ವಿಜಯಪುರ ನಗರದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಗಣ್ಯರು ‘ರಾಯಣ್ಣ ಜಾತ್ರೆ’ಯ ಪೋಸ್ಟರ್ ಬಿಡುಗಡೆಗೊಳಿಸಿದರು. ಮಾಳಿಂಗರಾಯ ಮಹಾರಾಜರು, ಅಮಗೊಂಡ ಒಡೆಯರ, ಪ್ರಕಾಶ ಜಾಲಗೇರಿ ಮತ್ತಿತರರಿದ್ದಾರೆ. 
ವಿಜಯಪುರ

23ರಂದು ರಾಯಣ್ಣ ಜಾತ್ರೆ ಆಯೋಜನೆ

ಪ್ರಮುಖ ಮುಖ್ಯಾಂಶಗಳು

  • ರಾಯಣ್ಣನ ಜಾತ್ರೆಯಲ್ಲಿ ರಾಜ್ಯದ ವಿವಿಧ ಮಠಾಧೀಶರು ಭಾಗಿ
  • ದರಬಾರ್ ಹೈಸ್ಕೂಲ್ ಮೈದಾನದಲ್ಲಿ ವೇದಿಕೆ ಕಾರ್ಯಕ್ರಮ

ವಿಜಯಪುರ:

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಶೌರ್ಯ, ಸಾಹಸ ಮತ್ತು ದೇಶಪ್ರೇಮದ ಗುಣಗಳನ್ನು ಯುವಕರಿಗೆ ತಿಳಿಸುವ ಜತೆಗೆ ಸಂಗೊಳ್ಳಿ ರಾಯಣ್ಣವರನ್ನು ಗೌರವಿಸುವ ನಿಟ್ಟಿನಲ್ಲಿ ನಗರದಲ್ಲಿ ಆ. 23ರಂದು ರಾಯಣ್ಣ ಜಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಹುಲಜಂತಿಯ ಮಾಳಿಂಗರಾಯ ಮಹಾರಾಜರು ಹೇಳಿದರು.

ಎಲ್ಲ ಕಡೆ ಕೇವಲ ರಾಯಣ್ಣನವರ ಜಯಂತಿ ಮಾಡುತ್ತಾರೆ. ಆದರೆ, ಈ ಬಾರಿ ವಿಜಯಪುರ ನಗರದಲ್ಲಿ ವಿಶೇಷವಾಗಿ ರಾಯಣ್ಣನ ಜಾತ್ರೆ ಮಾಡಲು ನಿರ್ಧರಿಸಲಾಗಿದೆ. ಅಂದು ಬೆಳಗ್ಗೆ 10 ಗಂಟೆಗೆ ಇಲ್ಲಿನ ಶ್ರೀ ಸಿದ್ಧೇಶ್ವರ ದೇವಸ್ಥಾನದ ಬಳಿಯಿಂದ ರಾಜ ಗಾಂಭೀರ್ಯದಿಂದ ನಿಂತಿರುವ ಬೃಹತ್ ರಾಯಣ್ಣನ ಪ್ರತಿಮೆ ಮೆರವಣಿಗೆ ನಡೆಯಲಿದ್ದು, ನಂತರ ದರಬಾರ್ ಹೈಸ್ಕೂಲ್ ಮೈದಾನದಲ್ಲಿ ವೇದಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
ರಾಯಣ್ಣ ಕೇವಲ ಹೋರಾಟಗಾರನಾಗಿರಲಿಲ್ಲ, ಶೌರ್ಯ-ಸಾಹಸ, ಪರೋಪಕಾರಿಯ ಸದ್ಗುಣ ಮೈಗೂಡಿಸಿಕೊಂಡಿದ್ದ ಮೇಧಾವಿ. ಅವರಲ್ಲಿನ ದೇಶಭಕ್ತಿಯ ಚಿಂತನೆ ಹಾಗೂ ಧೈರ್ಯವನ್ನು ಯುವ ಸಮೂಹಕ್ಕೆ ತಿಳಿಸುವ ನಿಟ್ಟಿನಲ್ಲಿ ರಾಯಣ್ಣ ಉತ್ಸವ ಸಮಿತಿ ನೇತೃತ್ವದಲ್ಲಿ ರಾಯಣ್ಣ ಜಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.
ಉತ್ಸವ ಸಮಿತಿ ಸದಸ್ಯ ಮೋಹನ ಮೇಟಿ ಮಾತನಾಡಿ, ಪಕ್ಷಾತೀತ, ಜಾತ್ಯತೀತ ಜಾತ್ರೆಯಾಗಿದೆ. ಈ ಐತಿಹಾಸಿಕ ಕಾರ್ಯಕ್ರಮಕ್ಕೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌದರಿ, ಬಿಎಂಟಿಸಿ ಉಪಾಧ್ಯಕ್ಷ ನಿಕೇತರಾಜ ಮೌರ್ಯ, ಹಾಸನ ವಿವಿ ಸಿಂಡಿಕೇಟ್ ಸದಸ್ಯ ಆನೇಕಲ್ ದೊಡ್ಡಯ್ಯ, ಧಾರವಾಡದ ವಿನೋದ ಅಸೋಟಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ ನುಗ್ಗಲಿ, ಇನ್‌ಸೈಟ್ಸ್ ಅಕಾಡೆಮಿ ಅಧ್ಯಕ್ಷ ವಿನಯಕುಮಾರ ಜಿಬಿ., ಮಾಜಿ ಜಿ.ಪಂ. ಸದಸ್ಯ ಕಾಂತೇಶ ಸೇರಿ ಹಲವು ಮುಖಂಡರು ಭಾಗವಹಿಸಿ ಮಾತನಾಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಸಮಿತಿ ಸದಸ್ಯ ರವಿ ಕಿತ್ತೂರ, ಗೊಳಸಾರದ ಅಭಿನವಪುಂಡಲಿಂಗ ಮಹಾರಾಜರು, ಮುಮ್ಮಟ್ಟಿಗುಡ್ಡದ ಅಮಗೊಂಡ ಒಡೆಯರ, ಸಂಗೊಳ್ಳಿ ರಾಯಣ್ಣ ಉತ್ಸವ ಸಮಿತಿ ಅಧ್ಯಕ್ಷ ಪ್ರಕಾಶ ಜಾಲಗೇರಿ, ರವಿ ಕಿತ್ತೂರ, ನಾಗಪ್ಪ ಶಿವೂರ, ಶ್ರೀಕಾಂತ ಸಂಗೋಗಿ, ರಾಹುಲ್ ಔರಂಗಬಾದ ಮತ್ತಿತರರಿದ್ದರು.