ಚಡಚಣ ಎಸ್‌ಬಿಐ ಬ್ಯಾಂಕ್ ದರೋಡೆ ಪ್ರಕರಣದಲ್ಲಿ ಚಿನ್ನ ಕಳೆದುಕೊಂಡ ಗ್ರಾಹಕರು ಪ್ರತಿಭಟನೆ ನಡೆಸಿದರು. ವಿಕಾಸ ಭಗೋತ್ರಾ, ಆನಂದ ವಾಲಿ, ಶಿವಕುಮಾರ, ವೆಂಕಟೇಶ ರಾಜಪೂತ ಮತ್ತಿತರರಿದ್ದರು. 
ವಿಜಯಪುರ

ಎಸ್‌ಬಿಐಗೆ ಬೀಗ ಹಾಕಿ ಪ್ರತಿಭಟನೆ

ಮಾರುತಿ ತಳ್ಳಳ್ಳಿ

ಪ್ರಮುಖ ಮುಖ್ಯಾಂಶಗಳು

  • ಎಸ್‌ಬಿಐ ಬ್ಯಾಂಕ್ ದರೋಡೆ ಪ್ರಕರಣ
  • ಬ್ಯಾಂಕಿಗೆ ಬೀಗ ಹಾಕಿ ಪ್ರತಿಭಟನೆ
ಚಡಚಣ: ಕಳೆದ ವರ್ಷ ಸೆ. 16ರಂದು ಸ್ಥಳೀಯ ಎಸ್‌ಬಿಐ ಬ್ಯಾಂಕ್ ದರೋಡೆ ಪ್ರಕರಣದಲ್ಲಿ ಚಿನ್ನ ಕಳೆದುಕೊಂಡ ಗ್ರಾಹಕರು ಬುಧವಾರ ಸಂಜೆ 4 ಗಂಟೆಯಿಂದ ತಡರಾತ್ರಿ 11 ಗಂಟೆಯವರೆಗೆ ಬ್ಯಾಂಕಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ಚಿನ್ನ ಕಳೆದುಕೊಂಡ ಗ್ರಾಹಕರು ಬ್ಯಾಂಕ್‌ಗೆ ಆಗಮಿಸಿ, ನಮಗೆ ಚಿನ್ನ ಅಥವಾ ಹಣ ನೀಡಲು ಬ್ಯಾಂಕ್ ನೀಡಿದ್ದ ಎಲ್ಲ ಗಡುವುಗಳು ಮುಗಿದಿದ್ದು, ನಮಗೆ ನಮ್ಮ ಚಿನ್ನ ಅಥವಾ ನಾವು ಅಡವಿಟ್ಟ ಚಿನ್ನಕ್ಕೆ ಇಂದಿನ ಮಾರುಕಟ್ಟೆ ಬೆಲೆಯನ್ನು ಈ ಕ್ಷಣವೇ ನೀಡಬೇಕು ಎಂದು ಪಟ್ಟು ಹಿಡಿದು ಬ್ಯಾಂಕ್ ಬಾಗಿಲಿಗೆ ಬೀಗ ಜಡಿದು ಬ್ಯಾಂಕ್ ಒಳಗಡೆ ತಡರಾತ್ರಿ 11 ಗಂಟೆವರೆಗೆ ಪ್ರತಿಭಟನೆ ನಡೆಸಿದರು.
2025ರ ಸೆ. 16ರಂದು ಬ್ಯಾಂಕ್ ದರೋಡೆಯಾಗಿದ್ದು, ಇದುವರೆಗೆ ಅವರಿಗೆ ಸೇರಿದ ಚಿನ್ನಾಭರಣಗಳು ವಾಪಸ್ ಸಿಗದೆ ಆಕ್ರೋಶಗೊಂಡಿರುವ ಗ್ರಾಹಕರು ಬುಧವಾರ ರಾತ್ರಿಯಿಡಿ ಬ್ಯಾಂಕ್ ಒಳಗಡೆ ಬೃಹತ್ ಪ್ರತಿಭಟನೆ ನಡೆಸಿದರು.
ಬ್ಯಾಂಕ್ ಅಧಿಕಾರಿಗಳು ಈ ಹಿಂದೆ ಗ್ರಾಹಕರೊಂದಿಗೆ ಸಭೆ ನಡೆಸಿ, ಜೂ. 6ರೊಳಗೆ ಚಿನ್ನ ಅಥವಾ ಹಣ ನೀಡುವುದಾಗಿ ಭರವಸೆ ನೀಡಿದ್ದರು. ಗ್ರಾಹಕರು ಅಡವಿಟ್ಟಿದ್ದ ಚಿನ್ನದ ನಿವ್ವಳ ತೂಕಕ್ಕೆ ಇಂದಿನ ಮಾರುಕಟ್ಟೆ ದರದೊಂದಿಗೆ ಶೇ. 20ರಷ್ಟು ಹೆಚ್ಚುವರಿ ಹಣ ನೀಡುವುದಾಗಿ ಬ್ಯಾಂಕ್ ಹೇಳಿತ್ತು.
ಆದರೆ ಗ್ರಾಹಕರು ಇಂದಿನ ಮಾರುಕಟ್ಟೆ ದರದಲ್ಲಿ ಅಸಲು ತೂಕದ ಚಿನ್ನವನ್ನೇ ನೀಡಬೇಕು ಎಂದು ಪಟ್ಟು ಹಿಡಿದಿದ್ದರು. ಇಷ್ಟಾದರೂ ಜೂ.10 ಕಳೆದರೂ ಬ್ಯಾಂಕಿನಿಂದ ಯಾವುದೇ ಪರಿಹಾರ ಸಿಗದ ಕಾರಣ ಗ್ರಾಹಕರ ಆಕ್ರೋಶ ಭುಗಿಲೆದ್ದಿದೆ.
ತಡರಾತ್ರಿಯವರೆಗೂ ನಡೆದ ಈ ಹೈಡ್ರಾಮಾ ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಚಡಚಣ ಪಿಎಸ್‌ಐ ಸೋಮೇಶ ಗೆಜ್ಜಿ, ಸಿಪಿಐ ಪರಶುರಾಮ ಮನಗೂಳಿ ಅವರು ಮಾತನಾಡಿ, ಜೂ.15 ಸೋಮವಾರ ನಿಮ್ಮ ಚಿನ್ನಕ್ಕೆ ಸರಿಯಾದ ಮೊತ್ತ ನೀಡುತ್ತೇವೆ ಎಂದು ಬ್ಯಾಂಕಿನ ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ಕಾರಣ ತಾವು ಸೋಮವಾರದವರೆಗೆ ತಾಳ್ಮೆಯಿಂದ ಇದ್ದು ತಮ್ಮ ಚಿನ್ನದ ಮೊತ್ತವನ್ನು ಪಡೆದುಕೊಳ್ಳಿ ಎಂದು ಹೇಳಿ, ಗ್ರಾಹಕರ ಮನವೊಲಿಸುವಲ್ಲಿ ಯಶಸ್ವಿಯಾದ ನಂತರ ಗ್ರಾಹಕರು ಪ್ರತಿಭಟನೆ ಹಿಂಪಡೆದರು.
ನೂರಾರು ಗ್ರಾಹಕರು ಸೇರಿ ವಿಭಾಗೀಯ ವ್ಯವಸ್ಥಾಪಕ ವಿಕಾಸ ಭಗೋತ್ರಾ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಆನಂದ ವಾಲಿ, ಶಿವಕುಮಾರ, ವೆಂಕಟೇಶ ರಾಜಪೂತ ಮತ್ತಿತರರಿದ್ದರು.