ವಿಜಯಪುರ ನಗರದ ಬಿಜೆಪಿ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಾಗಾರವನ್ನು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಉದ್ಘಾಟಿಸಿದರು. ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ, ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಮಾಜಿ ಶಾಸಕ ರಮೇಶ ಭೂಸನೂರ ಮತ್ತಿತರರಿದ್ದಾರೆ.
- ವಿಬಿ-ಜಿ ರಾಮ್ ಜಿಯಿಂದ ದೇಶದ ಪ್ರಗತಿ
- ಬಿಜೆಪಿ ಜಿಲ್ಲಾ ಮಟ್ಟದ ಕಾರ್ಯಾಗಾರ
- ವಿಕಸಿತ ಭಾರತದ ಸಂಕಲ್ಪಗೈದ ಕಡಾಡಿ
ವಿಜಯಪುರ: ಭ್ರಷ್ಟಾಚಾರದ ಕೂಪವಾಗಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಗೆ ಮುಕ್ತಿ ನೀಡಲಾಗಿದ್ದು, ಆ ಸ್ಥಾನದಲ್ಲಿ ವಿಕಸಿತ ಭಾರತದ ಸಂಕಲ್ಪದೊಂದಿಗೆ ‘ವಿಬಿ-ಜಿ ರಾಮ್ ಜಿ’ ಜಾರಿಗೆ ತರಲಾಗಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ಇಲ್ಲಿನ ಬಿಜೆಪಿ ಕಾರ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ವಿಬಿ-ಜಿ ರಾಮ್ ಜಿ’ ಜಿಲ್ಲಾ ಮಟ್ಟದ ಕಾರ್ಯಾಗಾರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಯುಪಿಎ ಆಡಳಿತಾವಧಿಯ ಮನರೇಗಾ ಯೋಜನೆಯು ಭ್ರಷ್ಟಾಚಾರ, ಅಸಮರ್ಪಕ ಅನುಷ್ಠಾನ ಮತ್ತು ಸುಳ್ಳು ಆಸ್ತಿ ಸೃಷ್ಟಿಯ ಕೇಂದ್ರವಾಗಿತ್ತು. ಈ ವೈಫಲ್ಯಗಳನ್ನು ಸರಿಪಡಿಸಿ, 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ಎನ್‌ಡಿಎ ಸರ್ಕಾರವು ಕ್ರಾಂತಿಕಾರಿ ‘ವಿಬಿ-ಜಿ ರಾಮ್ ಜಿ’ ಕಾಯ್ದೆಯನ್ನು ಜಾರಿಗೆ ತಂದಿದೆ ಎಂದರು.
ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ಕೇವಲ ಶೇ. 17.6 ರಷ್ಟು ವೈಯಕ್ತಿಕ ಆಸ್ತಿ ಸೃಷ್ಟಿಯಾಗಿದ್ದರೆ, ಎನ್‌ಡಿಎ ಅವಧಿಯಲ್ಲಿ ಇದು ಶೇ. 62.95 ಕ್ಕೆ ಏರಿಕೆಯಾಗಿದೆ. ಹಳೆಯ ಯೋಜನೆಯಲ್ಲಿ 290 ಕೋಟಿ ರೂ.ಗೂ ಹೆಚ್ಚು ಅಕ್ರಮಗಳು ಪತ್ತೆಯಾಗಿದ್ದವು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರವು 6.44 ಕೋಟಿಗೂ ಹೆಚ್ಚು ಆಸ್ತಿಗಳನ್ನು ಜಿಯೋ-ಟ್ಯಾಗ್ ಮಾಡುವ ಮೂಲಕ ಪಾರದರ್ಶಕತೆ ತಂದಿದೆ ಎಂದರು.
ಹೊಸ ಯೋಜನೆಯ ವೈಶಿಷ್ಟ್ಯಗಳನ್ನು ವಿವರಿಸುತ್ತಾ ಉದ್ಯೋಗ ಖಾತರಿಯನ್ನು 100 ದಿನಗಳಿಂದ 125 ದಿನಗಳಿಗೆ ಹೆಚ್ಚಿಸಲಾಗಿದೆ. ಬಿತ್ತನೆ ಮತ್ತು ಕಟಾವು ಸಂದರ್ಭದಲ್ಲಿ ರೈತರಿಗೆ ಕೃಷಿ ಕಾರ್ಮಿಕರ ಕೊರತೆಯಾಗದಂತೆ, ಯೋಜನೆಯ ಕೆಲಸಗಳನ್ನು 60 ದಿನಗಳ ಕಾಲ ಸ್ಥಗಿತಗೊಳಿಸುವ ಅಧಿಕಾರವನ್ನು ರಾಜ್ಯಗಳಿಗೆ ನೀಡಲಾಗಿದೆ. ನಕಲಿ ಉದ್ಯೋಗ ಸೃಷ್ಟಿ ತಡೆಯಲು ಬಯೋಮೆಟ್ರಿಕ್ ಹಾಜರಾತಿ ಮತ್ತು ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಅಳವಡಿಸಲಾಗಿದೆ ಎಂದು ವಿವರಿಸಿದರು.
ಚಂದ್ರಶೇಖರ ಕವಟಗಿ ಮಾತನಾಡಿ, 2005ರ ಗ್ರಾಮೀಣ ಅಗತ್ಯಗಳಿಗಿಂತ 2025ರ ಅಗತ್ಯಗಳು ಭಿನ್ನವಾಗಿವೆ. ಹಳೆಯ ಯೋಜನೆ ರಚನಾತ್ಮಕವಾಗಿ ವಿಫಲವಾಗಿತ್ತು. ಹೊಸ ಯೋಜನೆಯು ಕೇವಲ ಕೂಲಿ ನೀಡುವುದಲ್ಲದೆ, ಜಲ ಸಂರಕ್ಷಣೆ ಮತ್ತು ಗ್ರಾಮೀಣ ಮೂಲಸೌಕರ್ಯಗಳಂತಹ ಶಾಶ್ವತ ಆಸ್ತಿ ಸೃಷ್ಟಿಗೆ ಒತ್ತು ನೀಡುತ್ತದೆ ಎಂದರು.
ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ, ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಮಾಜಿ ಶಾಸಕ ರಮೇಶ ಭೂಸನೂರ, ವಿಪ ಮಾಜಿ ಸದಸ್ಯ ಅರುಣ ಶಹಾಪುರ, ಮುಖಂಡರಾದ ವಿಜುಗೌಡ ಪಾಟೀಲ, ಉಮೇಶ ಕೋಳಕೂರ, ಕಾಸುಗೌಡ ಪಾಟೀಲ, ಸಂಜೀವ ಐಹೊಳೆ, ಉಮೇಶ ಕಾರಜೋಳ, ಗೋಪಾಲ ಘಟಕಾಂಬಳೆ, ಸಾಬು ಮಾಶ್ಯಾಳ, ಸ್ವಪ್ನಾ ಕಣಮುಚನಾಳ, ರವಿಕಾಂತ ವಗ್ಗೆ, ಸುರೇಶ ಬಿರಾದಾರ, ಬಾಲರಾಜ ರೆಡ್ಡಿ ಮತ್ತಿತರರಿದ್ದರು.
ಈರಣ್ಣ ರಾವೂರ ಸ್ವಾಗತಿಸಿದರು. ಮಳುಗೌಡ ಪಾಟೀಲ ನಿರೂಪಿಸಿದರು. ಸಾಬು ಮಾಶ್ಯಾಳ ವಂದಿಸಿದರು.