ವಿಜಯಪುರದ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ವುಮನ್ ಮೀಡಿಯಾ ಕ್ಲಬ್‌ನ್ನು ಪತ್ರಕರ್ತ ಸಂತೋಷ ಚಿನಗುಡಿ ಉದ್ಘಾಟಿಸಿದರು. ಓಂಕಾರ ಕಾಕಡೆ, ತಹಮೀನಾ ಕೋಲಾರ, ಸಂದೀಪ ಮತ್ತಿತರರಿದ್ದಾರೆ. 
ವಿಜಯಪುರ

ಪತ್ರಿಕೆ ಓದಿ ಪರಿಪೂರ್ಣ ಜ್ಞಾನ ಪಡೆಯಿರಿ

ಮಾರುತಿ ತಳ್ಳಳ್ಳಿ

ಪ್ರಮುಖ ಮುಖ್ಯಾಂಶಗಳು

  • ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ
  • ವುಮನ್ ಮೀಡಿಯಾ ಕ್ಲಬ್ ಉದ್ಘಾಟಿಸಿ
ವಿಜಯಪುರ: ಪತ್ರಕರ್ತನಿಗೆ ಜ್ಞಾನ ಮತ್ತು ಪರಿಜ್ಞಾನ ಇದ್ದಾಗ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ ಎಂದು ಪತ್ರಕರ್ತ ಸಂತೋಷ ಚಿನಗುಡಿ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವುಮನ್ ಮೀಡಿಯಾ ಕ್ಲಬ್ ಉದ್ಘಾಟಿಸಿ ಅವರು ಮಾತನಾಡಿದರು.
ಪತ್ರಿಕೋದ್ಯಮವು ಕೇವಲ ತರಗತಿ ಕೋಣೆಗೆ ಸೀಮಿತವಾಗಿರದೆ, ವಿದ್ಯಾರ್ಥಿಗಳು ಪ್ರಾಯೋಗಿಕ ಜ್ಞಾನ ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ. ಪತ್ರಿಕೆಗಳನ್ನು ಕೇವಲ ನೋಡದೆ, ಅವನ್ನು ನಿಯಮಿತವಾಗಿ ಓದಿದಾಗ ಮಾತ್ರ ಪರಿಪೂರ್ಣ ಜ್ಞಾನ ಪಡೆಯಲು ಸಾಧ್ಯ. ಸುಳ್ಳು ಸುದ್ದಿಗಳ ಬಗ್ಗೆ ಎಚ್ಚರಿಕೆ ವಹಿಸುವ ಜತೆಗೆ ಸಮಗ್ರವಾಗಿ ಪರಿಶೀಲಿಸಿ ಸತ್ಯಾಸತ್ಯತೆ ತಿಳಿಯಲು ಪ್ರತಿಯೊಬ್ಬರು ಮುಂದಾಗಬೇಕು ಎಂದು ಸಲಹೆ ನೀಡಿದರು.
ವಿಭಾಗದ ಸಹಾಯಕ ಪ್ರಾಧ್ಯಾಪಕಿ ತಹಮೀನಾ ಕೋಲಾರ ಮಾತನಾಡಿ, ವುಮನ್ ಮೀಡಿಯಾ ಕ್ಲಬ್‌ನಲ್ಲಿ ವಿದ್ಯಾರ್ಥಿನಿಯರೇ ಕಾರ್ಯನಿರ್ವಹಿಸುತ್ತಿದ್ದು, ಆ ಮೂಲಕ ವಿದ್ಯಾರ್ಥಿನಿಯರಲ್ಲಿ ನಾಯಕತ್ವ ಗುಣಗಳು ಬೆಳೆಯುವ ಜತೆಗೆ ಹೆಚ್ಚಿನ ಜ್ಞಾನ ಪಡೆಯಲು ಸಹಾಯಕವಾಗುತ್ತದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಓಂಕಾರ ಕಾಕಡೆ ಮಾತನಾಡಿ, ಪತ್ರಕರ್ತರು ಒಂದು ಸುದ್ದಿಯನ್ನು ಒಂದೇ ದೃಷ್ಟಿಕೋನದಿಂದ ನೋಡುವುದು ಬಿಟ್ಟು, ವಿವಿಧ ಆಯಾಮಗಳಿಂದ ವಿಶ್ಲೇಷಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಅಂತಹ ದೃಷ್ಟಿಕೋನದಿಂದ ಕೆಲಸ ಮಾಡಿದರೆ ಯಶಸ್ವಿ ಪತ್ರಕರ್ತರಾಗಲು ಸಾಧ್ಯವಿದ್ದು, ಒಬ್ಬ ಪತ್ರಕರ್ತನ ವರದಿ ಸಮಾಜ ಬದಲಿಸುವ ಶಕ್ತಿ ಹೊಂದಿದೆ ಎಂದು ಹೇಳಿದರು.
ಸಹಾಯಕ ಪ್ರಾಧ್ಯಾಪಕ ಸಂದೀಪ ಮಾತನಾಡಿದರು. ಪತ್ರಕರ್ತ ಪ್ರಹ್ಲಾದ ಮತ್ತಿತರಿದ್ದರು.
ಜ್ಯೋತಿ ಎಸ್. ಪ್ರಾಸ್ತಾವಿಕ ನುಡಿಗಳನ್ನಾಡಿದರು. ಬಸಮ್ಮ ಹಿರೂರ ಸ್ವಾಗತಿಸಿದರು. ಅನ್ನಪೂರ್ಣ ಮುರಕುಂದ ಪರಿಚಯಿಸಿದರು. ವಿದ್ಯಾಶ್ರೀ ಎಂ. ನಿರೂಪಿಸಿದರು. ಮೇಘಪುಷ್ಪ ವಂದಿಸಿದರು.