ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜ್ ಸ್ಥಾಪನೆ ಹೋರಾಟ ಸಂದರ್ಭದಲ್ಲಿ ಬಂಧನಕ್ಕೊಳಗಾಗಿದ್ದ ಹೋರಾಟಗಾರರು ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾದ ಸಂದರ್ಭದಲ್ಲಿ ಅವರನ್ನು ಶಾಲು ಹೊದಿಸಿ, ಹೂಮಾಲೆ ಹಾಕಿ, ಸಿಹಿ ತಿನ್ನಿಸಿ ಸಂಭ್ರಮಿಸಲಾಯಿತು. ಹೋರಾಟಗಾರರಾದ ಪೂಜ್ಯ ಸಂಗನಬಸವೇಶ್ವರ ಸ್ವಾಮೀಜಿ, ಭಿ. ಭಗವಾನರೆಡ್ಡಿ, ಸಿದ್ರಾಮ ಹಳ್ಳೂರ, ಅರವಿಂದ ಕುಲಕರ್ಣಿ, ಭೋಗೇಶ ಸೊಲ್ಲಾಪೂರ, ಅನೀಲ ಹೊಸಮನಿ ಇತರರಿದ್ದಾರೆ. 
ವಿಜಯಪುರ

ಬಂಧಿತ ಹೋರಾಟಗಾರರ ಬಿಡುಗಡೆ..!

ಪ್ರಮುಖ ಮುಖ್ಯಾಂಶಗಳು

  • ನಗರದೆಲ್ಲೆಡೆ ಮೆರವಣಿಗೆ
  • ಹೂಮಾಲೆ ಹಾಕಿ, ಸಿಹಿ ತಿನ್ನಿಸಿ ಸಂಭ್ರಮ
  • ವೈದ್ಯಕೀಯ ಕಾಲೇಜ್ ಹೋರಾಟ ಗೆದ್ದಿತು ಉದ್ಘೋಷ
ವಿಜಯಪುರ: ಗೆದ್ದಿತು ಗೆದ್ದಿತು ಹೋರಾಟ ಗೆದ್ದಿತು, ಸಿಕ್ಕಿತು ಸಿಕ್ಕಿತು ನ್ಯಾಯಕ್ಕೆ ಜಯ ಸಿಕ್ಕಿತು, ಸರ್ಕಾರ ಪಿಪಿಪಿ ಮಾದರಿ ಕೈ ಬಿಟ್ಟಿತು, ಹೋರಾಟಕ್ಕೆ ಬೆಲೆ ಸಿಕ್ಕಿತು..! ದರ್ಗಾ ಜೈಲು ಖ್ಯಾತಿಯ ಜಿಲ್ಲಾ ಕೇಂದ್ರ ಕಾರಾಗೃಹದ ಎದುರು ಬುಧವಾರ ಸಂಜೆ ಮೊಳಗಿದ ಘೋಷಣೆಗಳಿವು.
ಸರ್ಕಾರಿ ವೈದ್ಯಕೀಯ ಕಾಲೇಜ್ ಸ್ಥಾಪನೆಗೆ ಆಗ್ರಹಿಸಿ ಮತ್ತು ಪಿಪಿಪಿ ಮಾದರಿ ವಿರೋಧಿಸಿ ಹೋರಾಟ ನಡೆಸುತ್ತಿದ್ದ 106 ದಿನಗಳ ಕಾಲ ನಡೆದ ಹೋರಾಟದ ಮುಂದುವರಿದ ಭಾಗವಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲರ ಮನೆ ಎದುರು ಧರಣಿ ನಡೆಸಲು ಮುಂದಾದಾಗ ಉಂಟಾದ ಗಲಾಟೆಯಲ್ಲಿ ಜೈಲು ಪಾಲಾಗಿದ್ದ ಆರು ಜನ ಹೋರಾಟಗಾರರು ಜಾಮೀನಿನ ಮೇಲೆ ಬಿಡುಗಡೆಗೊಳ್ಳುತ್ತಿದ್ದ ವಿವಿಧ ಸಂಘಟನೆಗಳು, ಸಾಮಾಜಿಕ ಹೋರಾಟಗಾರರ ಉದ್ಘೋಷ ಮುಗಿಲು ಮುಟ್ಟಿತು.
ಹೋರಾಟಗಾರರು ಜೈಲಿನಿಂದ ಬಿಡುಗಡೆಗೊಳ್ಳುತ್ತಿದ್ದಂತೆ ಶಾಲು ಹೊದಿಸಿ, ಹೂಮಾಲೆ ಹಾಕಿ, ಸಿಹಿ ತಿನ್ನಿಸಿ ಸಂಭ್ರಮಿಸಲಾಯಿತು. ಹೋರಾಟಗಾರರಾದ ಪೂಜ್ಯ ಸಂಗನಬಸವೇಶ್ವರ ಸ್ವಾಮೀಜಿ, ಭಿ. ಭಗವಾನರೆಡ್ಡಿ, ಸಿದ್ರಾಮ ಹಳ್ಳೂರ, ಅರವಿಂದ ಕುಲಕರ್ಣಿ, ಭೋಗೇಶ ಸೊಲ್ಲಾಪೂರ, ಅನೀಲ ಹೊಸಮನಿ ಅವರು ಗೆಲುವಿನ ನಗೆ ಬೀರುತ್ತಲೇ ಹೊರಬಂದು ಒಡನಾಡಿ ಹೋರಾಟಗಾರರನ್ನು ತಬ್ಬಿಕೊಂಡರು.
ಹೋರಾಟಗಾರರ ಬರುವಿಕೆಗಾಗಿ ಗಂಟೆಗಟ್ಟಲೆ ಕಾದು ನಿಂತಿದ್ದ ಕುಟುಂಬಸ್ಥರ ಕಣ್ಣಾಲೆಯಲ್ಲಿ ಆನಂದ ಭಾಷ್ಪ ಸುರಿಯಿತು. ಬಳಿಕ ಹೋರಾಟಕ್ಕೆ ಜಯವಾಗಲಿ ಎಂದು ಘೋಷಣೆ ಮೊಳಗಿಸಿದ್ದು ಹೋರಾಟದ ಅರ್ಥಪೂರ್ಣತೆ, ಅಭಿಮಾನಕ್ಕೆ ಕೈಗನ್ನಡಿಯಾಗಿತ್ತು.
ಪ್ರಕರಣದ ಹಿನ್ನೆಲೆ
ಸರ್ಕಾರಿ ವೈದ್ಯಕೀಯ ಕಾಲೇಜ್ ಸ್ಥಾಪನೆ ಹೋರಾಟ ಸಮಿತಿ ಹೆಸರಲ್ಲಿ ವಿವಿಧ ಸಂಘಟನೆಗಳ ಪ್ರಮುಖರು ಡಾ. ಬಿ.ಆರ್. ಅಂಬೇಡ್ಕರ ವೃತ್ತದಲ್ಲಿ ಧರಣಿ ಆರಂಭಿಸಿದ್ದರು. ರಂಗೋಲಿ ಚಳವಳಿ, ರಕ್ತದಲ್ಲಿ ಪತ್ರ, ಪಂಜಿನ ಮೆರವಣಿಗೆ ಹೀಗೆ ವಿವಿಧ ಆಯಾಮಗಳಲ್ಲಿ ನಡೆದ ಹೋರಾಟ ಅಂತಿಮವಾಗಿ ಅಹೋರಾತ್ರಿ ಧರಣಿವರೆಗೆ ತಲುಪಿತ್ತು.106 ದಿನಗಳಾದರೂ ಸರ್ಕಾರ ಸ್ಪಂದಿಸದ ಹಿನ್ನೆಲೆ `ಮಂತ್ರಿಗಳ ಮನೆ ಎದುರು ಧರಣಿ' ಘೋಷ ವಾಕ್ಯದಡಿ ಮೊದಲ ಹಂತದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹಾಗೂ ಎರಡನೇ ಹಂತದಲ್ಲಿ ಸಚಿವ ಶಿವಾನಂದ ಪಾಟೀಲರ ಮನೆ ಎದುರು ಧರಣಿ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿತ್ತು. ಆ ಪ್ರಕಾರ ಜ. 1ರಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲರ ಮನೆ ಎದುರು ಧರಣಿಗೆ ಮುಂದಾದಾಗ ಮಫ್ತಿಯಲ್ಲಿದ್ದ ಪೊಲೀಸರು ಹೋರಾಟಗಾರರನ್ನು ತಡೆದರು. ಈ ವೇಳೆ ಪೂಜ್ಯ ಸಂಗನಬಸವೇಶ್ವರ ಸ್ವಾಮೀಜಿಯನ್ನು ತಳ್ಳಾಡಿದ್ದಲ್ಲದೇ, ಮೊಬೈಲ್ ಕಸಿದುಕೊಳ್ಳಲಾಗಿತ್ತು. ರೊಚ್ಚಿಗೆದ್ದ ಸ್ವಾಮೀಜಿ ಮಫ್ತಿಯಲ್ಲಿದ್ದ ಪಿಎಸ್‌ಐಗೆ ಕಪಾಳಮೋಕ್ಷ ಮಾಡಿದ್ದರು. ಈ ಕುರಿತು ಪಿಎಸ್‌ಐ ಸೀತಾರಾಮ ಲಮಾಣಿ ಎಫ್ಐಆರ್ ದಾಖಲಿಸಿದ್ದರು. ಜೀವ ಬೆದರಿಕೆ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಹಾಗೂ ಕೊಲೆಗೆ ಯತ್ನ ನಡೆಸಿದ್ದಾರೆಂದು ಪೂಜ್ಯ ಸಂಗನಬಸವೇಶ್ವರ ಸ್ವಾಮೀಜಿ, ಭಿ. ಭಗವಾನರೆಡ್ಡಿ, ಸಿದ್ರಾಮ ಹಳ್ಳೂರ, ಅರವಿಂದ ಕುಲಕರ್ಣಿ, ಭೋಗೇಶ ಸೊಲ್ಲಾಪೂರ, ಅನೀಲ ಹೊಸಮನಿ ಮೇಲೆ ಪ್ರಕರಣ ದಾಖಲಿಸಲಾಗಿತ್ತು. ಹೀಗಾಗಿ ಹೋರಾಟಗಾರರನ್ನು ಬಂಧಿಸಲಾಗಿತ್ತು.

ನಮ್ಮ ಹೋರಾಟ ಕೇವಲ ವೈದ್ಯಕೀಯ ಕಾಲೇಜ್‌ಗೆ ಮಾತ್ರ ಸೀಮಿತವಾಗಿರಲಿಲ್ಲ. ಒಟ್ಟಾರೆ ಸರ್ಕಾರಿ ವ್ಯವಸ್ಥೆಯ ಉಳಿವಿಗಾಗಿ ಹೋರಾಟ ಕೈಗೊಳ್ಳಲಾಗಿತ್ತು. ಈ ಹೋರಾಟಕ್ಕೆ ಅನೇಕ ಮಠಾಧೀಶರು, ವಿವಿಧ ಪಕ್ಷದವರು, ಮಾಧ್ಯಮಗಳು ಬೆಂಬಲ ಸೂಚಿಸಿದ್ದವು. ಸಚಿವ ಶಿವಾನಂದ ಪಾಟೀಲರು ಸಹ ಜೈಲಿಗೆ ಬಂದು ಭೇಟಿಯಾಗಿ ಬರುವ ಬಜೆಟ್‌ನಲ್ಲಿ ಮೆಡಿಕಲ್ ಕಾಲೇಜ್ ಘೋಷಣೆ ಮಾಡುವ ಭರವಸೆ ನೀಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಕೂಡ ಸ್ಪಂದಿಸಿದ್ದಾರೆ. ಹೋರಾಟದಲ್ಲಿ ಎಲ್ಲ ಪ್ರಜ್ಞಾವಂತರ ಪಾತ್ರವಿದೆ. ಈ ಜಯ ಅವರೆಲ್ಲರಿಗೂ ಸಲ್ಲಬೇಕು.

"

ಸಿಎಂ ಘೋಷಣೆ

ಸ್ವಾಮೀಜಿ ಸೇರಿ ಆರು ಜನರ ಬಂಧನಕ್ಕೆ ಸಂಬಂಧಿಸಿದಂತೆ ರಾಜ್ಯಾದ್ಯಂತ ಹೋರಾಟ ನಡೆದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು. ಸರ್ಕಾರದ ನಡೆಗೆ ಖಂಡನೆ ವ್ಯಕ್ತವಾಯಿತು. ಬಳಿಕ ಸಿಎಂ ಸಿದ್ದರಾಮಯ್ಯ ಅವರು ಹಾವೇರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ವಿಜಯಪುರದಲ್ಲಿ ಸರ್ಕಾರದಿಂದಲೇ ವೈದ್ಯಕೀಯ ಕಾಲೇಜ್ ಸ್ಥಾಪಿಸುವುದಾಗಿ ಘೋಷಿಸಿದರು. ನಂತರ ವಿಜಯಪುರದಲ್ಲಿ ನಡೆದ ಕಿತ್ತೂರು ರಾಣಿ ಚನ್ನಮ್ಮ ಪ್ರತಿಮೆ, ವೆಲೊಡ್ರೋಮ್ ಲೋಕಾರ್ಪಣೆ ಹಾಗೂ ಜಿಲ್ಲಾಡಳಿತದ ಭೂಮಿ ಪೂಜೆ ಸಮಾರಂಭದಲ್ಲಿ ಕೂಡ ಪಿಪಿಪಿ ಮಾದರಿ ಕೈ ಬಿಟ್ಟು ಸರ್ಕಾರದಿಂದಲೇ ವೈದ್ಯಕೀಯ ಕಾಲೇಜ್ ಸ್ಥಾಪಿಸುವುದಾಗಿ ಘೋಷಿಸಿದರು. ಅದೇ ದಿನ ವಿಜಯೋತ್ಸವ ಆಚರಿಸಲಾಯಿತಾದರೂ ಆರು ಜನರ ಬಂಧನ ಹೋರಾಟಗಾರರ ಸಂಭ್ರಮ ಕಸಿದುಕೊಂಡಿತು. ಇದೀಗ ಜಾಮೀನು ಸಿಕ್ಕ ಹಿನ್ನೆಲೆ ಹೋರಾಟಗಾರರನ್ನು ಬಿಡುಗೊಳಿಸುತ್ತಿದ್ದಂತೆ ಮತ್ತೊಮ್ಮೆ ವಿಜಯೋತ್ಸವ ಆಚರಿಸಿದರು. ಹೋರಾಟಗಾರರನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಕರೆತರಲಾಯಿತು. ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.