ವಿಜಯಪುರ ನಗರದ ಖಾಸಗಿ ಹೋಟೆಲ್‌ನಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಅರ್ಜುನ ಲಮಾಣಿ ಸುದ್ದಿಗೋಷ್ಠಿ ನಡೆಸಿದರು. ಪ್ರಮುಖರಾದ ಅಲ್ಲಾಭಕ್ಷ ವಾಲಿಕಾರ, ಶರಣಬಸು ಬೇನೂರ, ಹನುಮಂತ ಕೊಳಗಿ ಇದ್ದಾರೆ. 
ವಿಜಯಪುರ

ನಾಳೆ ರಾಜ್ಯಮಟ್ಟದ ಶೈಕ್ಷಣಿಕ ಮಹಾ ಸಮ್ಮೇಳನ

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಘಟಕದ ಅಧ್ಯಕ್ಷ ಅರ್ಜುನ ಲಮಾಣಿ ಹೇಳಿಕೆ
  • ಸಂಘದ ಸುವರ್ಣ ಮಹೋತ್ಸವ
  • ಗುರುವಂದನೆ-ಧನ್ಯತಾ ಸಮಾರಂಭ
ವಿಜಯಪುರ: ಬೆಂಗಳೂರಿನ ಅರಮನೆ ಮೈದಾನದಲ್ಲಿ ಫೆ. 28ರಂದು ರಾಜ್ಯಮಟ್ಟದ ಶೈಕ್ಷಣಿಕ ಮಹಾ ಸಮ್ಮೇಳನ, ಧನ್ಯತಾ ಸಮಾರಂಭ, ಸಂಘದ ಸುವರ್ಣ ಮಹೋತ್ಸವ ಹಾಗೂ ಗುರುವಂದನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಅರ್ಜುನ ಲಮಾಣಿ ತಿಳಿಸಿದರು.
ಸಂಘದ ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಿ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮಗಳು ನೆರವೇರಲಿದ್ದು, ಸಿಎಂ ಸಿದ್ದರಾಮಯ್ಯ ಉದ್ಘಾಟನೆ ನೆರವೇರಿಸುವರು. ಡಿಸಿಎಂ ಡಿ.ಕೆ. ಶಿವಕುಮಾರ, ಸಚಿವರಾದ ರಾಮಲಿಂಗ ರೆಡ್ಡಿ, ಡಾ. ಜಿ. ಪರಮೇಶ್ವರ, ಎಚ್.ಕೆ. ಪಾಟೀಲ, ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳಕರ, ಎನ್. ಚಲುವರಾಯಸ್ವಾಮಿ ಸೇರಿ ಅನೇಕರು ಪಾಲ್ಗೊಳ್ಳುವರು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸ್ಥಾಪನೆಯಾಗಿ 55 ವರ್ಷಗಳಾದವು. ಈ ಸಂಘ 1971-72 ರಲ್ಲಿ ಸ್ಥಾಪನೆಯಾಗಿ ಹಲವು ಮೈಲಿಗಲ್ಲುಗಳನ್ನು ಸ್ಥಾಪಿಸಿ ಪ್ರಬಲವಾಗಿ ಮುನ್ನುಗ್ಗುತ್ತಿದೆ. ಪ್ರತಿ 50 ಶಿಕ್ಷಕರಿಗೊಬ್ಬ ಶಿಕ್ಷಕ ಪ್ರತಿನಿಧಿಯನ್ನು ಚುನಾವಣೆ ಮೂಲಕ ಆಯ್ಕೆ ಮಾಡಿ ಆ ಮೂಲಕ ತಾಲೂಕು, ಜಿಲ್ಲೆ, ರಾಜ್ಯ ಹಂತದ ಪದಾಧಿಕಾರಿಗಳನ್ನು ಆಯ್ಕೆ ಮಾಡುತ್ತಾ ಪ್ರಜಾಪ್ರಭುತ್ವ ಮಾದರಿಯಲ್ಲಿ ನಡೆಯುತ್ತಿದೆ.
ಸಂಘದ ಹಲವು ಬೇಡಿಕೆಗಳನ್ನು ಈಡೇರಿಸಿದ ಸಿಎಂ ಹಾಗೂ ಡಿಸಿಎಂ ಮತ್ತು ಸಚಿವರುಗಳನ್ನು ಸನ್ಮಾನಿಸಲಾಗುತ್ತಿದೆ. ಅಲ್ಲದೇ, ಹಲವು ಬೇಡಿಕೆಗಳ ಈಡೇರಿಕೆಗೆ ಹಕ್ಕೊತ್ತಾಯ ಮಂಡಿಸಲಾಗುತ್ತಿದೆ ಎಂದರು.
ಪ್ರಮುಖರಾದ ಅಲ್ಲಾಭಕ್ಷ ವಾಲಿಕಾರ, ಶರಣಬಸು ಬೇನೂರ, ಹನುಮಂತ ಕೊಳಗಿ, ಅಶೋಕ ಚನ್ನಬಸು, ಅಶೋಕ ಬೂದಿಹಾಳ ಮತ್ತಿತರರಿದ್ದರು.