ವಿಜಯಪುರ ನಗರದ ಬಂಗಾರಮ್ಮ ಸಜ್ಜನ ಕಲಾ, ಮಹಿಳಾ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಚುನಾವಣಾ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿನಿಯರು ಮತದಾನ ಮಾಡಿದರು. ರೇಖಾ ಗಡಿಗಿ, ರಶ್ಮಿ ಪಾಟೀಲ ಮತ್ತಿತರರಿದ್ದಾರೆ.
- ಚುನಾವಣೆ ಗೆಲುವು
- ಶಾಲಾ ಸಂಸತ್ತು
ವಿಜಯಪುರ : ಚುನಾವಣೆ ಕೇವಲ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲ. ಅದು ವಿದ್ಯಾರ್ಥಿಗಳಲ್ಲಿ ಜವಾಬ್ದಾರಿ, ನಾಯಕತ್ವ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬೆಳೆಸುವ ವೇದಿಕೆಯಾಗಿದ್ದು, ಚುನಾವಣೆ ಗೆಲುವು ಅಥವಾ ಸೋಲಿಗಿಂತಲೂ ಪ್ರಜಾಪ್ರಭುತ್ವದ ಪ್ರಕ್ರಿಯೆಯಲ್ಲಿ ಭಾಗವಹಿಸುವುದು ಮುಖ್ಯವಾಗಿದೆ ಎಂದು ಪ್ರಾಚಾರ್ಯ ವೈ. ತಮ್ಮಣ್ಣ ತಿಳಿಸಿದರು.
ನಗರದ ಬಿಎಲ್‌ಡಿಈ ಸಂಸ್ಥೆಯ ಬಂಗಾರಮ್ಮ ಸಜ್ಜನ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಿಳಾ ಮಹಾವಿದ್ಯಾಲಯದ ರಾಜ್ಯಶಾಸ ವಿಭಾಗ ಮತ್ತು ಐಕ್ಯೂಎಸಿ ಅಡಿ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ, ಪ್ರಜಾಪ್ರಭುತ್ವದ ಅರಿವು ಹಾಗೂ ಜವಾಬ್ದಾರಿಯುತ ನಾಗರಿಕ ಪ್ರಜ್ಞೆಯನ್ನು ಬೆಳೆಸುವ ನಿಟ್ಟಿನಲ್ಲಿ ಇತ್ತೀಚೆಗೆ ನಡೆದ ಶಾಲಾ ಸಂಸತ್ತು ಚುನಾವಣಾ ಪ್ರಕ್ರಿಯೆ ಕುರಿತು ಅವರು ಮಾತನಾಡಿದರು.
ಚುನಾವಣೆಯಲ್ಲಿ ಪದವಿಯ ವಿವಿಧ ತರಗತಿಗಳ ವಿದ್ಯಾರ್ಥಿಗಳು ಸ್ಪರ್ಧಿಸಿದ್ದು, ತಮ್ಮ ಮತವನ್ನು ಚಲಾಯಿಸುವ ಮೂಲಕ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಿದರು. ಮತದಾನಕ್ಕೂ ಮುನ್ನ ನಾಮಪತ್ರ ಸಲ್ಲಿಕೆ, ಪರಿಶೀಲನೆ, ಅಂತಿಮ ವಿದ್ಯಾರ್ಥಿಗಳ ಪಟ್ಟಿ, ಚುನಾವಣಾ ಪ್ರಚಾರ, ಮತದಾನ ಹಾಗೂ ಮತ ಎಣಿಕೆ ಸೇರಿ ಚುನಾವಣೆಯ ವಿವಿಧ ಹಂತಗಳನ್ನು ನಿಯಮಾನುಸಾರ ನಡೆದವು ಎಂದರು.
ಐಕ್ಯೂಎಸಿ ಸಂಯೋಜಕಿ ಭಕ್ತಿ ಮಹೇಂದ್ರಕರ್ ಕಾಲೇಜು ಚುನಾವಣೆಯ ಕುರಿತು ಮಾತನಾಡಿ, ವಿದ್ಯಾರ್ಥಿಗಳು ಇಂದು ಮತದಾನದ ಮೂಲಕ ಕಲಿಯುತ್ತಿರುವ ಪ್ರಜಾಪ್ರಭುತ್ವದ ಪಾಠವು ನಾಳೆ ದೇಶದ ಜವಾಬ್ದಾರಿಯುತ ನಾಗರಿಕರಾಗಿ ರೂಪುಗೊಳ್ಳಲು ಸಹಕಾರಿಯಾಗಲಿದೆ ಎಂದರು.ಚುನಾವಣಾ, ಮತದಾನದ ವಿಧಾನ ಕುರಿತು ವಿಭಾಗದ ಮುಖ್ಯಸ್ಥೆ ರೇಖಾ ಗಡಿಗಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ರಶ್ಮಿ ಪಾಟೀಲ, ಎಸ್.ಡಿ. ಪಾಟೀಲ, ವಿ.ಎಸ್. ನಂದೀಶ, ದೀಪಾ ಲಗಳಿ ಮತ್ತಿತರರಿದ್ದರು.