ವಿಜಯಪುರ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಡಾ.ಆನಂದ ಕೆ ಅವರು ವಿವಿಧ ಸಮಿತಿಗಳ ಸಭೆ ನಡೆಸಿದರು. ಎಸ್‌ಪಿ ಲಕ್ಷ್ಮಣ ನಿಂಬರಗಿ, ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅರವಿಂದ ಹಾಗರಗಿ ಇದ್ದಾರೆ.
- ಕಾನೂನು ಸುವ್ಯವಸ್ಥೆ ಕಾಪಾಡಲು ಸೂಚನೆ
- ಕಾನೂನು ಪಾಲನೆಗೆ ಧಕ್ಕೆಯಾದರೆ ಕ್ರಮದ ಎಚ್ಚರಿಕೆ
- ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸಲಹೆ-ಸೂಚನೆ
- ಬೆಳಗ್ಗೆಯಿಂದ ಸಂಜೆವರೆಗೂ ನಡೆದ ಸಭೆಗಳು
ವಿಜಯಪುರ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೊಳಿಸುವ ಯೋಜನೆಗಳ ಪ್ರಗತಿ ಪರಿಶೀಲನೆ, ಕಾನೂನು ಸುವ್ಯವಸ್ಥೆಯ ಪಾಲನೆ, ಜಿಲ್ಲಾ ಮಟ್ಟದ ಸಮಿತಿಗಳ ಕಾರ್ಯತತ್ಪರತೆಗೆ ಸಂಬಂಧಿಸಿದಂತೆ ಗುರುವಾರ ಜಿಲ್ಲಾಡಳಿತ ಭವನದಲ್ಲಿ ಸರಣಿ ಸಭೆಗಳು ನಡೆದವಲ್ಲದೇ, ಸಂಬಂಧಿಸಿದವರಿಗೆ ಅಗತ್ಯ ಸಲಹೆ-ಸೂಚನೆಗಳನ್ನು ನೀಡಲಾಯಿತು.
ಬೆಳಗ್ಗೆ 10 ಗಂಟೆಯಿಂದಲೇ ಆರಂಭಗೊಂಡಿರುವ ಸಭೆಗಳು ಸಂಜೆಯವರೆಗೆ ಸಾಂಗವಾಗಿ ನೆರವೇರಿದವು. ರಸ್ತೆ ಸುರಕ್ಷತಾ ಸಮಿತಿ ಸಭೆ, ಮಾದಕ ವಸ್ತು ನಿಯಂತ್ರಣ ಕುರಿತ ಸಭೆ, ‘ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ-2005, ಬಾಲ್ಯವಿವಾಹ ತಡೆ ಕಾಯ್ದೆ ಹಾಗೂ ಪೋಕ್ಸೋ ಕಾಯ್ದೆಗಳ ಪ್ರಗತಿ ಪರಿಶೀಲನಾ ಸಭೆ ಸೇರಿ ವಿವಿಧ ಸಭೆಗಳು ನಡೆದವು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ.ಆನಂದ ಕೆ ಅವರು, ಸರ್ಕಾರ ನಿಯಮಗಳು ಹಾಗೂ ಕಾನೂನುಗಳನ್ನು ಅಚ್ಚುಕಟ್ಟಾಗಿ ಜಾರಿಗೊಳಿಸಬೇಕು. ಸಾರ್ವಜನಿಕರ ಕಲ್ಯಾಣಕ್ಕಾಗಿ ರೂಪಿಸಿದ ಕಾನೂನುಗಳ ಅನುಷ್ಟಾನಕ್ಕೆ ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ಸಂಬಂಧಿಸಿದವರ ಮೇಲೆ ಕಠಿಣ ಕ್ರಮ ಜರುಗಿಸುವುದಾಗಿ ಎಚ್ಚರಿಸಿದರು.
ರಸ್ತೆ ಸುರಕ್ಷತಾ ಸಮಿತಿ ಸಭೆ ನಡೆಸಿದ ಜಿಲ್ಲಾಧಿಕಾರಿಗಳು, ಜಿಲ್ಲೆಯಲ್ಲಿರುವ ಅಪಘಾತ ವಲಯಗಳನ್ನು ಗುರುತಿಸಿ ರಸ್ತೆ ಅಪಘಾತ ತಡೆಗೆ ಕ್ರಮ ವಹಿಸಬೇಕು ಎಂದರು.
ಅಪಘಾತ ವಲಯಗಳಲ್ಲಿ ಪ್ಯಾರಾಮೆಡಿಕಲ್ ಸಿಬ್ಬಂದಿ ನಿಯೋಜಿಸಬೇಕು. ಅಪಘಾತ ವಲಯಗಳಲ್ಲಿ ಅಗತ್ಯ ಸುರಕ್ಷತಾ ಕ್ರಮ ಕೈಗೊಳ್ಳಬೇಕು ಎಂದ ಅವರು, ‘ಸೇವ್ ಲೈಫ್ ಫೌಂಡೇಶನ್ ಸಂಸ್ಥೆಯು ರೋಡ್ ಸೇಫ್ಟಿ ಆಕ್ಷನ್ ಪ್ಲಾನ್ ಎಂಬ ವಿಶೇಷ ಅಧ್ಯಯನ ವರದಿ ಬಿಡುಗಡೆ ಮಾಡಿದ್ದು, 2023 ಮತ್ತು 2024 ರ ಇ-ಡಾರ್ ವ್ಯವಸ್ಥೆಯ ಆಧಾರದ ಮೇಲೆ ವಿವರವಾದ ವರದಿ ಸಿದ್ಧಪಡಿಸಿದೆ’ ಎಂದು ತಿಳಿಸಿದರು.
‘ಇಟ್ಟಂಗಿ ಭಟ್ಟಿ, ಹೊಟೇಲ್ ಸೇರಿ ಯಾವುದೇ ಉದ್ಯೋಗ ಕ್ಷೇತ್ರಗಳಲ್ಲಿ ಬಾಲಕಾರ್ಮಿಕರು ಕಾರ್ಯನಿರ್ವಹಿಸದಂತೆ ಜಿಲ್ಲೆಯ ಸಂಬಂಧಿಸಿದ ಅಧಿಕಾರಿಗಳು ತೀವ್ರ ನಿಗಾವಹಿಸಬೇಕು. ಹಾಗೊಂದು ವೇಳೆ ಕಂಡು ಬಂದರೆ ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಎಸ್‌ಪಿ ಲಕ್ಷ್ಮಣ ನಿಂಬರಗಿ ಅವರು, ಕಳೆದ ಮೂರು ವರ್ಷಗಳಲ್ಲಿ ಪೊಲೀಸ್ ಇಲಾಖೆಯು ಎನ್‌ಡಿಪಿಎಸ್ ಕಾಯ್ದೆಯಡಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಮಾದಕ ದ್ರವ್ಯ ಮಾರಾಟ ಮತ್ತು ಸಾಗಾಣಿಕೆ ವಿರುದ್ಧ ದಾಖಲಾದ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿದೆ. ಪ್ರಸ್ತುತ 2026 ರಲ್ಲಿ ದಾಖಲಾದ ಪ್ರಕರಣಗಳ ಸಂಖ್ಯೆ 45ಕ್ಕೇರಿದ್ದು, 121 ಕೆಜಿ 69 ಗ್ರಾಂ ಗಾಂಜಾ ಮತ್ತು 345.822 ಕೆಜಿ ಮಾದಕ ದ್ರವ್ಯಗಳನ್ನು ಜಪ್ತಿ ಮಾಡುವ ಮೂಲಕ ಕಾನೂನು ಕ್ರಮ ಜರುಗಿಸಲಾಗಿದೆ ಎಂದರು.
ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅರವಿಂದ ಹಾಗರಗಿ, ಪ್ರೊಬೆಷನರಿ ಐಎಎಸ್ ಅಧಿಕಾರಿ ಅಭಿಷೇಕ ಸೇಹರ, ಇಂಡಿ ಉಪ ವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ, ಡಿಎಚ್‌ಒ ಮಲ್ಲನಗೌಡ ಬಿರಾದಾರ, ಪ್ರಾದೇಶಿಕ ಸಾರಿಗೆ ಅಧಿಕಾರಿ ವಸಿಂಬಾಬಾ ಮುದ್ದೇಬಿಹಾಳ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರಾಜಶೇಖರ ದೈವಾಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದೀಪಾ ಕಾಳೆ, ಇಂಡಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬಸವರಾಜ ಜಿಗಳೂರು, ಜಿಲ್ಲಾ ಶಸ್ತ್ರ ಚಿಕಿತ್ಸಕ ಶಿವಾನಂದ ಮಾಸ್ತಿಹೊಳಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಮಲ್ಲಿಕಾರ್ಜುನ ಕುಸನಾಳ, ಸಮಾಜಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹೇಶ ಪೋತದಾರ ಇತರರಿದ್ದರು.