ವಿಜಯಪುರ ನಗರದ ಬಿಜೆಪಿ ಕಚೇರಿಯಲ್ಲಿ ಸಂಸದ ರಮೇಶ ಜಿಗಜಿಣಗಿ ಸುದ್ದಿಗೋಷ್ಠಿ ನಡೆಸಿದರು. ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮುಖಡರಾದ ವಿವೇಕಾನಂದ ಡಬ್ಬಿ, ಸಂದೀಪ ಪಾಟೀಲ, ವಿಜಯ ಜೋಷಿ ಇದ್ದಾರೆ. 
ವಿಜಯಪುರ

ಶಾಲೆ ಶಿಕ್ಷಣ ಇಲಾಖೆ ಅಕ್ರಮ ಪ್ರಕರಣ, ರಾಜ್ಯದಲ್ಲಿ ‘ನಿಷ್ಕ್ರೀಯ-ಲಜ್ಜೆಗೆಟ್ಟ’ ಸರ್ಕಾರ, ಸಂಸದ ರಮೇಶ ಜಿಗಜಿಣಗಿ ಆಕ್ರೋಶ

ಪ್ರಮುಖ ಮುಖ್ಯಾಂಶಗಳು

  • ತನಿಖಾ ವರದಿ ಸಲ್ಲಿಸಿದರೂ ಕ್ರಮ ಇಲ್ಲ
  • ಸಿಇಒ ಶಿಫಾರಸು ಪತ್ರಕ್ಕೂ ಬೆಲೆಯಿಲ್ಲ
  • ಬಿಜೆಪಿಯಿಂದ ಹೋರಾಟದ ಎಚ್ಚರಿಕೆ
  • ಲೋಕಾಯುಕ್ತ ತನಿಖೆಯಾದರೂ ಪರಿಣಾಮವಿಲ್ಲ
ವಿಜಯಪುರ: ‘ಲೋಕಾಯುಕ್ತ ತನಿಖೆಯಾಯಿತು, ಜಿಲ್ಲಾ ಪಂಚಾಯಿತಿ ಸಿಇಒ ಅವರಿಂದ ತನಿಖೆಯಾಗಿ ಕ್ರಮಕ್ಕೆ ಶಿಫಾರಸ್ಸು ಮಾಡಲಾಯಿತು, ಸ್ವತಃ ಡಿಡಿಪಿಐನೇ ಖುದ್ದಾಗಿ ಅಕ್ರಮ ನಡೆದಿದೆ ಎಂದು ಎಫ್‌ಐಆರ್ ದಾಖಲಿಸಿದ್ದಾಯಿತು, ಸದನದಲ್ಲಿ ಶಿಕ್ಷಣ ಸಚಿವರೇ ಸ್ವತಂತ್ರ ತನಿಖೆ ತಂಡ ರಚಿಸುವ ಭರವಸೆ ಕೊಟ್ಟು ತಿಂಗಳಾಗುತ್ತಾ ಬಂತು, ಜಿಲ್ಲಾ ಉಸ್ತುವಾರಿ ಮಂತ್ರಿಯೂ ಸಮಗ್ರವಾಗಿ ತನಿಖೆ ನಡೆಸಿ ನಿಶ್ಚಿತವಾಗಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿ ತಿಂಗಳಾಗುತ್ತಾ ಬಂದರೂ ಫಲಿತಾಂಶ ಮಾತ್ರ ಶೂನ್ಯ’ ಎಂದು ಸಂಸದ ರಮೇಶ ಜಿಗಜಿಣಗಿ ತೀವ್ರ ಆಕ್ರೋಶ ಹೊರಹಾಕಿದರು.
ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಮಾನ್ಯತೆ ನವೀಕರಣ, ಪ್ರಥಮ ಮಾನ್ಯತೆ ಪ್ರಕರಣದಲ್ಲಾದ ಅಕ್ರಮಕ್ಕೆ ಸಂಬಂಧಿಸಿದಂತೆ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅವರು, ಗ್ಯಾರಂಟಿ ಹೆಸರಲ್ಲಿ ಅಧಿಕಾರಕ್ಕೆ ಬಂದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಡಗಳ ಅನುದಾನ ನುಂಗಿ ನೀರು ಕುಡಿದಿರುವ ಸರ್ಕಾರ, ಮಹರ್ಷಿ ವಾಲ್ಮೀಕಿ ನಿಗಮದಲ್ಲಿ ದೊಡ್ಡ ಪ್ರಮಾಣದಲ್ಲಿ ಹಗರಣ ನಡೆಸಿತು. ಇದೀಗ ಶಿಕ್ಷಣ ಇಲಾಖೆಗೂ ಬಾಯಿ ಹಾಕಿದೆ. ಇದೊಂದು ನಿಷ್ಕ್ರೀಯ ಹಾಗೂ ಲಜ್ಜೆಗೆಟ್ಟ ಸರ್ಕಾರ ಎಂದು ಹರಿಹಾಯ್ದರು.

ರಾಜ್ಯದಲ್ಲೇ ದೊಡ್ಡ ಹಗರಣ

2025-26ನೇ ಸಾಲಿಗೆ ರಾಜ್ಯದಲ್ಲಿ ಒಟ್ಟು 7483 ಸಂಸ್ಥೆಗಳು ಶಾಲೆ ನವೀಕರಣಕ್ಕಾಗಿ ಅರ್ಜಿ ಸಲ್ಲಿಸಿದ್ದು ಅದರಲ್ಲಿ 1310 ಶಾಲೆಗಳಿಗೆ ಅನುಮೋದನೆ ನೀಡಲಾಗಿದೆ. ವಿಜಯಪುರ ಜಿಲ್ಲೆಯಲ್ಲಿ 446 ಸಂಸ್ಥೆಗಳು ಮಾನ್ಯತೆ ನವೀಕರಣಕ್ಕಾಗಿ ಅರ್ಜಿ ಸಲ್ಲಿಸಿದ್ದು 206 ಸಂಸ್ಥೆಗಳಿಗೆ ಮಾನ್ಯತೆ ನವೀಕರಿಸಲಾಗಿದೆ. ಆ ಮೂಲಕ ರಾಜ್ಯದಲ್ಲೇ ಅತೀ ಹೆಚ್ಚು ಅರ್ಜಿ ಸಲ್ಲಿಕೆಯಾದ ಮತ್ತು ಮಾನ್ಯತೆ ನವೀಕರಣಗೊಂಡ ಜಿಲ್ಲೆಗಳಲ್ಲಿ ವಿಜಯಪುರ ಪ್ರಥಮ ಸ್ಥಾನದಲ್ಲಿದೆ.
ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಕೇಶವ ಪ್ರಸಾದ್ ಅವರು ತ್ರೈಮಾಸಿಕ ಪ್ರಗತಿ ಪರಿಶೀಲನೆ ಸಭೆಯಲ್ಲಿ ಈ ಕುರಿತು ಅನುಮಾನ ವ್ಯಕ್ತಪಡಿಸಲಾಗಿ ಸಾಕಷ್ಟು ಅಕ್ರಮ ನಡೆದಿರುವುದು ಹಂತ ಹಂತವಾಗಿ ಬೆಳಕಿಗೆ ಬಂದಿದೆ. ಕಳೆದ ವಿಧಾನ ಸಭೆ ಅಧಿವೇಶನದಲ್ಲಿಯೂ ಈ ಕುರಿತು ಕೇಶವ ಪ್ರಸಾದ್ ಅವರು ಧ್ವನಿ ಎತ್ತಿದಾಗ ಸ್ವತಂತ್ರ ತನಿಖಾ ತಂಡ ರಚಿಸುವುದಾಗಿ ಭರವಸೆ ನೀಡಿದ್ದ ಶಿಕ್ಷಣ ಸಚಿವರು ಈವರೆಗೂ ತಂಡ ರಚಿಸಿಲ್ಲ ಎಂದರು.

ಸಿಇಒ ಶಿಫಾರಸ್ಸಿಗೂ ಬೆಲೆ ಇಲ್ಲವೇ?

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಗಮನಕ್ಕೇ ಬಾರದಂತೆ ತಂತ್ರಾಂಶವನ್ನು ದುರುಪಯೋಗಪಡಿಸಿಕೊಂಡು 58 ಶಾಲೆಗಳಿಗೆ ಮಾನ್ಯತೆ ನೀಡಿರುವುದಾಗಿ ಸ್ವತಃ ಡಿಡಿಪಿಐ ಎಫ್‌ಐಆರ್ ದಾಖಲಿಸಿದ್ದಾರೆ. ಇನ್ನೊಂದೆಡೆ 200ಕ್ಕೂ ಅಧಿಕ ಶಾಲೆಗಳ ಮಾನ್ಯತೆ ನವೀಕರಣದಲ್ಲಿಯೂ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ. ಪೊಲೀಸ್ ತನಿಖೆ ಹೊರತುಪಡಿಸಿ ಜಿಲ್ಲಾ ಪಂಚಾಯಿತಿ ಸಿಇಒ ಕೂಡ ತನಿಖಾ ತಂಡ ರಚಿಸಿ ಸಮಗ್ರವಾಗಿ ತನಿಖೆ ನಡೆಸಿ ವರದಿ ಸಲ್ಲಿಸಿದ್ದಾಗಿ ಹೇಳಿ ತಿಂಗಳು ಸಮೀಪಿಸುತ್ತಿದೆ. ಆದರೂ, ಈವರೆಗೆ ಕಠಿಣ ಕ್ರಮವಿಲ್ಲ. ಅಷ್ಟೇ ಅಲ್ಲ ಲೋಕಾಯುಕ್ತರು ಕೂಡ ತನಿಖೆ ನಡೆಸಿದ್ದಾರೆ. ಇಷ್ಟಾದರೂ ಗಮನ ಹರಿಸದೇ ಇರುವುದು, ಸಂಬಂಧಿಸಿದ ಅಧಿಕಾರಿ ಮತ್ತು ಸಿಬ್ಬಂದಿ ಮೇಲೆ ಕಠಿಣ ಕ್ರಮ ಜರುಗಿಸದೇ ಇರುವುದನ್ನು ಗಮನಿಸಿದರೆ ಈ ಸರ್ಕಾರ ಎಷ್ಟೊಂದು ರೋಗಗ್ರಸ್ಥವಾಗಿದೆ ಎಂಬುದನ್ನು ಜನ ಅರ್ಥ ಮಾಡಿಕೊಳ್ಳಬೇಕು ಎಂದರು.

ಲಕ್ಷಾಂತರ ರೂಪಾಯಿ ಲಂಚ

ಒಂದೊಂದು ಶಾಲೆ ನವೀಕರಣಕ್ಕೂ ಕನಿಷ್ಠ 7 ಲಕ್ಷ ರೂಪಾಯಿ ಹಾಗೂ ಪ್ರಥಮ ಮಾನ್ಯತೆಗೆ ಅಂದಾಜು 10 ರಿಂದ 15 ಲಕ್ಷ ರೂಪಾಯಿ ಲಂಚ ಪಡೆದಿರುವ ಆರೋಪಗಳಿವೆ. ಕೆಳ ಹಂತದಿಂದ ಮೇಲಿನ ಹಂತದವರೆಗಿನ ಅಧಿಕಾರಿಗಳು ಹಾಗೂ ರಾಜಕಾರಣಿಗಳು ಇದರಲ್ಲಿ ಶಾಮೀಲಾಗಿದ್ದಾರೆನ್ನಲಾಗುತ್ತಿದೆ. ಇನ್ನೊಂದೆಡೆ ನಾಗಠಾಣ ಶಾಸಕರ ಪತ್ರವೂ ಈ ಪ್ರಕರಣದಲ್ಲಿ ತೇಲಿ ಬಂದಿದ್ದು, ಇದರ ಹಿಂದೆ ದೊಡ್ಡ ದೊಡ್ಡ ರಾಜಕಾರಣಿಗಳ ಕೈವಾಡ ಹಾಗೂ ಅಧಿಕಾರಿಗಳು ಸಹ ಶಾಮೀಲಾಗಿರುವ ಸಂಶಯವಿದ್ದು, ಕೂಡಲೇ ಸರ್ಕಾರ ಪೊಲೀಸ್ ತನಿಖೆಯಲ್ಲಿರುವ 58 ಶಾಲೆಗಳ ಹೊರತಾಗಿಯೂ ಮಾನ್ಯತೆ ನವೀಕರಣಕ್ಕೊಳಪಟ್ಟಿರುವ ಶಾಲೆಗಳಿಗೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಬೇಕು. ಮೇಲ್ನೋಟಕ್ಕೆ ಅನರ್ಹವಾಗಿದ್ದರೂ ಅನುಮೋದನೆ ನೀಡಲಾಗಿರುವ ಶಾಲೆಗಳ ಮಾನ್ಯತೆಯನ್ನು ಕೂಡಲೇ ರದ್ದುಗೊಳಿಸಬೇಕು. ಇಡೀ ಪ್ರಕ್ರಿಯೆಯನ್ನು ಪುನಃ ನಡೆಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟಕ್ಕೆ ಅಣಿಯಾಗಬೇಕಾಗುತ್ತದೆ ಎಂದರು.
ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮುಖಡರಾದ ವಿವೇಕಾನಂದ ಡಬ್ಬಿ, ಸಂದೀಪ ಪಾಟೀಲ, ವಿಜಯ ಜೋಷಿ ಇದ್ದರು.