ವಿಜಯಪುರ ಜಿಲ್ಲಾಡಳಿತ ಕಚೇರಿಗೆ ಸ್ಕೂಟರ್ ಮೇಲೆ ಆಗಮಿಸಿ ಗಮನ ಸೆಳೆದ ಸಂಸದ ರಮೇಶ ಜಿಗಜಿಣಗಿ. ಪಾಪುಸಿಂಗ್ ರಜಪೂತ ಚಾಲನೆ ಮಾಡುತ್ತಿದ್ದಾರೆ. 
ವಿಜಯಪುರ

ಪ್ರಧಾನಿ ನರೇಂದ್ರ ಮೋದಿ ಕರೆಗೆ ಸ್ಪಂದನೆ, ಸ್ಕೂಟರ್ ಏರಿ ಡಿಸಿ ಕಚೇರಿಗೆ ಬಂದು ಗಮನ ಸೆಳೆದ ಸಂಸದ

ಪ್ರಮುಖ ಮುಖ್ಯಾಂಶಗಳು

  • ಜನಜಾಗೃತಿಗೆ ಮುಂದಾದ ನಾಯಕ
  • ಗಮನ ಸೆಳೆದ ರಮೇಶ ಜಿಗಜಿಣಗಿ
  • ದೇಶದ ಹಿತಕ್ಕಾಗಿ ಸಹಕರಿಸಲು ಮನವಿ
  • ಪ್ರಧಾನಿ ಮೋದಿ ಕೈ ಬಲಪಡಿಸಲು ವಿನಂತಿ
ವಿಜಯಪುರ: ಜಾಗತಿಕ ಬಿಕ್ಕಟ್ಟಿನಿಂದಾಗಿ ಭಾರತದ ಆರ್ಥಿಕತೆ ಮೇಲೆ ಪರಿಣಾಮ ಬೀರುತ್ತಿರುವ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿಯ ಮಿತವ್ಯಯ ಸೂತ್ರ ಪಾಲನೆಯ ಕರೆಯ ಮೇರೆಗೆ ಸಂಸದ ರಮೇಶ ಜಿಗಜಿಣಗಿ ಸೋಮವಾರ ಇಲೆಕ್ಟ್ರಿಕ್ ಸ್ಕೂಟರ್ ಮೇಲೆ ಜಿಲ್ಲಾಡಳಿತ ಕಚೇರಿಗೆ ಆಗಮಿಸಿದ ಸರ್ಕಾರದ ಕಾರ್ಯಕ್ರಮಗಳನ್ನು ಪರಿಶೀಲಿಸಿದರು.
ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿರುವ ಹಳೆಯ ಪ್ರವಾಸಿ ಮಂದಿರದೊಳಗಿರುವ ಸಂಸದರ ಕಚೇರಿಯಿಂದ ಜಿಲ್ಲಾಡಳಿತ ಕಚೇರಿಗೆ ಹೆಲ್ಮೆಟ್ ಧರಿಸಿ ಸ್ಕೂಟರ್ ಮೇಲೆ ಆಗಮಿಸಿದ ಸಂಸದರು, ಕೆಲ ಕಾಲ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ನಿರ್ಗಮಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾಗತಿಕ ಮಟ್ಟದಲ್ಲಾಗುತ್ತಿರುವ ಯುದ್ದಗಳಿಂದಾಗಿ ಭಾರತದ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತಿದೆ. ಕೊಲ್ಲಿ ರಾಷ್ಟ್ರಗಳ ಯುದ್ದದಿಂದಾಗಿ ತೈಲ ಪೂರೈಕೆಯಲ್ಲಿ ವ್ಯತ್ಯಯವುಂಟಾಗುತ್ತಿದೆ. ತಿಂಗಳುಗಟ್ಟಲೆ ನಡೆದಿರುವ ಈ ಯುದ್ದ ಇನ್ನೂ ಮುಕ್ತಾಯ ಕಂಡಿಲ್ಲ. ದಿನೇ ದಿನೇ ಯುದ್ಧ ಭೀತಿ ಹೆಚ್ಚಾಗುತ್ತಿದೆ. ಹೀಗಾಗಿ ಭವಿಷ್ಯದಲ್ಲಿ ಇನ್ನಷ್ಟು ತೈಲ ಅಭಾವ ಉಂಟಾಗಬಹುದು. ಹೀಗಾಗಿ ಮುಂಜಾಗೃತ ಕ್ರಮವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮಿತವ್ಯಯ ತತ್ವ ಬೋಧಿಸಿದ್ದಾರೆ. ದೇಶದ ಹಿತಕ್ಕಾಗಿ ಅವರ ಕರೆಗೆ ಓಗೊಡಬೇಕಾಗಿರುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ಏನೇ ಹೇಳಿದರೂ ಅದರ ಹಿಂದೆ ಒಂದೊಳ್ಳೆಯ ಉದ್ದೇಶವಿರುತ್ತದೆ. ದೇಶಾಭಿಮಾನ ಇರುತ್ತದೆ. ದೇಶದ ಕಲ್ಯಾಣಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಮೋದಿ ಭವಿಷ್ಯದಲ್ಲಿ ಉದ್ಭವಿಸಬಹುದಾದ ಸಮಸ್ಯೆಗಳನ್ನು ಅರಿತು ಈಗಿನಿಂದಲೇ ಮುಂಜಾಗೃತೆಗೆ ಸಜ್ಜಾಗಿದ್ದಾರೆ. ಅಂತಾಷ್ಟ್ರೀಯ ಮಟ್ಟದಲ್ಲಿ ಮೋದಿ ಅವರ ಪ್ರಭಾವ ದೊಡ್ಡದು ಎಂಬುದಕ್ಕೆ ಹರ್ಮುಜ್ ಜಲಸಂಧಿಯಿಂದ ಭಾರತದ ತೈಲ ತುಂಬಿದ ಹಡಗುಗಳನ್ನು ಬಿಡುತ್ತಿರುವುದೇ ಸಾಕ್ಷಿ. ಹೀಗಾಗಿ ಭಾರತದಲ್ಲಿ ಇನ್ನೂ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಇಂಧನ ಬಿಕ್ಕಟ್ಟು ಎದುರಾಗಿಲ್ಲ. ಈಗಿನಿಂದಲೇ ಹಿತ-ಮಿತವಾಗಿ ಬಳಸಿದರೆ ಭವಿಷ್ಯದಲ್ಲಿ ಉಂಟಾಗಬಹುದಾದ ಗಂಡಾಂತರಿಂದ ಪಾರಾಗಬಹುದೆಂದರು.
ಬೆಲೆ ಏರಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ಸಿಗರ ಟೀಕಿಗೆ ಸಂಬಂಧಿಸಿದ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಂಸದ ಜಿಗಜಿಣಗಿ ಅವರು, ರಾಷ್ಟ್ರ ಸಂಕಷ್ಟದಲ್ಲಿದ್ದಾಗ ಇಡೀ ದೇಶದ ಜನ ಪ್ರಧಾನಿ ಮೋದಿ ಅವರ ಬೆನ್ನಿಗೆ ನಿಲ್ಲುವುದು ಕಾಂಗ್ರೆಸ್ಸಿಗರಿಗೆ ಸಹಿಸಲಾಗುತ್ತಿಲ್ಲ. ಕರೊನಾ, ನೋಟ್ ಬ್ಯಾನ್ ಸಂದರ್ಭ, ಪಾಕಿಸ್ತಾನದ ಮೇಲಿನ ದಾಳಿ...ಹೀಗೆ ಅನೇಕ ಸಂದರ್ಭಗಳಲ್ಲಿ ಜನ ಮೋದಿಯವರನ್ನು ಬೆಂಬಲಿಸಿದ್ದಾರೆ. ಕಾಂಗ್ರೆಸ್ಸಿಗರಿಗೆ ಇದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ ವೃಥಾ ಟೀಕೆಯಲ್ಲಿ ಕಾಲಹರಣ ಮಾಡುತ್ತಿದ್ದಾರೆ. ಟೀ ಶರ್ಟ್ ಧರಿಸಿ ಲೋಕಸಭೆಗೆ ಆಗಮಿಸುವ ರಾಹುಲ್ ಗಾಂಧಿಗೆ ಇನ್ನೂ ಆ ಪ್ರಬುದ್ಧತೆಯೇ ಬಂದಿಲ್ಲವೆಂದು ಲೇವಡಿ ಮಾಡಿದರು.
ಮುಖಂಡ ಪಾಪುಸಿಂಗ್ ರಜಪೂತ, ವಿಜಯ ಜೋಷಿ ಇದ್ದರು.