ವಿಜಯಪುರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಪಿಪಿಪಿ ಮಾದರಿ ವೈದ್ಯಕೀಯ ಕಾಲೇಜು ಸ್ಥಾಪನೆ ವಿರೋಧಿಸಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹಕ್ಕೆ ಅಖಂಡ ರೈತ ಸಂಘಟನೆಯ ಬಸವರಾಜ ಸುತ್ತುಗುಂಡಿ ಭೇಟಿ ನೀಡಿ ಬೆಂಬಲ ಸೂಚಿಸಿದರು. ಅರವಿಂದ ಕುಲಕರ್ಣಿ, ಅಕ್ರಂ ಮಾಶ್ಯಾಳಕರ, ಸಿದ್ಧಲಿಂಗ ಬಾಗೇವಾಡಿ ಮತ್ತಿತರರಿದ್ದಾರೆ.
ವಿಜಯಪುರ: ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಗ್ರಹಿಸಿ ಮತ್ತು ಪಿಪಿಪಿ ಮಾದರಿ ವೈದ್ಯಕೀಯ ಕಾಲೇಜು ಸ್ಥಾಪನೆ ವಿರೋಧಿಸಿ ಇಲ್ಲಿನ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಗುರುವಾರ 78ನೇ ದಿನ ಪೂರೈಸಿತು.
ಅಖಂಡ ರೈತ ಸಂಘಟನೆ ಪದಾಧಿಕಾರಿಗಳು ಧರಣಿ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ಸೂಚಿಸಿದರು.
ರೈತ ಮುಖಂಡ ಬಸವರಾಜ ಸುತ್ತುಗುಂಡಿ ಮಾತನಾಡಿ, ಜಿಲ್ಲೆಯ ಶಾಸಕರು ಜಿಲ್ಲೆ ಹಿತಾಸಕ್ತಿ ಕಾಪಾಡಲು ಮುಂದಾಗಬೇಕು. ಜಿಲ್ಲೆಯ ಜನರ ಆರೋಗ್ಯ ಮತ್ತು ಶಿಕ್ಷಣ ಮಾರಾಟ ಮಾಡಬಾರದು. ಜಿಲ್ಲೆಯ ಜನ ಬಡವರಿದ್ದು, ಬಡ ಮಕ್ಕಳಿಗೆ ಉಚಿತ ಶಿಕ್ಷಣ ಸಿಗಲು ಸರ್ಕಾರಿ ವೈದ್ಯಕೀಯ ಕಾಲೇಜು ಅವಶ್ಯಕತೆ ಇದೆ ಎಂದರು.
150 ಎಕರೆ ಜ ಹೊಂದಿರುವ ಏಕೈಕ ಜಿಲ್ಲೆ ವಿಜಯಪುರ ಆಗಿದೆ. ಅಲ್ಲದೆ, ಇಲ್ಲಿನ ಜಿಲ್ಲಾಸ್ಪತ್ರೆಗೆ ಎರಡು ಬಾರಿ ರಾಜ್ಯ ಪ್ರಶಸ್ತಿ ಲಭಿಸಿದೆ. ಸರ್ಕಾರ ಇದನ್ನು ಗಮನದಲ್ಲಿರಿಸಿಕೊಂಡು ಸರ್ಕಾರ ಬಡ ಮಕ್ಕಳ ಶಿಕ್ಷಣಕ್ಕಾಗಿ ಸಂಪೂರ್ಣ ಸರ್ಕಾರಿ ನೇತೃತ್ವದಲ್ಲಿ ವೈದ್ಯಕೀಯ ಕಾಲೇಜು ಆರಂಭಿಸಬೇಕೆಂದು ಆಗ್ರಹಿಸಿದರು.
ಜಿಲ್ಲೆಯ ಜನಪ್ರತಿನಿಧಿಗಳು ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸಿದಿದ್ದರೆ ರಾಜೀನಾಮೆ ನೀಡಿ ನಮ್ಮ ಹೋರಾಟಕ್ಕೆ ಕೈ ಜೋಡಿಸಬೇಕು.
ಜಿಲ್ಲೆಯ ಜನರ ತೆರಿಗೆಯಿಂದ ಸರ್ಕಾರ ನಡೆಸುವ ಜನಪ್ರತಿನಿಧಿಗಳು ಜಿಲ್ಲೆಯ ಒಂದು ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸುವಲ್ಲಿ ಹಿಂದೇಟು ಹಾಕುತ್ತಿರುವುದು ಖಂಡನಾರ್ಹ ಎಂದರು.
ಹೋರಾಟ ಸಮಿತಿ ಅರವಿಂದ ಕುಲಕರ್ಣಿ, ಅಕ್ರಂ ಮಾಶ್ಯಾಳಕರ, ಸಿದ್ಧಲಿಂಗ ಬಾಗೇವಾಡಿ, ಸುರೇಶ ಬಿಜಾಪುರ, ಬೋಗೇಶ ಸೋಲಾಪುರ, ಲಕ್ಷ್ಮಣ ಕಂಬಾಗಿ, ಬಾಬುರಾವ ಬೀರಕಬ್ಬಿ, ಸಿ.ಬಿ. ಪಾಟೀಲ, ಶ್ರೀನಾಥ ಪೂಜಾರಿ, ಗಿರೀಶ ಕಲಘಟಗಿ, ಶ್ರೀಕಾಂತ ಕೊಂಡಗೂಳಿ, ಗೀತಾ ಎಚ್.ಎಂ., ಭರತಕುಮಾರ ಎಚ್.ಟಿ., ನೀಲಾಂಬಿಕ ಬಿರಾದಾರ, ಕಾವೇರಿ ರಜಪೂತ ಮತ್ತಿತರರಿದ್ದರು.