RAMESH-JIGAJINAGI 
ವಿಜಯಪುರ

ನಬಾರ್ಡ್‌ನಿಂದ ರೂ. 124.50 ಕೋಟಿ ನೆರವು, ಅನುದಾನದ ಸದುಪಯೋಗಕ್ಕೆ ಸಂಸದ ರಮೇಶ ಜಿಗಜಿಣಗಿ ಸಲಹೆ

ಪ್ರಮುಖ ಮುಖ್ಯಾಂಶಗಳು

  • ನಬಾರ್ಡ್‌ನಿಂದ 124.50 ಕೋಟಿ ರೂಪಾಯಿ ನೆರವು
  • 2024-25ನೇ ಸಾಲಿಗೆ ಮೊದಲ ಹಂತದಲ್ಲಿ ನೆರವು
  • 127.7 ಕೋಟಿ ರೂಪಾಯಿ ನೆರವು ನೀಡಲು ಶಿಫಾರಸ್ಸು
ವಿಜಯಪುರ: ಕೃಷಿ, ಸಣ್ಣ ಕೈಗಾರಿಕೆ ಮತ್ತು ಗ್ರಾಮೀಣ ಅಭಿವೃದ್ಧಿ ನೆರವಿಗಾಗಿ 2024-25ನೇ ಸಾಲಿಗೆ ಮೊದಲ ಹಂತದಲ್ಲಿ ನಬಾರ್ಡ್‌ನಿಂದ 124.50 ಕೋಟಿ ರೂಪಾಯಿ ಮಂಜೂರಾಗಿದ್ದು, ರಾಜ್ಯ ಸರ್ಕಾರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಸಂಸದ ರಮೇಶ ಜಿಗಜಿಣಗಿ ತಿಳಿಸಿದರು.
ರಸ್ತೆ ಅಭಿವೃದ್ಧಿ, ವಿದ್ಯುತ್ ಕೇಂದ್ರಗಳ ಸ್ಥಾಪನೆ, ಹೆದ್ದಾರಿಗಳ ಅಭಿವೃದ್ಧಿ ಸೇರಿದಂತೆ ಒಟ್ಟು 14 ಕಾಮಗಾರಿಗಳಿಗೆ 124.50 ಕೋಟಿ ರೂಪಾಯಿ ಮಂಜೂರಾಗಿದ್ದು, ಆಲಮೇಲದ ತೋಟಗಾರಿಕೆ ವಿಶ್ವ ವಿದ್ಯಾಲಯ, ಇಂಡಿಯ ಜಿಟಿಟಿಸಿ ಕೇಂದ್ರ ಹಾಗೂ ತೊರವಿಯ ಎಪಿಎಂಸಿ ಪ್ರಾಂಗಣ ಸೇರಿದಂತೆ ಒಟ್ಟು 3 ಮಹತ್ವದ ಯೋಜನೆಗಳಿಗಾಗಿ 127.7 ಕೋಟಿ ರೂಪಾಯಿ ನೆರವು ನೀಡಲು ಶಿಫಾರಸ್ಸು ಪತ್ರ ಸಲ್ಲಿಸಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಎರಡೂವರೆ ವರ್ಷವಾದರೂ ಕಾಂಗ್ರೆಸ್‌ನಿಂದ ಒಂದೇ ಒಂದು ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಗುತ್ತಿಲ್ಲ. ಸಂಕಷ್ಟ ಬಂದಾಗಲೆಲ್ಲ ಪ್ರಧಾನಿ ಮೋದಿ ಅವರಿಂದ ಹಣ ಬಂದಿಲ್ಲವೆಂದು ಬೊಬ್ಬೆ ಹೊಡೆಯುವ ಕಾಂಗ್ರೆಸ್ಸಿಗರಿಗೆ ಇಷ್ಟೆಲ್ಲ ನೆರವು ನೀಡುತ್ತಿದ್ದರೂ ಸದುಪಯೋಗ ಪಡಿಸಿಕೊಳ್ಳಲಾಗುತ್ತಿಲ್ಲ. ಈ ಹಿಂದಿನ ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ ಅಡಿಗಲ್ಲು ಹಾಕಿದ ಯೋಜನೆಗಳನ್ನೇ ಪೂರ್ಣಗೊಳಿಸಲಾಗದ ಕಾಂಗ್ರೆಸ್ ಸರ್ಕಾರ ಹೊಸ ಯೋಜನೆ ಜಾರಿ ಮಾಡುವುದು ಯಾವಾಗ? ಅನುಷ್ಟಾನಗೊಳಿಸುವುದು ಇನ್ಯಾವಾಗ? ಎಂದು ಜಿಗಜಿಣಗಿ ಲೇವಡಿ ಮಾಡಿದರು.
ಕೇಂದ್ರ ಸರ್ಕಾರ ತನ್ನ ಪಾಲಿನ ಅನುದಾನ ಸಕಾಲಕ್ಕೆ ಕೊಡುತ್ತಿದೆ. ಆದರೆ, ರಾಜ್ಯ ಸರ್ಕಾರ ತನ್ನ ಪಾಲಿನ ಅನುದಾನ ಬಿಡುಗಡೆಗೊಳಿಸುವಲ್ಲಿ ವಿಫಲವಾಗಿದೆ. ಹೀಗಾಗಿ ಮಹತ್ವಾಕಾಂಕ್ಷಿ ಯೋಜನೆಗಳೆಲ್ಲವೂ ಮಣ್ಣು ಪಾಲಾಗುತ್ತಿವೆ. ಜಲಧಾರ ಯೋಜನೆಗೆ ಕೇಂದ್ರ ಸರ್ಕಾರ ತನ್ನ ಪಾಲಿನ ಅನುದಾನ ನೀಡಿದೆ. ಜಲಜೀವನ್ ಮಿಷನ್ ಯೋಜನೆಯಡಿ ಅನುದಾನ ನೀಡಿದರೂ ರಾಜ್ಯ ಸರ್ಕಾರ ಭ್ರಷ್ಟಾಚಾರ ಎಸಗಿ ಯೋಜನೆ ಅನುಷ್ಟಾನದಲ್ಲಿ ಹಿಂದೆ ಬಿದ್ದಿದೆ. ಕೆಲವು ದಿನಗಳ ಹಿಂದಷ್ಟೇ ಮಾಧ್ಯಮಗಳಲ್ಲಾದ ವರದಿ ಗಮನಿಸಿದ್ದು, ಜಲ ಜೀವನ್ ಮಿಷನ್ ಕಾಮಗಾರಿಯಡಿ ಕರ್ನಾಟಕದಲ್ಲಿ ಬಹಳಷ್ಟು ಭ್ರಷ್ಟಾಚಾರವಾಗಿದ್ದಾಗಿ ಪ್ರಧಾನಿ ಮೋದಿ ಅವರೇ ತಿಳಿಸಿದ್ದಾರೆ. ಹೀಗಾಗಿ ಈ ಕಾಂಗ್ರೆಸ್ ಸರ್ಕಾರಕ್ಕೆ ತನ್ನ ಯೋಜನೆಗಳ ಬಗ್ಗೆಯೂ ಅಭಿಮಾನವಿಲ್ಲ ಮತ್ತು ಕೇಂದ್ರ ಯೋಜನೆಗಳ ಸದುಪಯೋಗವೂ ಆಗಲು ಬಿಡುತ್ತಿಲ್ಲವೆಂದು ಹರಿಹಾಯ್ದರು.
ಇಂಡಿ ಮತ್ತು ಸಿಂದಗಿ ಶಾಖಾ ಕಾಲುವೆಗೆ ಅಂದಾಜು 2667 ಕೋಟಿ ರೂಪಾಯಿ ಮಂಜೂರಾಗಿದ್ದು, ರಾಜ್ಯ ಸರ್ಕಾರದಿಂದ ವರದಿ ಕೇಳಿದೆ. ರಾಜ್ಯ ಸರ್ಕಾರ ತನ್ನ ಪಾಲಿನ ಹಣ ಕೊಡಬೇಕಲ್ಲವೇ? ಆ ಕುರಿತು ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಈ ಹಿಂದಿನ ಯೋಜನೆಗಳನ್ನೇ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ. ಈ ಹಿಂದೆ ಬಿಜೆಪಿ ಆಡಳಿತಾವಧಿಯಲ್ಲಿ ಸುಮಾರು 300 ಕೋಟಿ ರೂ.ವೆಚ್ಚದಲ್ಲಿ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಗೆ ಅಡಿಗಲ್ಲು ಸ್ಥಾಪಿಸಲಾಯಿತು. ಆದರೆ ಈವರೆಗೆ ಮೊದಲ ಹಂತದ ಯೋಜನೆಯೇ ಪೂರ್ಣಗೊಂಡಿಲ್ಲ. ತಮ್ಮದೇ ಆಡಳಿತಾವಧಿಯಲ್ಲಿ ಎಂ.ಬಿ. ಪಾಟೀಲರು ನೀರಾವರಿ ಮಂತ್ರಿಯಾಗಿದ್ದಾಗ ಯೋಜಿಸಲಾಗಿದ್ದ ಚಡಚಣ ಏತ ನೀರಾವರಿ ಯೋಜನೆ ಸಂಪೂರ್ಣ ವಿಫಲವಾಗಿದೆ. ಸುಮಾರು ಏಳು ಹಳ್ಳಿಗಳ 22 ಸಾವಿರ ಎಕರೆ ಪ್ರದೇಶ ನೀರಾವರಿಗೆ ಒಳಪಡಬೇಕಿತ್ತು. ಆದರೆ ಅರ್ಧ ಎಕರೆಗೂ ನೀರು ಬಂದಿಲ್ಲ. ಶೇ. 75 ರಷ್ಟು ಕಾಮಗಾರಿ ಬಾಕಿ ಇದ್ದರೂ ಗುತ್ತಿಗೆದಾರನಿಗೆ ಬಿಲ್ ಪಾವತಿಸಲಾಗಿದೆ ಎಂದು ಆರೋಪಿಸಿದರು.
ಹೀಗಾಗಿ ಬಿಜೆಪಿ ಅವಧಿಯಲ್ಲಿನ ಯೋಜನೆ ಒತ್ತಟ್ಟಿಗಿರಲಿ ತಮ್ಮದೇ ಸರ್ಕಾರದ ಯೋಜನೆಗಳನ್ನು ಜಾರಿಗೊಳಿಸಲು ಅನುದಾನದ ಅಭಾವದಿಂದ ಬಳಲುತ್ತಿರುವ ಕಾಂಗ್ರೆಸ್ ಸರ್ಕಾರ ನಬಾರ್ಡ್‌ನಿಂದ ಮಂಜೂರಾಗುವ ಹಣವಾದರೂ ಸದುಪಯೋಗಪಡಿಸಿಕೊಳ್ಳಬೇಕೆಂದರು.