ಸಿಂದಗಿ ನಗರದಲ್ಲಿ ಶಾಸಕ ಅಶೋಕ ಮನಗೂಳಿ ಅವರು ಕಟ್ಟಡ ಕಾರ್ಮಿಕರಿಗೆ ಟೂಲ್ ಕಿಟ್ ವಿತರಿಸಿದರು. ಫಾ.ಸಂತೋಷ, ಅಶೋಕ ಕೊಳ್ಳಾರಿ, ಮಲ್ಲು ಬಗಲಿ ಸೇರಿ ಕಟ್ಟಡ ಕಾರ್ಮಿಕರಿದ್ದರು.
- ಶಾಸಕ ಅಶೋಕ ಮನಗೂಳಿ ಭರವಸೆ
- ಕಟ್ಟಡ ಕಾರ್ಮಿಕರಿಗೆ ಟೂಲ್ ಕಿಟ್ ವಿತರಣೆ
ಸಿಂದಗಿ: ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಮುಖ್ಯಮಂತ್ರಿಗಳು ಕಾರ್ಮಿಕರ ಮಕ್ಕಳಿಗೆ ಜಿಲ್ಲೆಗೊಂದು ವಸತಿ ಶಾಲೆ ತೆರೆಯುವುದಾಗಿ ಮಂಡಿಸಿದ್ದು, ಈ ದಿಸೆಯಲ್ಲಿ ಇಲಾಖೆ ಸಚಿವರಿಗೆ ಮನವಿ ಮಾಡಿದ್ದೆ, ಆದರೆ, ಮೊದಲ ಹಂತದಲ್ಲಿ ಕ್ಷೇತ್ರಕ್ಕೆ ವಸತಿ ಶಾಲೆ ಮಂಜೂರಾಗಿಲ್ಲವಾದರೂ ಮುಂದಿನ ಜನವರಿಯಲ್ಲಿ ಮಂಜೂರಿ ಮಾಡಿಸಿಕೊಂಡು ಬರುವುದಾಗಿ ಶಾಸಕ ಅಶೋಕ ಮನಗೂಳಿ ಭರವಸೆ ನೀಡಿದರು.
ಪಟ್ಟಣದ ಬಸವ ನಗರದ ಸಂಗಮ ಸಮಗ್ರ ಗ್ರಾಮೀಣಾಭಿವೃದ್ಧಿ ಸಂಸ್ಥೆಯಲ್ಲಿ ಕಾರ್ಮಿಕ ಇಲಾಖೆ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಗುರುವಾರ ಟೂಲ್ ಕಿಟ್ ವಿತರಿಸಿ ಅವರು ಮಾತನಾಡಿದರು.
ಕಟ್ಟಡ ಕಾರ್ಮಿಕ ಮಕ್ಕಳಿಗಾಗಿ ಸರ್ಕಾರ 32 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಎಲ್‌ಕೆಜಿ-ಟು-ಪಿಯುಸಿ ಹಂತದವರೆಗಿನ ವಸತಿಯುತ ಶಾಲೆಯು ಜಿಲ್ಲೆಗೊಂದು ತೆರೆಯಲು ಅವಕಾಶವಿತ್ತು. ಅದು ಇಂಡಿ ತಾಲೂಕಿನ ಭತಗುಣಕಿ ಗ್ರಾಮದ ಬಳಿಯ ಜಾಗ ಆಯ್ಕೆಯಾಗಿದ್ದರೂ, ಸಿಂದಗಿ, ಆಲಮೇಲ, ದೇವರಹಿಪ್ಪರಗಿ ತಾಲೂಕುಗಳಲ್ಲಿ ಅಂದಾಜು 30 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಇದ್ದು, ಅವರ ಮಕ್ಕಳಿಗೂ ವಸತಿಯುತ ಶಾಲೆ ತೆರೆಯಲು ಕಾರ್ಮಿಕ ಇಲಾಖೆ ಸಚಿವರಿಗೆ ಆಲಮೇಲ-ಹೂವಿನಹಳ್ಳಿ ಬಳಿಯ ಕಂದಾಯ ಇಲಾಖೆಗೆ ಸೇರಿ ಒಟ್ಟು 9 ಎಕರೆ ಜಾಗವಿದ್ದು, ಅದರಲ್ಲಿ 7 ಎಕರೆ ಜಾಗವನ್ನು ಕಾರ್ಮಿಕರ ಮಕ್ಕಳ ವಸತಿ ಶಾಲೆ ಜಾಗ ಗುರುತಿಸಿ, ಅದರ ದಾಖಲುಗಳನ್ನು ನೀಡಿದೆ. ಅಲ್ಲದೆ ಜಿಲ್ಲೆಯ, ಸರ್ಕಾರದ ಕಾರ್ಮಿಕ ಇಲಾಖೆ ಅಧಿಕಾರಿಗಳೊಂದಿಗೆ ಮತ್ತೊಮ್ಮೆ ಸಭೆ ನಡೆಸಿ, ಮುಂಬರುವ ಜನವರಿಯಲ್ಲಿ ವಸತಿ ಶಾಲೆಗೆ ಮಂಜೂರಿ ಪಡೆಯುವುದಾಗಿ ಅವರು ತಿಳಿಸಿದರು.
ಕಟ್ಟಡ ಕಾರ್ಮಿಕರ ಸಮಸ್ಯೆಗಳು ಗಮನಕ್ಕೂ ಬಂದಿದ್ದು, ಕಾರ್ಮಿಕರ ಕಾರ್ಡ್ ನೋಂದಣಿ ಮತ್ತು ಒಂದು ವರ್ಷದ ನವೀಕರಣದ ಬಗ್ಗೆ ಕಾರ್ಮಿಕರು ಅಸಮಾಧಾನ ತೋರಿಸಿ, ಕಾರ್ಡ್ ನವೀಕರಣಕ್ಕೆ ಸಂಬಂಧಿಸಿದಂತೆ ಒಂದು ವರ್ಷದ ಅವಧಿ ಮೂರು ವರ್ಷಕ್ಕೆ ಹೆಚ್ಚಿಸುವಂತೆ ಇಲಾಖೆ ಸಚಿವರಿಗೆ ಪತ್ರ ಮೂಲಕ ಮನವಿ ಮಾಡುವುದಾಗಿ ತಿಳಿಸಿ, ಮಾರ್ಚ್ವರೆಗೂ ಅವಕಾಶ ಒದಗಿಸಲು ಕಾರ್ಮಿಕರಿಗೆ ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಕೆಲ ಕಟ್ಟಡ ಕಾರ್ಮಿಕರು ಇಲಾಖೆ ನೀತಿ, ನಿಯಮಗಳಿಂದ ಇಂದಿಗೂ ತೊಂದರೆ ಅನುಭವಿಸುತ್ತಿದ್ದು, ಕಾರ್ಡ್ ನೋಂದಣಿಗೆ ಕಟ್ಟಡ ಕೆಲಸಗಾರರ ಗುರುತಿಸಿ, ಕೆಲಸದ ಸ್ಥಳದಲ್ಲೇ ಅವರ ಹಾಗೂ ಇತರ ನೈಜ ಕಾರ್ಮಿಕರ ಮಾಹಿತಿ ಪಡೆಯಬೇಕು. ದಾಖಲು ಪತ್ರಗಳಿಗಾಗಿ ಅವಕಾಶ ಕಲ್ಪಿಸಬೇಕೆಂದು ಇಲಾಖೆ ಅಧಿಕಾರಿಗಳ ಬಳಿ ಮನವಿ ಮಾಡಿದರು.
ಕಾರ್ಮಿಕ ಸಂಘದ ಪ್ರಕಾಶ ರಜಪೂತ, ತಾಲೂಕು ಬ್ಲಾಕ್ ಕಾಂಗ್ರೆಸ್ಸ್ ಅಧ್ಯಕ್ಷ ಸುರೇಶ ಪೂಜಾರಿ, ಫಾದರ್ ಸಂತೋಷ, ಆಲಮೇಲ ತಾಲೂಕಿನ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ ಕೊಳ್ಳಾರಿ, ಸದಸ್ಯೆ ಸುನಂದಾ ಯಂಪೂರೆ, ಜಯಶ್ರೀ ಹದನೂರ, ಭೀಮು ವಾಲಿಕಾರ, ಪ್ರತಿಭಾ ಚಳ್ಳಗಿ, ತಾಲೂಕು ಕಾರ್ಮಿಕ ಇಲಾಖೆ ನಿರೀಕ್ಷಕ ಮಲ್ಲು ಬಗಲಿ ಇತರರಿದ್ದರು.