ವಿಜಯಪುರದ ಜ್ಞಾನಯೋಗಾಶ್ರಮದಲ್ಲಿ ಜರುಗಿದ ಲಿಂ. ಸಿದ್ಧೇಶ್ವರ ಶ್ರೀಗಳ 3ನೇ ವರ್ಷದ ಗುರುನಮನ ಮಹೋತ್ಸವವನ್ನು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ ಉದ್ಘಾಟಿಸಿದರು. ಬಸವಲಿಂಗ ಸ್ವಾಮೀಜಿ, ಪ್ರಭು ಸಾರಂಗದೇವ ಶಿವಾಚಾರ್ಯರು, ಅರುಣ ಶಹಾಪುರ ಮತ್ತಿತರರಿದ್ದಾರೆ. 
ವಿಜಯಪುರ

ಭಕ್ತರದ ಭಾವದಲ್ಲಿ `ಸಿದ್ಧೇಶ್ವರ ಶ್ರೀ' ಅಭಿವ್ಯಕ್ತ

ಪ್ರಮುಖ ಮುಖ್ಯಾಂಶಗಳು

  • ಜ್ಞಾನಯೋಗಾಶ್ರಮದಲ್ಲಿ ಗುರು ನಮನ
  • ಅರ್ಥಪೂರ್ಣ- ಅದ್ದೂರಿ ಆಚರಣೆ
  • ಮೂರನೇ ವರ್ಷದ ಪುಣ್ಯಸ್ಮರಣೆ
ವಿಜಯಪುರ: ಶತಮಾನದ ಸಂತ, ನಡೆದಾಡುವ ದೇವರೆಂದೇ ಖ್ಯಾತಿ ಪಡೆದಿದ್ದ ಲಿಂ. ಸಿದ್ಧೇಶ್ವರ ಸ್ವಾಮೀಜಿಗಳ ಗುರುನಮನ ಕಾರ್ಯಕ್ರಮ ಶುಕ್ರವಾರ ಅದ್ದೂರಿಯಾಗಿ, ಅರ್ಥಪೂರ್ಣವಾಗಿ ನೆರವೇರಿತು.

ಜ್ಞಾನಯೋಗಾಶ್ರಮದಲ್ಲಿ ಕಳದ ಹದಿನೈದು ದಿನಗಳಿಂದ ಹಮ್ಮಿಕೊಂಡು ಬರಲಾಗಿರುವ ಉಪನ್ಯಾಸ, ವಿಚಾರ ಸಂಕಿರಣ, ಸಂಗೀತ, ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಕಾರ್ಯಕ್ರಮಗಳು, ಅಧ್ಯಾತ್ಮ ಗೋಷ್ಠಿಗಳು ಸಂಪನ್ನಗೊಂಡವು. ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಆಗಮಿಸಿದ ಸಂತರು, ರಾಜಕೀಯ ಗಣ್ಯರು ಹಾಗೂ ಭಕ್ತರು ಸಿದ್ಧೇಶ್ವರ ಶ್ರೀಗಳಿಗೆ ನಮನ ಸಲ್ಲಿಸಿದರು.
ಬೆಳಗ್ಗೆ ಪ್ರವಚನ, ಭಾವಚಿತ್ರಕ್ಕೆ ಪೂಜೆ, ಧ್ಯಾನ, ಭಜನೆ ಮತ್ತಿತರರ ಕಾರ್ಯಕ್ರಮಗಳು ನೆರವೇರಿದವು. ವೇದಾಂತ ಕೇಸರಿ ಚನ್ನಮಲ್ಲಿಕಾರ್ಜುನ ಶ್ರೀಗಳ ಗದ್ದುಗೆಗೆ ಭಕ್ತರು ನಮಿಸಿದರು. ಧ್ವನಿ ಸುರುಳಿ ಮೂಲಕ ಸಿದ್ಧೇಶ್ವರ ಶ್ರೀಗಳ ಪ್ರವಚನ ಆಲಿಸಲಾಯಿತು. ಪೂಜ್ಯರ ಕೃತಿಗಳಲ್ಲಿರುವ ಕಥೆ- ಉಪದೇಶಗಳ ಕುರಿತು ಭಕ್ತರಿಗೆ ತಿಳಿಸಿಕೊಡಲಾಯಿತು. ಆಶ್ರಮದ ಗಿಡ-ಮರಗಳು, ಉದ್ಯಾನದ ಹೂಗಳು ಸಿದ್ಧೇಶ್ವರ ಸ್ವಾಮೀಜಿಗಳ ಸ್ಮರಣೆಯಲ್ಲಿ ತಲ್ಲೀನವಾದಂತೆ ಭಾಸವಾಯಿತು.
ಸಿದ್ಧೇಶ್ವರ ಶ್ರೀಗಳು `ಧರೆಗೆ ದೊರೆತ ನಕ್ಷತ್ರ'
ಸಿದ್ಧೇಶ್ವರ ಶ್ರೀಗಳು ಧರೆಗೆ ದೊರೆತ ನಕ್ಷತ್ರ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ಮುನ್ನಡೆಯೋಣ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ ಹೇಳಿದರು.
ಜ್ಞಾನಯೋಗಾಶ್ರಮದಲ್ಲಿ ಶತಮಾನದ ಸಂತ ಸಿದ್ಧೇಶ್ವರ ಶ್ರೀಗಳ 3ನೇ ವರ್ಷದ ಗುರು ನಮನ ಮಹೋತ್ಸವದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಪಣೆಮಾಡಿ ಮಾತನಾಡಿದ ಅವರು, ನ್ಯಾಯಯುತ, ಸತ್ಯಯುತ, ಶಿಸ್ತುಬದ್ಧ ಬದುಕಿಗೆ ಸಿದ್ಧೇಶ್ವರ ಶ್ರೀಗಳು ಪ್ರೇರಣೆಯಾಗಿದ್ದಾರೆ. ಅವರೊಬ್ಬ ಮಹಾನ್ ತತ್ವಜ್ಞಾನಿ ಎಂದರು.
ಅಖಂಡ ವಿಜಯಪುರ ಜಿಲ್ಲೆ ಶರಣರು, ಸಂತರು ನೆಲೆಸಿದ ಪುಣ್ಯ ನೆಲ. 12ನೇ ಶತಮಾನದಲ್ಲಿಯೇ ಬಸವಣ್ಣನವರು ಕಾಯಕವೇ ಕೈಲಾಸ ಎಂಬ ಸಂದೇಶ ಸಾರಿದರು. ಆ ಮೂಲಕ ಜಗತ್ತಿನ ಚಿತ್ತವನ್ನು ಕರ್ಮದತ್ತ, ನಿಷ್ಠೆಯತ್ತ, ಧರ್ಮದತ್ತ ಸೆಳೆದರು. ನಮ್ಮ ತಲೆ ಮಾರಿಗೆ ಸಿದ್ಧೇಶ್ವರ ಶ್ರೀಗಳು ದೊರೆತದ್ದು ನಮ್ಮೆಲ್ಲರ ಭಾಗ್ಯ ಎಂದರು.
ಅಣ್ಣ ಬಸವಣ್ಣನವರು ಸಮಾಜ ಸುಧಾರಿಸಲು ಕ್ರಾಂತಿಯನ್ನೇ ಮಾಡಿದರು. ಲಿಂಗವಿಲ್ಲದ ಸಮಾಜ, ಅಧ್ಯಾತ್ಮವಿಲ್ಲದ ಸಮಾಜ ನಿಶಕ್ತವಾಗಿತ್ತು. ಇಂತಹ ವ್ಯಕ್ತಿಗಳನ್ನು ಪದಾರ್ಥ ಸ್ಥಿತಿಯಿಂದ ಪ್ರಸಾದ ಸ್ಥಿತಿಗೆ ತರುವ ಜವಾಬ್ದಾರಿ ಶರಣರ ಮೇಲಿತ್ತು. ಪ್ರಸ್ತುತ ದಿನಮಾನದಲ್ಲಿ 12ನೇ ಶತಮಾನದಲ್ಲಿ ಕಂಡಂತಹ ಸಮಸ್ಯೆಗಳು ಅಂದರೆ ಭ್ರಷ್ಟಾಚಾರ, ಅನೈತಿಕತೆ, ಅಧರ್ಮ ಇವೆಲ್ಲವೂ ಮತ್ತೆ ಈಗ 20ನೇ ಶತಮಾನದಲ್ಲಿ ಕಾಣುತ್ತಿರುವುದು ದುರಂತ. ಇಂತಹ ಸ್ಥಿತಿಯನ್ನು ಸುಧಾರಿಸಲು ಜ್ಞಾನಯೋಗಾಶ್ರಮದಂತಹ ಆಶ್ರಮಗಳ ಅಗತ್ಯತೆ ನಮಗಿದೆ ಎಂದರು.
ಬೀಳಗಿ ಶಾಸಕ ಜೆ.ಟಿ. ಪಾಟೀಲ ಮಾತನಾಡಿ, ಸಿದ್ಧೇಶ್ವರ ಶ್ರೀಗಳ ಕುರಿತು ಎಷ್ಟು ಮಾತನಾಡಿದರೂ ಕಡಿಮೆಯೆ. ಅವರ ಸರಳತೆ, ಅವರಲ್ಲಿದ್ದ ಸಾಗರದಷ್ಟು ಜ್ಞಾನ ಇಡೀ ಜಗತ್ತಿನ ಮನಸ್ಸನ್ನು ಗೆದ್ದಿದ್ದು ಸುಳ್ಳಲ್ಲ. ಅವರ ಸರಳತೆಯ ಜೀವನವೇ ನಮಗೆಲ್ಲ ದೊಡ್ಡ ಮಾದರಿ. ಅವರ ಬದುಕಿನುದ್ದಕ್ಕೂ ತಮ್ಮ ತತ್ವಗಳ ಮೂಲಕ ಸಮಾಜವನ್ನು ತಿದ್ದುವಂತಹ ಕೆಲಸ ಮಾಡಿದವರು ಶ್ರೀಗಳು. ನಮ್ಮ-ನಿಮ್ಮೆಲ್ಲರನ್ನು ಸರಿ ದಾರಿಗೆ ತರಲು ಪ್ರಯತ್ನಿಸಿದವರು. ನಾವು ಎಷ್ಟೇ ಹುಡುಕಿದರೂ ಇಂಥಹ ಇನ್ನೊಬ್ಬ ಸಂತರನ್ನು ಹುಡುಕಲು ಸಾಧ್ಯವಿಲ್ಲ ಎಂದರು.
ಹಂಚಿನಾಳ ಭಕ್ತಿಯೋಗಾಶ್ರಮದ ಸಂಗಮೇಶ್ವರ ಶ್ರೀಗಳು ಮಾತನಾಡಿ, ನಾವೆಲ್ಲರೂ ಕಲಿಯುಗದಲ್ಲಿ ಹುಟ್ಟಿಲ್ಲ; ಸಿದ್ಧೇಶ್ವರ ಶ್ರೀಗಳು ಬದುಕಿದ ಧರ್ಮಯುಗದಲ್ಲಿ ಹುಟ್ಟಿದ್ದೇವೆ ಎಂದು ಹೆಮ್ಮೆ ಪಡಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ಚಿತ್ತರಗಿ-ಇಳಕಲ್ಲ ವಿಜಯಮಹಾಂತೇಶ್ವರ ಮಠದ ಗುರುಮಹಾಂತ ಸ್ವಾಮೀಜಿ ಮಾತನಾಡಿ, ಸತತ 70 ವರ್ಷಗಳ ಕಾಲ ನಿರಂತರವಾಗಿ ಜನರ ಮನಶುದ್ಧಿ ಮಾಡುವ ಕಾರ್ಯವನ್ನು ಶ್ರೀಗಳು ಮಾಡುತ್ತಾ ಬಂದರು. ಪ್ರವಚನಗಳ ಮೂಲಕ ಲಕ್ಷಾಂತರ ಜನರ ಬದುಕು ಸುಧಾರಿಸಿದರು ಎಂದು ಹೇಳಿದರು.
ಸಿಂದಗಿ ಸಾರಂಗ ಮಠದ ಪ್ರಭುಸಾರಂಗ ಶಿವಾಚಾರ್ಯರು, ಗದಗದ ಜಗದ್ಗುರು ಶಿವಾನಂದ ಬೃಹ್ಮನ್ಮಠದ ಸದಾಶಿವಾನಂದ ಸ್ವಾಮೀಜಿ, ಜ್ಞಾನಯೋಗಾಶ್ರಮದ ಅಧ್ಯಕ್ಷ ಗುರುಗಳಾದ ಬಸವಲಿಂಗ ಸ್ವಾಮೀಜಿ ಆಶೀರ್ವಚನ ನೀಡಿದರು.
ಸಿದ್ಧೇಶ್ವರ ಸ್ವಾಮೀಜಿ ಬರೆದ ಮರು ಮುದ್ರಣದ ಗ್ರಂಥಗಳನ್ನು ಬಿಡುಗಡೆಗೊಳಿಸಲಾಯಿತು. ಬಾಲಗಾಂವ ಗುರುದೇವಾಶ್ರಮದ ಅಮೃತಾನಂದ ಸ್ವಾಮೀಜಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ ಸ್ವಾಗತಿಸಿದರು. ಹರ್ಷಾನಂದ ಸ್ವಾಮೀಜಿ ನಿರೂಪಿಸಿದರು.