ವಿಜಯಪುರದ ಜಲನಗರದಲ್ಲಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯುನಿಯನ್ ವತಿಯಿಂದ ನಡೆದ ಪೂರ್ವಭಾವಿ ಸಭೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮೀ ಮಾತನಾಡಿದರು. ಕಾಂತಾ ಘಂಟಿ, ಲಕ್ಷ್ಮಣ ಹಂದ್ರಾಳ, ಅಣ್ಣಾರಾಯ ಇಳಿಗೇರ ಮತ್ತಿತರರಿದ್ದಾರೆ. 
ವಿಜಯಪುರ

ಕೇಂದ್ರದ ಕಾರ್ಮಿಕ ಸಂಹಿತೆಗೆ ವಿರೋಧಿಸಿ ಮುಷ್ಕರ, ಫೆ.12 ರಂದು ರಾಜ್ಯದಲ್ಲಿ ಬಂದ್ ಆಚರಣೆ ಎಂದ ಎಸ್. ವರಲಕ್ಷ್ಮೀ

ಪ್ರಮುಖ ಮುಖ್ಯಾಂಶಗಳು

  • ಕಾರ್ಮಿಕ ವಿರೋಧಿ ಸಂಹಿತೆಗೆ ವಿರೋಧ
  • ದೇಶವ್ಯಾಪಿ ಮುಷ್ಕರಕ್ಕೆ ನಿರ್ಧಾರ
  • ರಾಜ್ಯದಲ್ಲಿ ಬಂದ್ ಆಚರಿಸಲು ತೀರ್ಮಾನ
ವಿಜಯಪುರ: ಕೇಂದ್ರ ಸರ್ಕಾರದ ಕಾರ್ಮಿಕ ಸಂಹಿತೆ ಹಿಂಪಡೆಯಲು ಆಗ್ರಹಿಸಿ ಫೆ. 12 ರಂದು ದೇಶವ್ಯಾಪಿ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಲಾಗಿದ್ದು, ಅಂದು ರಾಜ್ಯದಲ್ಲಿ ಸ್ವಯಂ ಪ್ರೇರಿತ ಬಂದ್ ಆಚರಿಸಲಾಗುವುದೆಂದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯುನಿಯನ್ (ಸಿಐಟಿಯು) ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮೀ ತಿಳಿಸಿದರು.
ಇಲ್ಲಿನ ಜಲನಗರದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ನಾಲ್ಕು ಸಂಹಿತೆಗಳು ದೇಶದ ಸಂವಿಧಾನ ಬದ್ಧ ಹಕ್ಕುಗಳು ಹಾಗೂ ಆರ್ಥಿಕ ಸಾರ್ವಭೌಮತ್ವಕ್ಕೆ ಧಕ್ಕೆ ತರಲಿವೆ. ಆದ್ದರಿಂದ ಪ್ರಜಾಸತ್ತಾತ್ಮಕ ಮತ್ತು ದುಡಿಮೆಗಾರರ ಹಕ್ಕುಗಳನ್ನು ರಕ್ಷಿಸಿಕೊಳ್ಳಬೇಕಿದೆ. ಹೀಗಾಗಿ ಈ ಮುಷ್ಕರ ಬೆಂಬಲಿಸಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಹೋರಾಟ ನಡೆಯಲಿದೆ ಎಂದರು.
ಸಂಘಟಿತ, ಅಸಂಘಟಿತ ಕಾರ್ಮಿಕರು, ರೈತರು, ಕೃಷಿ ಕೂಲಿಕಾರರು, ಮಹಿಳೆಯರು, ಯುವಜನ, ವಿದ್ಯಾರ್ಥಿ ಸಂಘಟನೆಗಳು ಈ ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದು, ವಿದ್ಯುತ್, ಸಾರಿಗೆ, ಎಲ್‌ಐಸಿ ಕಚೇರಿಗಳು ಹಾಗೂ ಕೈಗಾರಿಕೆಗಳು ಸಹ ಬಂದ್ ಆಗಲಿವೆ ಎಂದರು.
ಬಿಜೆಪಿ ಸರ್ಕಾರವು ಸಂಪತ್ತನ್ನು ಸೃಷ್ಟಿಸುವ ಕಾರ್ಮಿಕರನ್ನು ಸಂಪೂರ್ಣವಾಗಿ ಗುಲಾಮರನ್ನಾಗಿಸಲು 29 ಕಾರ್ಮಿಕ ಕಾನೂನುಗಳನ್ನು ರದ್ದು ಮಾಡಿ, ಕೇವಲ ನಾಲ್ಕು ಸಂಹಿತೆಗಳನ್ನಾಗಿ ಜಾರಿ ಮಾಡಲು ಕಳೆದ ನವೆಂಬರ್‌ನಲ್ಲಿ ಅಂತಿಮ ಅಧಿಸೂಚನೆ ಹೊರಡಿಸಿದೆ. ಈ ಸಂಹಿತೆಗಳು 2019-20ರಲ್ಲಿ ಲೋಕಸಭೆಯಲ್ಲಿ ಪಾಸಾಗಿದ್ದರೂ, ದೇಶದ ಕಾರ್ಮಿಕ ವರ್ಗ ನಡೆಸಿದ 5 ಮುಷ್ಕರಗಳು ಹಾಗೂ ರೈತರು, ಇತರೆ ಪ್ರಜಾಸತ್ತಾತ್ಮಕ ಚಳುವಳಿಗಳು ಜಾರಿ ಮಾಡಲು ಬಿಟ್ಟಿರಲಿಲ್ಲ. ಇದೀಗ ಕಾರ್ಪೋರೇಟ್ ಕಂಪನಿಗಳ ಮತ್ತು ಬಂಡವಾಳಗಾರರ ಪರವಾಗಿ ಇರುವುದೇ ತನ್ನ ಆದ್ಯ ಕರ್ತವ್ಯ ಎನ್ನುವಂತೆ ಕೇಂದ್ರ ಸರ್ಕಾರ ವರ್ತಿಸಿ ಇವುಗಳನ್ನು ಜಾರಿ ಮಾಡಲೆಂದು ಹೊರಟಿದೆ ಎಂದು ಟೀಕಿಸಿದರು.
20 ಗುತ್ತಿಗೆ ಕಾರ್ಮಿಕರಿದ್ದರೆ ಕಾರ್ಮಿಕ ಇಲಾಖೆಯ ಅನುಮತಿ ಪಡೆಯಬೇಕಿತ್ತು. ಈಗಿದರ ಮಿತಿಯನ್ನು 50ಕ್ಕೇರಿಸಲಾಗಿದೆ. ಇದರಿಂದ ಈಗಾಗಲೇ 100ಕ್ಕೆ ಶೇ.60ರಷ್ಟು ಇರುವ ಗುತ್ತಿಗೆ ಕಾರ್ಮಿಕರು ಶಾಶ್ವತವಾಗಿ ಇಎಸ್‌ಐ, ಪಿಎಫ್, ಕನಿಷ್ಠ ವೇತನ ಸೇರಿ ಮುಂತಾದ ಸೌಲಭ್ಯಗಳಿಂದ ವಂಚಿತರಾಗುತ್ತಾರೆ. ಅಲ್ಲದೇ, 300ಕ್ಕಿಂತ ಹೆಚ್ಚು ಕಾರ್ಮಿಕರು ಇರುವ ಕಾರ್ಖಾನೆಗಳಿಗೆ ಮಾತ್ರ ಸ್ಥಾಯಿ ಆದೇಶಗಳು ಅನ್ವಯವಾಗುತ್ತವೆ. ಲಕ್ಷಾಂತರ ಕಾರ್ಮಿಕರು ತಮ್ಮ ಮೂಲ ಹಕ್ಕುಗಳನ್ನು ಕಳೆದುಕೊಳ್ಳುತ್ತಾರೆ. ಪಿಪಿಪಿ, ಎನ್‌ಎಂಪಿ ಮಾದರಿಗಳನ್ನು ತಂದು ದೇಶದ ಆರ್ಥಿಕ ವಲಯವನ್ನು ಸಂಪೂರ್ಣವಾಗಿ ಖಾಸಗಿಕರಣ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.
ಸಿಐಟಿಯು ರಾಜ್ಯ ಉಪಾಧ್ಯಕ್ಷೆ ಕಾಂತಾ ಘಂಟಿ, ಸಿಐಟಿಯು ಜಿಲ್ಲಾ ಸಂಚಾಲಕ ಲಕ್ಷ್ಮಣ ಹಂದ್ರಾಳ, ಅಣ್ಣಾರಾಯ ಇಳಿಗೇರ, ಸುರೇಖಾ ರಜಪೂತ, ಸುನಂದಾ ನಾಯಕ, ಅಶ್ವಿನಿ ತಳವಾರ, ಭಾರತಿ ವಾಲಿ, ಸರಸ್ವತಿ ಮಠ, ಸುಮಂಗಲಾ ಆನಂದ ಶೆಟ್ಟಿ, ಲಾಲ್ ಅಹಮದ್ ಶೇಕ್, ಜಿ.ಬಿ. ಸುರೇಶ್, ಭೀಮರಾಯ ಪೂಜಾರಿ, ಖಾಜಾಸಾಬ ಕೋಲಾರ್ ಮತ್ತಿತರರಿದ್ದರು.