ವಿಜಯಪುರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಚಿವ ಎಂ.ಬಿ. ಪಾಟೀಲರು ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಸಿದರು. ಶಾಸಕರಾದ ವಿಠಲ ಕಟಕದೊಂಡ, ರಾಜುಗೌಡ ಪಾಟೀಲ, ವಿಡಿಎ ಅಧ್ಯಕ್ಷ ಗಂಗಾಧರ ಸಂಬಣ್ಣಿ ಇತರರಿದ್ದಾರೆ.
- ಜಿಲ್ಲಾದ್ಯಂತ ಮಳೆಯ ತೀವ್ರ ಅಭಾವ
- ಖಾಸಗಿ ಬೋರ್‌ವೆಲ್ ಗುರುತಿಸಿಟ್ಟುಕೊಳ್ಳಿ
- ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ
- ಜನ-ಜಾನುವಾರುವಿಗೆ ನೀರು ಒದಗಿಸಿ
- ಸಮಸ್ಯೆಯಾಗದಂತೆ ಮುಂಜಾಗೃತೆ ವಹಿಸಿ
ವಿಜಯಪುರ: ಮಳೆಯ ಅಭಾವದಿಂದ ಜಿಲ್ಲಾದ್ಯಂತ ಜನ-ಜಾನುವಾರುವಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಿ. ಈ ನಿಟ್ಟಿನಲ್ಲಿ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಿ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಸಚಿವ ಡಾ. ಎಂ.ಬಿ. ಪಾಟೀಲ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ರಾಮೀಣ, ನಗರ, ಸ್ಥಳೀಯ ಸಂಸ್ಥೆ ಹಾಗೂ ಪಾಲಿಕೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಆಯಾ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದಂತೆ ವಿದ್ಯುತ್ ಪರಿವರ್ತಕಗಳ ಸಮಸ್ಯೆಯಿದ್ದಲ್ಲಿ ಸ್ಪೀಡ್ ಅಪ್ ಮಾಡಿ ಕುಡಿಯುವ ನೀರಿಗೆ ತಕ್ಷಣಕ್ಕೆ ವಿದ್ಯುತ್ ಪೂರೈಕೆಯಾಗುವಂತೆ ಹೆಸ್ಕಾಂ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ಖಾಸಗಿ ಬೋರ್ ವೆಲ್ ಗುರುತಿಸಿ
ಎಲ್ಲೆಲ್ಲಿ ನೀರಿನ ಸಮಸ್ಯೆ ಉಲ್ಬಣವಾಗಬಹುದೋ, ಮುಂಚಿತವಾಗಿ ಮಾಹಿತಿ ಪಡೆದು ಅಂತಹ ಸ್ಥಳದಲ್ಲಿ ಅಧಿಕಾರಿಗಳು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಅದಕ್ಕೆಂದೇ ಖಾಸಗಿ ಬೋರವೆಲ್ ಗಳನ್ನು ಗುರುತಿಸಿ, ಅತಿ ಅವಶ್ಯವಿದ್ದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಲು ಕ್ರಮ ವಹಿಸಬೇಕು. ಮಳೆ ಬರುವವರೆಗೆ ಮುಂಚಿತವಾಗಿ ಯೋಜನೆ ರೂಪಿಸಿಕೊಂಡು ಕಾರ್ಯನಿರ್ವಹಿಸಬೇಕು ಎಂದರು.
ಜುಲೈ ಎರಡನೇ ವಾರದಲ್ಲಿ ಮಳೆಯಾಗುವ ಆಶಾಭಾವನೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿಯಿದೆ. ಈವರೆಗಿನ ಮಳೆ ಕೊರತೆಯಿಂದಾಗಿ ಯಾವುದೇ ಸಮಸ್ಯೆ ಯಾಗದಂತೆ ಅಚ್ಚು-ಕಟ್ಟಾಗಿ ನೀರು ನಿರ್ವಹಣೆ ಮಾಡಬೇಕು ಎಂದರು.
ವಿಜಯಪುರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಚಿವ ಎಂ.ಬಿ. ಪಾಟೀಲರು ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಸಿದರು. ಶಾಸಕರಾದ ವಿಠಲ ಕಟಕದೊಂಡ, ರಾಜುಗೌಡ ಪಾಟೀಲ, ವಿಡಿಎ ಅಧ್ಯಕ್ಷ ಗಂಗಾಧರ ಸಂಬಣ್ಣಿ ಇತರರಿದ್ದಾರೆ. ನಿರ್ಲಕ್ಷ್ಯ ವಹಿಸಿದರೆ ಕ್ರಮ
ತಾಲೂಕು ಮಟ್ಟದಲ್ಲಿ ಆಗಾಗ ಟಾಸ್ಕ್ ಪೋರ್ಸ್ ಸಭೆ ನಡೆಸಿ ಸಮಸ್ಯೆ ಉಲ್ಬಣಗೊಳ್ಳದಂತೆ ಸ್ಥಳೀಯ ಮಟ್ಟದಲ್ಲಿ ಇತ್ಯರ್ಥಪಡಿಸಿಕೊಳ್ಳಬೇಕು. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಅಧಿಕಾರಿಗಳು ಸಮನ್ವಯತೆಯಿಂದ ಗಂಭೀರವಾಗಿ ಕಾರ್ಯನಿರ್ವಹಿಸಬೇಕು. ನಿರ್ಲಕ್ಷ್ಯ ವಹಿಸಿದರೆ ಮುಲಾಜಿಲ್ಲದೇ ಕ್ರಮ ಜರುಗಿಸಲಾಗುವುದು. ಇನ್ನೊಂದೆಡೆ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು, ಮೊಬೈಲ್ ಆನ್ ಇಟ್ಟುಕೊಂಡೇ ಅತ್ಯಂತ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದರು.
ಮಳೆಯಾಗಿ ಒಳಹರಿವು ಹೆಚ್ಚಳವಾಗುವವರೆಗೆ ಜಲಾಶಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕುಡಿಯುವ ಉದ್ಧೇಶಕ್ಕಾಗಿ ನೀರನ್ನು ಕಾಯ್ದಿರಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದ ಸಚಿವರು, ಕುಡಿಯುವ ನೀರಿಗೆ ಆದ್ಯತೆಯಾಗಿಸಿಕೊಂಡು ಅತಿ ಜಾಗೃತೆಯಿಂದ ಕಾರ್ಯ ನಿರ್ವಹಿಸಬೇಕು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಳೆಯ ಅಭಾವ
ಜಿಲ್ಲೆಯಲ್ಲಿ ವಾಡಿಕೆಗಿಂತ ಮಳೆ ಕಡಿಮೆಯಾಗಿದೆ. ಆದಾಗ್ಯೂ ಮಳೆಯಾಗುವವರೆಗೆ ಎದುರಾಗುವ ಸಮಸ್ಯೆಗಳಿಗೆ ಅಧಿಕಾರಿಗಳೆಲ್ಲರೂ ಸಜ್ಜಾಗಬೇಕು. ಮಳೆ ಅಭಾವದಿಂದಾಗಿ ಕೃಷಿ ಚಟುವಟಿಕೆಗಳ ಮೇಲೆ ಆಗುವ ಪರಿಣಾಮದ ಬಗ್ಗೆ ಗಂಭೀರವಾಗಿ ಕೆಲಸ ಮಾಡಬೇಕು ಎಂದರು.
ನಾರಾಯಣಪುರ ಹಿನ್ನೀರಿನ ಬಳಕೆ ಯೋಜನೆಯಿಂದ ಯಾವುದೇ ಕುಡಿಯುವ ನೀರಿನ ಸಮಸ್ಯೆಇರುವುದಿಲ್ಲ ಧೂಳಖೇಡದಲ್ಲಿ ಖಾಸಗಿ ಬೋರವೆಲ್, ಬಾವಿ ಜಲಮೂಲಗಳನ್ನು ಗುರುತಿಸಿಟ್ಟುಕೊಳ್ಳಬೇಕು. ಧೂಳಖೇಡ ಮತ್ತು ಆರು ಹಳ್ಳಿಗಳಿಗೆ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದರು.
ಕುಡಿಯುವ ನೀರು ಪೂರೈಕೆ
ಇಂಡಿಯಲ್ಲಿ ಅಲ್ಲಿನ ನಗರಸಭೆ ಅಧಿಕಾರಿಗಳು ಸಂದರ್ಭ ಅವಲೋಕಿಸಿ ಯಾವುದೇ ಸಮಸ್ಯೆಯಾಗದಂತೆ ಅಧಿಕಾರಿಗಳು ಸಮನ್ವಯ ಸಾಧಿಸಿ ನಕ್ರಮ ಕೈಗೊಳ್ಳಬೇಕು. ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಕುಡಿಯುವ ನೀರಿನ ಸ್ಥಿತಿಗತಿ ಕುರಿತು ಪರಿಶೀಲನೆ ನಡೆಸಿದರು. ಬಹುಹಳ್ಳಿ ಕುಡಿಯುವ ನೀರಿನ ವ್ಯವಸ್ಥೆ ಜಿಲ್ಲೆಯಲ್ಲಿ ಅನುಷ್ಠಾನಗೊಳ್ಳುತ್ತಿದೆ. ಐಬಿಸಿ 11 ಬಹುಹಳ್ಳಿ ಕುಡಿಯುವ ನೀರಿನ ಯೋಜನೆ ಇದ್ದು, ಹೊರ್ತಿ ಭಾಗದಲ್ಲಿ ಜುಲೈ 15ರವರೆಗೆ ಸಮಸ್ಯೆ ಯಾಗುವುದಿಲ್ಲ.
ನೀರು ಪೋಲಾಗದಂತೆ ನೋಡಿಕೊಳ್ಳಬೇಕು. ಇಂಚಗೇರಿ, ಹೊರ್ತಿ ಭಾಗದಲ್ಲಿ ಬಲು ಎಚ್ಚರಿಕೆಯಿಂದ ನೀರಿನ ಸಮನ್ವಯತೆ ಕಾಯ್ದುಕೊಂಡು ಜುಲೈ 15ರವರೆಗೆ ನೀರು ಸದ್ಬಳಕೆಯಾಗುವ ನಿಟ್ಟಿನಲ್ಲಿ ನೀರು ಕಾಯ್ದುಕೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಸಚಿವರು ಕಟ್ಟು-ನಿಟ್ಟಿನ ಸೂಚನೆ ನೀಡಿದರು.
ಕೆರೆಗಳ ಸ್ಥಿತಿಗತಿ
ಲೋಣಿ ಕೆಬಿ ಹಾಗೂ ಬಳಗಾನೂರ ಕೆರೆ ತುಂಬಿವೆ. ವಿಜಯಪುರ ನಗರದಲ್ಲಿ ಭೂತನಾಳ ಕೆರೆಯಿಂದ ಐದು ವಾರ್ಡ್‌ಗೆ ನೀರಿನ ತಾಪತ್ರಯವಿಲ್ಲ. ತಾಜಬಾವಡಿ ಪುನಶ್ಚೇತನಗೊಳಿಸಿದ್ದು ನೀರಿನ ಸದ್ಭಳಕೆಯಾಗಬೇಕು. ತಾಜ್‌ಬಾವಡಿಗೆ ಯುಜಿಡಿ ನೀರು ಸೇರ್ಪಡೆಯಾಗದಂತೆ ಯೋಜನೆ ಸಿದ್ಧಪಡಿಸಿಕೊಂಡು ಕಾರ್ಯನಿರ್ವಹಿಸಲಾಗುತ್ತಿದೆ ಜಿಲ್ಲಾಧಿಕಾರಿ ಆನಂದ ಕೆ. ಅವರು ಸಚಿವರಿಗೆ ವಿವರಣೆ ನೀಡಿದರು.
ನಗರದ ಎಲ್ಲ ವಾರ್ಡ್‌ಗಳಿಗೆ ಸಮರ್ಪಕ ನೀರು ಒದಗಿಸಬೇಕು. ಈ ನಿಟ್ಟಿನಲ್ಲಿ ತಾಜ್‌ಬಾವಡಿ ನೀರು ಬಳಸಲು ಅಧಿಕಾರಿಗಳು ಕ್ರಿಯಾಶೀಲತೆಯಿಂದ ಕಾರ್ಯ ನಿರ್ವಹಿಸಬೇಕು. ನಗರದಲ್ಲೂ ಖಾಸಗಿ ಬೋರವೆಲ್ ಗುರುತಿಸಿ ಗರಿಷ್ಠ ನೀರು ಪರೀಕ್ಷಿಸಿ, ಖಾಸಗಿ ಬೋರವೆಲ್ ವಾಟರ್ ಮ್ಯಾನೆಜಮೆಂಟ್ ಕೃಷ್ಣಾ ನದಿಯಿಂದ ಸರಬರಾಜಾಗುವ ನೀರನ್ನು ಕುಡಿಯುವ ನೀರಿಗಾಗಿ ಬಳಸಿ, ಉಳಿದಂತೆ ಬಾವಡಿ ಹಾಗೂ ಖಾಸಗಿ ಬೋರವೆಲ್ ಗುರುತಿಸಿಟ್ಟುಕೊಳ್ಳಬೇಕು ಎಂದರು.
ಬಿತ್ತನೆ ಪ್ರಮಾಣ ಕುಂಠಿತ
2026-27ನೇ ಸಾಲಿನ ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯ ಪ್ರಗತಿಯಲ್ಲಿದ್ದು, ಜಿಲ್ಲಾದ್ಯಂತ ಒಟ್ಟು ಶೇ.18.20 ರಷ್ಟು ಹೆಕ್ಟೆರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಜಿಲ್ಲೆಯ ಒಟ್ಟು 13 ತಾಲೂಕುಗಳಲ್ಲಿ ಈ ಬಾರಿ ಒಟ್ಟು 7,75,536 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದ್ದು, ಇದರಲ್ಲಿ ಸದ್ಯ 1,41,138 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ ಎಂದು ಅಧಿಕಾರಿಗಳು ಸಚಿವರಿಗೆ ವಿವರಿಸಿದರು.
ಮೇವಿನ ಲಭ್ಯತೆ ಬಗ್ಗೆ ಅಂತಾರಾಜ್ಯ ಮೇವು ಸರಬರಾಜಾಗದಂತೆ ಚೆಕ್ ಪೋಸ್ಟ್ ಸ್ಥಾಪಿಸಿ, ಮುಂದಿನ 27 ವಾರಕ್ಕೆ ಸಾಕಾಗುವಷ್ಟು ಮೇವಿನ ಲಭ್ಯತೆ ಇಟ್ಟುಕೊಳ್ಳಬೇಕು ಎಂದು ಸಚಿವರು ಸೂಚಿಸಿದರು.
ಮೇವು ಬೆಳೆಯುವವರಿಗೆ ಅನುಕೂಲಕ್ಕಾಗಿ ಮಿನಿ ಕಿಟ್ಸ್ ಒದಗಿಸಿ, ವರದಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒ ಅವರಿಗೆ ಸಚಿವರು ಸೂಚಿಸಿದರು. ಬಿಳಿಜೋಳ , ಡ್ರೈ ಗ್ರೇಪ್ಸ್, ಗ್ರೇಪ್ಸ್ ಎರಡಕ್ಕೂ ಜಿಐ ಟ್ಯಾಗ್ ಪಡೆದುಕೊಳ್ಳುವ ಪ್ರಕ್ರಿಯೆಯನ್ನು ಅಧಿಕಾರಿಗಳು ಆರಂಭಿಸಬೇಕು ಎಂದರು.
ಶಾಸಕರಾದ ವಿಠಲ ಕಟಕದೊಂಡ, ರಾಜುಗೌಡ ಪಾಟೀಲ, ವಿಡಿಎ ಅಧ್ಯಕ್ಷ ಗಂಗಾಧರ ಸಂಬಣ್ಣಿ, ಜಿಲ್ಲಾಧಿಕಾರಿ ಡಾ. ಆನಂದ ಕೆ, ಜಿಪಂ ಸಿಇಒ ರಿಷಿ ಆನಂದ, ಎಸ್‌ಪಿ ಲಕ್ಷ್ಮಣ ನಿಂಬರಗಿ ಇತರರಿದ್ದರು.