ವಿಜಯಪುರ: ‘ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್‌ಐಆರ್)ಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಡೆಸುತ್ತಿರುವ ಹೋರಾಟ ಹತಾಶ ಮನಃಸ್ಥಿತಿಗೆ ಹಿಡಿದ ಕೈಗನ್ನಡಿಯಲ್ಲದೇ ಇದು ಗಾಂಧಿ ಕುಟುಂಬದ ಮಾನಸಿಕ ಅಸ್ವಸ್ಥತೆಯನ್ನು ಪ್ರದರ್ಶನಕ್ಕಿರಿಸಿದೆ’ ಎಂದು ಸಂಸದ ರಮೇಶ ಜಿಗಜಿಣಗಿ ಟೀಕಿಸಿದ್ದಾರೆ.
‘ಸತತ ಸೋಲಿನಿಂದಾಗಿ ಕಂಗೆಟ್ಟಿರುವ ಕಾಂಗ್ರೆಸ್ ಮಾನಸಿಕವಾಗಿ ಸಂಪೂರ್ಣ ದಿವಾಳಿಯಾಗಿದೆ. ತನ್ನ ಪ್ರತಿಯೊಂದು ವೈಫಲ್ಯವನ್ನು ಇವಿಎಂ ಯಂತ್ರದ ಮೇಲೆ, ಎಸ್‌ಐಆರ್ ಪ್ರಕ್ರಿಯೆ ಮೇಲೆ, ಚುನಾವಣೆ ಆಯೋಗದ ಮೇಲೆ ಹೊರಿಸುವ ಹುನ್ನಾರ ನಡೆಸುತ್ತಿದೆ. ದೇಶದಲ್ಲಿ ಅರಾಜಕತೆ ಸೃಷ್ಠಿಸುವ ಮೂಲಕ ಅಧಿಕಾರಕ್ಕೆ ಬರಬೇಕೆಂಬ ಪ್ರಯತ್ನಗಳೆಲ್ಲವೂ ವಿಫಲವಾಗುತ್ತಿವೆ. ಹೀಗಾಗಿ ದೇಶದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಪ್ರಯತ್ನ ನಡೆಸಿದೆ. ಕಾಂಗ್ರೆಸ್‌ನ ಈ ಕುತಂತ್ರವನ್ನು ಜನ ಗಮನಿಸುತ್ತಿದ್ದಾರೆ’ ಎಂದು ಜಿಗಜಿಣಗಿ ತಿಳಿಸಿದ್ದಾರೆ.
‘ಕೇಂದ್ರ ಚುನಾವಣೆ ಆಯೋಗ ಅತ್ಯಂತ ಪಾರದರ್ಶಕವಾಗಿ, ಪ್ರಾಮಾಣಿಕವಾಗಿ ಮತ್ತು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದೆ. ಕಾಂಗ್ರೆಸ್‌ನ ಪ್ರತಿ ಆರೋಪಗಳಿಗೆ ಸ್ಪಷ್ಟವಾಗಿ ಉತ್ತರ ನೀಡಿದೆ. ಅದಾಗ್ಯೂ ಗೊಂದಲಗಳಿದ್ದರೆ ಸಂವಿಧಾನಾತ್ಮಕವಾಗಿ ಬಗೆ ಹರಿಸಿಕೊಳ್ಳಲು ಸಾಕಷ್ಟು ಅವಕಾಶಗಳಿವೆ. ಅದನ್ನು ಬಿಟ್ಟು ಬೀದಿಗಿಳಿದು ಹೋರಾಟ ಮಾಡುವುದು, ದೊಂಬಿ ಮತ್ತು ಗಲಭೆಗಳನ್ನು ಎಬ್ಬಿಸುವುದು, ತಮ್ಮ ಮೇಲಿನ ಪ್ರತಿಯೊಂದು ಎಫ್‌ಐಆರ್ ಕೂಡ ಒಂದು ಮೆಡಲ್ ಇದ್ದಂತೆ ಎಂದು ಹೇಳುವ ರಾಹುಲ್ ಗಾಂಧಿಯ ಪ್ರತಿ ನಡೆಯ ಹಿಂದೆ ದುರುದ್ಧೇಶ ಎದ್ದು ಕಾಣುತ್ತಿದೆ’ ಎಂದಿದ್ದಾರೆ.
‘ಕಾಂಗ್ರೆಸ್ ತನ್ನ ಆಡಳಿತಾವಧಿಯಲ್ಲಿ ಸಾಂವಿಧಾನಿಕ ಸಂಸ್ಥೆಗಳನ್ನು ಕೇವಲ ‘ಕೈಗೊಂಬೆ’ಯಂತೆ ನಡೆಸಿಕೊಂಡ ಉದಾಹರಣೆಗಳು ಇತಿಹಾಸದ ಪುಟಗಳಲ್ಲಿವೆ. 1975ರ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ನ್ಯಾಯಾಂಗ, ಚುನಾವಣಾ ಆಯೋಗ ಹಾಗೂ ಮಾಧ್ಯಮಗಳ ಸ್ವಾತಂತ್ರ್ಯವನ್ನು ಕಸಿದುಕೊಂಡು ಪ್ರಜಾಪ್ರಭುತ್ವದ ಕಂಠ ಹಿಚುಕಿದ ಕೀರ್ತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ. ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಗೆದ್ದಾಗ ಸಾಂವಿಧಾನಿಕ ಸಂಸ್ಥೆಗಳು ಸರಿಯಾಗಿ ಕಾಣಿಸುತ್ತವೆ; ಆದರೆ ಜನಾದೇಶ ವಿರುದ್ಧ ಬಂದಾಗ ಆಯೋಗದ ಮೇಲೆ ಗೂಬೆ ಕೂರಿಸುವುದು ಅವರ ಹಳೆಯ ಚಾಳಿಯಾಗಿದೆ. ಸೋಲಿನ ಭಯದಿಂದ ಬೀದಿಗೆ ಇಳಿದು ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್, ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸುವ ಪ್ರವೃತ್ತಿಯನ್ನು ತಕ್ಷಣವೇ ಕೈಬಿಡಬೇಕು. ಪ್ರಜಾಪ್ರಭುತ್ವದ ಅಡಿಪಾಯವಾಗಿರುವ ಸಾಂವಿಧಾನಿಕ ಸಂಸ್ಥೆಗಳ ಮೇಲೆ ನಿರಂತರವಾಗಿ ದಾಳಿ ಮಾಡುವುದು ದೇಶದ ಮತದಾರರಿಗೆ ಹಾಗೂ ಸಂವಿಧಾನಕ್ಕೆ ಮಾಡುವ ಅಪಚಾರ. ಕಾಂಗ್ರೆಸ್ ನಾಯಕರು ಬಾಲಿಶ ಪ್ರತಿಭಟನೆಗಳನ್ನು ನಿಲ್ಲಿಸಿ, ಜನಾದೇಶವನ್ನು ಗೌರವಿಸುವುದನ್ನು ಕಲಿಯಲಿ’ ಎಂದು ಸಂಸದ ರಮೇಶ ಜಿಗಜಿಣಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.