ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ತೃತೀಯ ಸ್ಥಾನ ಪಡೆದ ಹಿನ್ನೆಲೆ ವಿದ್ಯಾರ್ಥಿನಿ ಲಕ್ಷ್ಮೀ ಗೆ ತಾಯಿ ಶೋಭಾ ನಂದೂರ ಸಿಹಿ ತಿನಿಸಿ ಸಂಭ್ರಮಿಸಿದರು. 
ವಿಜಯಪುರ

ಗ್ರಾಮೀಣ ಪ್ರತಿಭೆ ಲಕ್ಷ್ಮೀಗೋಲಿದ ಸರಸ್ವತಿ..!

ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡ ಗ್ರಾಮೀಣ ಪ್ರತಿಭೆ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ೬೦೦ಕ್ಕೆ ೫೯೪ ಅಂಕ ಪಡೆಯುವ ಮೂಲಕ ಲಕ್ಷ್ಮೀ ರಾಜ್ಯಕ್ಕೆ ತೃತೀಯ ಸ್ಥಾನ ಪಡೆದುಕೊಂಡು ಅಚ್ಚರಿಯ ಸಾಧನೆಗೈದಿದ್ದಾಳೆ.
ಜಿಲ್ಲೆಯ ಚಡಚಣ ತಾಲೂಕಿನ ಬರಡೋಲ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಲಕ್ಷ್ಮೀ ಶ್ರೀಕಾಂತ ನಂದೂರ ಈ ಅಪೂರ್ವ ಸಾಧನೆಗೈದ ವಿದ್ಯಾರ್ಥಿನಿ.
ಲಕ್ಷ್ಮೀ ಆರನೇ ತರಗತಿಯಲ್ಲಿದ್ದಾಗಲೇ ತಂದೆಯನ್ನು ಕಳೆದುಕೊಂಡಿದ್ದು, ತಾಯಿ ಶೋಭಾ ಹೊಲದ ಕೆಲಸ ಮಾಡುವ ಜತೆಗೆ ಮಗಳ ಸಾಧನೆಗೆ ಬೆನ್ನುಲುಬಾಗಿ ನಿಂತು ಪ್ರೋತ್ಸಾಹ ನೀಡಿದ್ದಾರೆ.
ವಿದ್ಯಾರ್ಥಿನಿ ಲಕ್ಷ್ಮೀ ಕನ್ನಡ, ಸಮಾಜಶಾಸ್ತ್ರ, ರಾಜಕೀಯ ಶಾಸ್ತ್ರದಲ್ಲಿ ೧೦೦ಕ್ಕೆ ೧೦೦, ಇತಿಹಾಸ ಮತ್ತು ಅರ್ಥ ಶಾಸ್ತ್ರದಲ್ಲಿ ತಲಾ ೯೯ ಹಾಗೂ ಇಂಗ್ಲಿಷ್‌ನಲ್ಲಿ ೯೬ ಅಂಕ ಪಡೆಯುವ ಮೂಲಕ ೬೦೦ಕ್ಕೆ ೫೯೪ ಅಂಕಗಳನ್ನು ಪಡೆದುಕೊಂಡು ಸಾಧನೆ ಮಾಡಿದ್ದಾರೆ.
ತಾಯಿಯ ಪ್ರೋತ್ಸಾಹ-ಉಪನ್ಯಾಸಕರ ಮಾರ್ಗದರ್ಶನ
ಲಕ್ಷ್ಮೀ ತನ್ನ ಸಾಧನೆಯ ಕುರಿತು `ವಿಜಯವಾಣಿ' ದಿನಪತ್ರಿಕೆಯೊಂದಿಗೆ ಸಂತಸ ಹಂಚಿಕೊಂಡ ವಿದ್ಯಾರ್ಥಿನಿ ಶ್ರೀಕಾಂತ ನಂದೂರ, ಕಾಲೇಜಿನಲ್ಲಿ ಅಂದು ಹೇಳಿದ ಪಾಠವನ್ನು ಅಂದೇ ಓದಿಕೊಂಡು ಗಟ್ಟಿ ಮಾಡಿ ಬಿಡುತ್ತಿದೆ. ಕಾಲೇಜಿನ ಹೊರತಾಗಿ ನಿತ್ಯ ಮನೆಯಲ್ಲಿ ೫ ರಿಂದ ೬ ಗಂಟೆ ಅಭ್ಯಾಸ ಮಾಡುತ್ತಿದೆ. ನನ್ನ ತಾಯಿ ನಮ್ಮದೇ ಜಮೀನಿನಲ್ಲಿ ಕೃಷಿ ಮಾಡುತ್ತಾ, ನಿರಂತರ ಪ್ರೋತ್ಸಾಹ ನೀಡಿದರು. ಅವರೇ ನನಗೆ ಪ್ರೇರಣೆ. ಜೊತೆಗೆ ನಮ್ಮ ಕಾಲೇಜಿನ ಉಪನ್ಯಾಸಕರು ನಿತ್ಯ ನನಗೆ ಮಾರ್ಗದರ್ಶನ ನೀಡುತ್ತಿದ್ದರು. ಹೀಗಾಗಿ ರಾಜ್ಯಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯವಾಯಿತು. ಅವರಿಗೆಲ್ಲ ಧನ್ಯವಾದ ಸಲ್ಲಿಸುವೆ ಎಂದು ಲಕ್ಷ್ಮೀ ತಿಳಿಸಿದರು.
ಮುಂದಿನ ಗುರಿ
ಮುಂದೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿಮಾಡಿಕೊಂಡು ಉನ್ನತ ಹಂತಕ್ಕೇರಿ ಸರ್ಕಾರದ ಸೇವೆಯಲ್ಲಿ ತೊಡಗಬೇಕು ಎಂಬ ಗುರಿ ಇಟ್ಟುಕೊಂಡಿದ್ದು, ಪದವಿಯ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಈಗಿನಿಂದಲೇ ಸಿದ್ದತೆ ಆರಂಭಿಸುವೆ ಎಂದು ಹೇಳುತ್ತಾರೆ.
ತಾಯಿಯ ಮೆಚ್ಚುಗೆ
ಮಗಳ ಸಾಧನೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ತಾಯಿ ಶೋಭಾ ನಂದೂರ, ನನ್ನ ಮಗಳು ಲಕ್ಷ್ಮೀ ಒಂದನೇ ತರಗತಿಯಿಂದ ಪಿಯುಸಿವರೆಗೆ ಸರ್ಕಾರಿ ಶಾಲೆಯಲ್ಲಿಯೇ ಓದಿದ್ದಾಳೆ. ಓದಿನ ಜತೆಗೆ ನನಗೆ ಹೊಲದಲ್ಲಿಯೂ ಸಹಾಯ ಮಾಡುತ್ತಿದ್ದಳು. ಮಗಳು ರಾಜ್ಯಮಟ್ಟದಲ್ಲಿ ಸಾಧನೆ ಮಾಡುತ್ತಾಳೆ ಎಂದು ಊಹೆ ಮಾಡಿರಲಿಲ್ಲ. ತುಂಬಾ ಖುಷಿಯಾಗಿದೆ.
"

ಮುಂದಿನ ಗುರಿಯನ್ನು ಇಟ್ಟುಕೊಂಡು ವಿದ್ಯಾರ್ಥಿಗಳು ಅಂದಿನ ಪಾಠ ಅಂದೇ ಮನನ ಮಾಡಿಕೊಂಡು ಏಕಾಗ್ರತೆಯಿಂದ ಅಧ್ಯಯನ ಕೈಗೊಂಡರೆ ಸಾಧನೆ ಸುಲಭವಾಗುತ್ತದೆ. ಸತತ ಪರಿಶ್ರಮ ವಹಿಸಿದ್ದಲ್ಲಿ ಪರೀಕ್ಷೆ ಹಾಲು ಕುಡಿದಷ್ಟೇ ಸಲೀಸಾಗಲಿದೆ.

|ಲಕ್ಷ್ಮೀ ನಂದೂರ, ಮೂರನೇ ರ‍್ಯಾಂಕ್ ಪಡೆದ ವಿದ್ಯಾರ್ಥಿನಿ