ವಿಜಯಪುರ ನಗರದ ಸಿದ್ಧೇಶ್ವರ ಸಂಸ್ಥೆಯ ಶಿವಾನುಭವ ಮಂಟಪದಲ್ಲಿ ನಡೆದ ಹಿಂದೂ ಮುಖಂಡರು, ಕಾರ್ಯಕರ್ತರ ಸಭೆಯಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿದರು. ಪಾಲಿಕೆ ಸದಸ್ಯರಾದ ರಾಜಶೇಖರ ಮಗಿಮಠ, ಶಿವರುದ್ರ ಬಾಗಲಕೋಟ, ಪ್ರೇಮಾನಂದ ಬಿರಾದಾರ ಇತರರಿದ್ದಾರೆ. 
ವಿಜಯಪುರ

ಮತದಾರರ ಪಟ್ಟಿಯಲ್ಲಿ ಹೆಸರು ಉಳಿಸಿಕೊಳ್ಳಿ; ಕಾರ್ಯಕರ್ತರಿಗೆ ಶಾಸಕ ಯತ್ನಾಳ ಕರೆ

ಪ್ರಮುಖ ಮುಖ್ಯಾಂಶಗಳು

  • ಹಿಂದೂ ಮುಖಂಡರ ಸಭೆ
  • ಶಿವಾನುಭವ ಮಂಟಪದಲ್ಲಿ ಆಯೋಜನೆ
  • ಮಹಾನಗರ ಪಾಲಿಕೆ ಹಲವು ಸದಸ್ಯರು ಭಾಗಿ
ವಿಜಯಪುರ: ‘ನಮ್ಮ ಮತವನ್ನು ಉಳಿಸಿಕೊಂಡು, ಮತ ಚಲಾಯಿಸಲು ನಾವುಗಳೇ ಯೋಚನೆ ಮಾಡಿದರೇ, ದೇಶ ಉಳಿಯುವುದಾದರೂ ಹೇಗೆ ? ಹಿಂದೂಗಳು ಎಸ್‌ಐಆರ್ ಪ್ರಕ್ರಿಯೆಯಲ್ಲಿ ತಪ್ಪದೇ ಭಾಗವಹಿಸಬೇಕು’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರದ ಸಿದ್ಧೇಶ್ವರ ಸಂಸ್ಥೆಯ ಶಿವಾನುಭವ ಮಂಟಪದಲ್ಲಿ ಮಂಗಳವಾರ ನಡೆದ ಹಿಂದೂ ಮುಖಂಡರು, ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಪ್ರತಿಯೊಂದು ಮತವೂ ಅಮೂಲ್ಯ. ವಿಜಯಪುರ ನಗರದ ಹಿತದೃಷ್ಟಿಯಿಂದ ಪ್ರತಿಯೊಬ್ಬ ಹಿಂದೂ ಮತ ಉಳಿಸಿಕೊಳ್ಳುವುದು ಅತ್ಯವಶ್ಯ. ನಮ್ಮ ಮನೆಯ ಕೆಲಸ ಎಂದುಕೊಂಡು ತಪ್ಪದೇ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಭಾಗವಹಿಸಿ, ಮತದಾರರ ಪಟ್ಟಿಯಲ್ಲಿ ತಮ್ಮ ಮತ್ತು ಕುಟುಂಬದ ಸದಸ್ಯರ, ನೆರೆ ಹೊರೆಯವರ, ಸಂಬಂಧಿಕರ ಹೆಸರು ಉಳಿಸಲು ಶ್ರಮವಹಿಸಬೇಕು ಎಂದರು.
ಹೇಗಾದರೂ ಮಾಡಿ ವಿಜಯಪುರ ನಗರ ಮತಕ್ಷೇತ್ರವನ್ನು ಹಿಂದೂಗಳಿಂದ ಕಸಿದುಕೊಳ್ಳಬೇಕೆಂಬ ಹುನ್ನಾರ ನಡೆಸಿದ್ದಾರೆ. ತಮ್ಮ ಖೊಟ್ಟಿ ಮತಗಳು ಕೈಬಿಟ್ಟು ಹೋಗುತ್ತವೆ ಎಂಬ ಭಯದಿಂದ ಕೆಲ ಗೂಂಡಾಗಳು ಎಸ್‌ಐಆರ್ ಪ್ರಕ್ರಿಯೆಗೆ ಅಡೆತಡೆ ಉಂಟು ಮಾಡಲು ಗೂಂಡಾಗಿರಿ ನಡೆಸಿದ್ದಾರೆ. ಅದೆಲ್ಲ ಇಲ್ಲಿ ನಡೆಯಲ್ಲ ಎಂದು ಎಚ್ಚರಿಕೆ ನೀಡಿದರು.
ನಮ್ಮವರು ಯಾರೂ ಹೆದರಬೇಡಿ, ಗಟ್ಟಿಯಾಗಿ ನಿಲ್ಲಿ. ವಿನಾಕಾರಣ ಗೊದಲ ಸೃಷ್ಟಿಸುವ, ಅಡೆತಡೆ ಉಂಟು ಮಾಡುವರನ್ನು ಧೈರ್ಯದಿಂದ ಪ್ರಶ್ನಿಸಿ. ಮತದಾನ ಮಾಡುವವರಿಗೆ ಸಹಾಯ-ಸಹಕಾರ ಮಾಡಲು ಸಂಘ-ಸಂಸ್ಥೆಗಳಿಗೆ, ಸಾಮಾನ್ಯ ನಾಗರಿಕರಿಗೆ ಅಧಿಕಾರವಿದೆ. ಹೀಗಾಗಿ ನಿಮ್ಮ ಕುಟುಂಬದ ಸದಸ್ಯರ ಜೊತೆಗೆ ನೆರೆ ಹೊರೆಯವರು, ಸಂಬಂಧಿಕರು, ಸಮಾಜ ಬಾಂಧವರು ಎಸ್‌ಐಆರ್ ಮಾಡಿಕೊಂಡಿರುವ ಬಗ್ಗೆ ವಿಚಾರಿಸಿಕೊಳ್ಳಬೇಕು. ಮಾಡಿಕೊಳ್ಳದ ಮತದಾರರಿಗೆ ನೆರವಾಗಲು ಸಲಹೆ ನೀಡಿದರು.
ಈ ಹಿಂದೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಧ್ವಜ ಹಿಡಿದವರು ಕಂಡರೇ ಹೊಡೆಯುತ್ತಿದ್ದರು, ಚುನಾವಣೆಗಳ ಸಂದರ್ಭದಲ್ಲಿ ಹಿಂದೂಗಳ ಮನೆಗೆ ಬೀಗ ಹಾಕಿ ಮತದಾನಕ್ಕೆ ಬರದಂತೆ ತಡೆಯುತ್ತಿದ್ದರು. ಅಷ್ಟೊಂದು ಗೂಂಡಾಗಿರಿ ಇತ್ತು. ಎಸ್‌ಐಆರ್ ಪ್ರಕ್ರಿಯೆ ಬಳಿಕ ಬಾಂಗ್ಲಾ ನುಸುಳುಕೊರರ ಖೊಟ್ಟಿ ಮತಗಳು ಡಿಲಿಟ್ ಆಗಿದ್ದರಿಂದ ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯ ಫಲಿತಾಂಶವೇ ಬದಲಾಯಿತು. ಅಲ್ಲಿದ್ದ ಬಾಂಗ್ಲಾ ನುಸುಳುಕೋರರು, ರೊಹಿಂಗ್ಯಾಗಳು ಇದೀಗ ಕರ್ನಾಟಕ ಸೇರಿದ್ದಾರೆ. ಈ ಸರ್ಕಾರ ಅಂತವರಿಗೆ ಆತಿಥ್ಯ ನೀಡುತ್ತಿದೆ ಎಂದು ದೂರಿದರು.
ಫಕೀರ್ ಬಸ್ತಿ ಅಂತ ಕರೆಯುತ್ತಿದ್ದ ವಿಜಯಪುರ ನಗರಲ್ಲಿ ಅಭಿವೃದ್ಧಿ ಎನ್ನುವುದೇ ಮರಿಚಿಕೆ ಆಗಿತ್ತು. ಎಲ್ಲಿ ನೋಡಿದರಲ್ಲಿ ತಗ್ಗುಗಳು, ಕಸದ ರಾಶಿ, ಧೂಳು ಇತ್ತು. ಕಳೆದ 8 ವರ್ಷಗಳಲ್ಲಿ ನಿರೀಕ್ಷೆ ಮೀರಿ ನಗರ ಅಭಿವೃದ್ಧಿ ಆಗಿದ್ದರಿಂದ ವಿಜಯಪುರ ರಾಜ್ಯದ, ದೇಶದ ಗಮನಸೆಳೆಯುತ್ತಿದೆ. ಶಾಂತಿ ನೆಲೆಸಿದೆ, ಇದು ಹೀಗೆಯೇ ಮುಂದುವರೆಯಬೇಕು. ಅಭಿವೃದ್ಧಿ ಕಾರ್ಯಗಳು ಸಾಗಬೇಕು ಅಂದರೆ ಪ್ರತಿಯೊಬ್ಬರ ಮತವೂ ವಿಜಯಪುರ ನಗರಕ್ಕೆ ಅಮೂಲ್ಯವಾಗಿದೆ. ಹೀಗಾಗಿ ಎಲ್ಲರೂ ಎಸ್.ಐ.ಆರ್ ಮಾಡಿಕೊಂಡು ಮತ ಉಳಿಸಿಕೊಳ್ಳಬೇಕು ಎಂದು ತಿಳಿಸಿದರು.
ಮಹಾನಗರ ಪಾಲಿಕೆ ಸದಸ್ಯರಾದ ರಾಜಶೇಖರ ಮಗಿಮಠ, ಶಿವರುದ್ರ ಬಾಗಲಕೋಟ, ಪ್ರೇಮಾನಂದ ಬಿರಾದಾರ, ರಾಹುಲ್ ಜಾಧವ, ರಾಜಶೇಖರ ಕುರಿಯವರ, ಸಿದ್ಧೇಶ್ವರ ಬ್ಯಾಂಜ್ ನಿರ್ದೇಶಕರಾದ ಗುರು ಗಚ್ಚಿನಮಠ, ಶಂಕರ ಹೂಗಾರ ಮಾತನಾಡಿದರು.
ಮೇಯರ್ ಎಂ.ಎಸ್. ಕರಡಿ, ಸದಸ್ಯರಾದ ಕಿರಣ ಪಾಟೀಲ, ವಿಠ್ಠಲ ಹೊಸಪೇಟೆ, ಮಲ್ಲಿಕಾರ್ಜುನ ಗಡಗಿ, ಸಿದ್ಧೇಶ್ವರ ಸಂಸ್ಥೆ ಚೇರಮನ್ ಬಸಯ್ಯ ಹಿರೇಮಠ, ನಿರ್ದೇಶಕರಾದ ಸಾಯಿಬಣ್ಣ ಭೋವಿ, ನಾಗಪ್ಪ ಗುಗ್ಗರಿ, ರಾಜು ಗಣಿ, ಮುಖಂಡರಾದ ಎಂ.ಎಸ್. ರುದ್ರಗೌಡ್ರ, ಪಾಂಡುಸಾಹುಕಾರ ದೊಡಮನಿ, ರಾಜೇಶ ದೇವಗಿರಿ ಇತರರಿದ್ದರು. ಯುವ ಮುಖಂಡ ಸಂತೋಷ ಪಾಟೀಲ ನಿರೂಪಿಸಿದರು. ಬಸವರಾಜ ಕವಲಗಿ ವಂದಿಸಿದರು.