ಯ ಹಾಗೂ ನಾಯಿ ಸಾಕುವವರ ಸಂಖ್ಯೆ ಹೆಚ್ಚಾದ ಕಾರಣಕ್ಕೆ ವಿಜಯಪುರ ಬೀದಿನಾಯಿಗಳ ವಾಸ, ಸಂತಾನೋತ್ಪತ್ತಿಗೆ ಪ್ರಶಸ್ತ ತಾಣವಾಗುತ್ತಿದೆ ಎಂಬುದು ಪ್ರಜ್ಞಾವಂತರ ಅಭಿಮತ.
ಎಲ್ಲೆಲ್ಲೂ ನಾಯಿಗಳ ಹಿಂಡು
ವಿಜಯಪುರ ನಗರವೊಂದರಲ್ಲೇ ಅಂದಾಜು 16 ಸಾವಿರ ಬೀದಿ ನಾಯಿಗಳಿದ್ದು, ಜಿಲ್ಲೆಯಲ್ಲಿ 50 ಸಾವಿರವಾದರೂ ಇರಬಹುದೆಂಬ ಅಂದಾಜಿದೆ. ಎಲ್ಲೆ ನೋಡಿದರೂ ಬೀದಿ ನಾಯಿಗಳ ಹಿಂಡು ಕಾಣಿಸಿಕೊಳ್ಳುತ್ತಿದ್ದು, ಮಕ್ಕಳು, ಮಹಿಳೆಯರು ಮತ್ತು ಹಿರಿಯ ನಾಗರಿಕರ ನಿದ್ದೆಕೆಡಿಸಿದೆ. ಶಾಲೆ-ಕಾಲೇಜುಗಳು, ಅಂಗನವಾಡಿ ಕೇಂದ್ರಗಳು, ಶಿಶು ವಿಹಾರಗಳ ಸುತ್ತ ಕಟ್ಟೆಚ್ಚರ ವಹಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಮಕ್ಕಳನ್ನು ಮನೆಗೆ ಕರೆತರಲು ಶಾಲೆ, ಅಂಗನವಾಡಿ ಹಾಗೂ ಶಿಶುವಿಹಾರಗಳಿಗೆ ಕೈಯಲ್ಲಿ ಕೋಲು ಹಿಡಿದುಕೊಂಡು ಹೋಗುವ ಸ್ಥಿತಿ ಇದೆ. ಸ್ವಲ್ಪ ಯಾಮಾರಿದರೂ ನಾಯಿಗಳು ಅಟ್ಟಿಸಿಕೊಂಡು ಬರುತ್ತವೆಯಲ್ಲದೇ ಮೈಮೇಲೆ ಎರಗಿ ಗಾಯಗೊಳಿಸುತ್ತಿವೆ. ಹೀಗಾಗಿ ದಿನಬೆಳಗಾದರೆ ನಾಯಿಕಡಿತದ್ದೇ ಚರ್ಚೆಯಾಗುತ್ತಿದೆ. ಇನ್ನು ಬಯಲು ಶೌಚವನ್ನಾಶ್ರಯಿಸಿರುವವರ ಸ್ಥಿತಿಯಂತೂ ಊಹಿಸಲಸಾಧ್ಯ.
ಹೆಚ್ಚುತ್ತಿರುವ ನಾಯಿಕಡಿತ ಪ್ರಕರಣಗಳಿಗೆ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲಾಸ್ಪತ್ರೆ, ತಾಲೂಕಾಸ್ಪತ್ರೆಗಳಲ್ಲಿ ಈಗಾಗಲೇ ಲಸಿಕೆ ಸಂಗ್ರಹಿಸಿಟ್ಟುಕೊಳ್ಳಲಾಗಿದ್ದು, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ನೀಡಲಾಗುತ್ತಿದೆ. ಸ್ವಲ್ಪ ತರುಚಿದ ಗಾಯವಾದಾಗ ರೇಬೀಸ್ ವ್ಯಾಕ್ಸಿನ್ ನೀಡಲಾಗುತ್ತಿದ್ದು, 1731 ವ್ಯಾಕ್ಸಿನ್ ಸ್ಟಾಕ್ ಇದೆ. ಗಾಯವಾದರೆ ಇಮಿನೋಗ್ಲೋಬ್ಲಿನ್ ಲಸಿಕೆ ನೀಡಲಾಗುತ್ತಿದ್ದು, ಅಂಥ 880 ಇಂಜಕನ್ಸ್ ಸಂಗ್ರಹ ಇದೆ.