ವಿಜಯಪುರ ನಗರದ ಬಿಜೆಪಿ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಹಾಗೂ ಕೃಷ್ಣಾ ಗುನ್ನಾಳಕರ ಸುದ್ದಿಗೋಷ್ಠಿ ನಡೆಸಿದರು. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಸಾಬು ಮಾಶ್ಯಾಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈರಣ್ಣ ರಾವೂರ, ಮಾಧ್ಯಮ ಪ್ರಮುಖ ವಿಜಯ ಜೋಶಿ ಇತರರಿದ್ದಾರೆ. 
ವಿಜಯಪುರ

ಪಿಆರ್‌ಸಿ ಪ್ರಕ್ರಿಯೆಯಿಂದ ದೇಶದ ಸುಭದ್ರತೆಗೆ ಧಕ್ಕೆ, ಬಿಜೆಪಿ ಮುಖಂಡರಿಂದ ತೀವ್ರ ಆಕ್ರೋಶ

ಪ್ರಮುಖ ಮುಖ್ಯಾಂಶಗಳು

  • ರಾಜ್ಯ ಸರ್ಕಾರದ ಕ್ರಮಕ್ಕೆ ತೀವ್ರ ವಿರೋಧ
  • ಕೃಷ್ಣಾ ಗುನ್ನಾಳಕರ ಗಂಭೀರ ಆರೋಪ
  • ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಸಾಥ್
  • ಎಸ್‌ಐಆರ್ ಪ್ರಕ್ರಿಯೆ ನಿಷ್ಕ್ರೀಯಗೊಳಿಸುವ ಷಡ್ಯಂತ್ರ
ವಿಜಯಪುರ: ಎಸ್‌ಐಆರ್ ಪ್ರಕ್ರಿಯೆ ನಿಷ್ಕ್ರೀಯಗೊಳಿಸುವ ಷಡ್ಯಂತ್ರದ ಭಾಗವಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ಶಾಶ್ವತ ರಹವಾಸಿ ಪ್ರಮಾಣಪತ್ರ ಪ್ರಕ್ರಿಯೆ ಆರಂಭಿಸಿದೆ ಎಂದು ಬಿಜೆಪಿ ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಹಾಗೂ ಕೃಷ್ಣಾ ಗುನ್ನಾಳಕರ ಆರೋಪಿಸಿದರು.
ಶನಿವಾರ ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿದ ಅವರು, ಕಾಂಗ್ರೆಸ್‌ಗೆ ಇಷ್ಟು ದಿನ ಈ ಪ್ರಕ್ರಿಯೆ ನೆನಪಾಗಲಿಲ್ಲವೇ? ಈಗ ಎಸ್‌ಐಆರ್ ನಡೆದಿರುವದಾಗ ಇದರ ಔಚಿತ್ಯವೇನಿತ್ತು? ಎಂದು ಪ್ರಶ್ನಿಸಿದರು.
ಅಕ್ರಮ ವಲಸಿಗರಿಗೆ ರಕ್ಷಣೆ ನೀಡುವ ಉದ್ದೇಶದಿಂದ ಕಾಂಗ್ರೆಸ್ ಸರ್ಕಾರ ಈ ಪಿಆರ್‌ಸಿ ಎಂಬ ಪ್ರಕ್ರಿಯೆ ಜಾರಿಗೆ ತರುತ್ತಿದೆ. ಇಲ್ಲಿರುವ ಅಕ್ರಮ ವಲಸಿಗರಿಗೆ ಶಾಶ್ವತ ರಹವಾಸಿ ಪ್ರಮಾಣ ಪತ್ರ ನೀಡುವ ಮೂಲಕ ತನ್ನ ವೋಟ್ ಬ್ಯಾಂಕ್ ಭದ್ರಪಡಿಸಿಕೊಳ್ಳಲು ಕಾಂಗ್ರೆಸ್ ಹವಣಿಸುತ್ತಿದೆ. ಈ ರೀತಿ ಅಕ್ರಮ ವಲಸಿಗರಿಗೆ ರಕ್ಷಣೆ ದೊರಕಿದರೆ ಅವರು ಇಲ್ಲಿ ಶಾಶ್ವತವಾಗಿ ನೆಲೆಸಲು ಬಲ ನೀಡಲಿದೆ, ಇದು ರಾಷ್ಟ್ರದ ಭದ್ರತೆಗೆ ದೊಡ್ಡ ಅಪಾಯವಾಗಿದೆ, ಕೂಡಲೇ ಈ ಅವೈಜ್ಞಾನಿಕ ಪ್ರಕ್ರಿಯೆಯನ್ನು ಕೈ ಬಿಡಬೇಕು ಎಂದರು.
ಈ ಅವೈಜ್ಞಾನಿಕ ಹಾಗೂ ತರ್ಕರಹಿತ ಪ್ರಕ್ರಿಯೆಯ ಬಗ್ಗೆ ಕೇಂದ್ರದ ಅನೇಕ ನಾಯಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಯಾವ ರಾಜ್ಯದಲ್ಲಿಯೂ ಶಾಶ್ವತ ರಹವಾಸಿ ಪತ್ರ ನೀಡುವುದಿಲ್ಲ, ಇದು ರಾಜ್ಯ ಸರ್ಕಾರದ ಅಧಿಕಾರ ವ್ಯಾಪ್ತಿಯಲ್ಲಿಯೂ ಇಲ್ಲ, ಇದೊಂದು ಸಂವಿಧಾನ ಬಾಹಿರ ಪ್ರಕ್ರಿಯೆ ಎಂದು ಗುನ್ನಾಳಕರ ಹೇಳಿದರು.
ಕಾಂಗ್ರೆಸ್ ಪಕ್ಷದವರು ಅತ್ಯಂತ ಸರಳವಾಗಿರುವ ಎಸ್‌ಐಆರ್ ಪ್ರಕ್ರಿಯೆಯನ್ನು ಇನ್ನಷ್ಟು ಕಠಿಣಗೊಳಿಸುವ ಕಾರ್ಯ ಮಾಡಿ ಗೊಂದಲ ಸೃಷ್ಠಿಸುತ್ತಿದ್ದಾರೆ, ಶಾಶ್ವತ ರಹವಾಸಿ ಪ್ರಮಾಣ ಪತ್ರ ಎಂಬ ವಿಷಯವನ್ನು ಮುನ್ನೆಲೆಗೆ ತಂದಿದ್ದಾರೆ, ಶಾಶ್ವತ ರಹವಾಸಿ ಪ್ರಮಾಣ ಪತ್ರ ಈಗ ನೀಡುವ ಔಚಿತ್ಯವೇನಿತ್ತು? ರಾಷ್ಟ್ರೀಯ ಭದ್ರತೆಗೆ ಇದು ದೊಡ್ಡ ಅಪಾಯಕಾರಿಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಮಾತನಾಡಿ, ಮಹಾರಾಷ್ಟ್ರದಲ್ಲಿ ಮಳೆ ಸುರಿಯುತ್ತಿದೆ, ಆಲಮಟ್ಟಿ ಜಲಾಶಯದಲ್ಲಿ ನೀರು ಹರಿದು ಬರುತ್ತಿದೆ, ಆದರೂ ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಹಾಹಾಕಾರ ಉಂಟಾಗಿದೆ, ಬೆಂಗಳೂರಿನವರು ನೀರಾವರಿ ಮಂತ್ರಿಯಾದರೆ ಯಾವ ಪ್ರಯೋಜನವಾಗುವುದಿಲ್ಲ, ಹೀಗಾಗಿ ವಿಜಯಪುರ ಭಾಗದವರು ಜಲಸಂಪನ್ಮೂಲ ಸಚಿವರಾಗಬೇಕು, ಆಲಮಟ್ಟಿ ಜಲಾಶಯದ ಸಮಸ್ಯೆ ಮುಖ್ಯಮಂತ್ರಿ ಹಾಗೂ ಬೆಂಗಳೂರಿನವರಾದ ಜಲಸಂಪನ್ಮೂಲ ಸಚಿವರಿಗೆ ಅರ್ಥವಾಗುವುದೇ ಇಲ್ಲ. ಹೀಗಾಗಿ ನಮ್ಮ ವಿಜಯಪುರದವರಿಗೆ ಈ ಖಾತೆ ವಹಿಸಿ ಎಂದರು.
ವಿಶೇಷ ಪ್ರಕರಣ ಎಂದು ವಿಜಯಪುರ ಜನತೆಗೆ ಜಲಾಶಯದಿಂದ ನೀರು ಬಿಡುಗಡೆ ಮಾಡಿಸುವ ನಿಟ್ಟಿನಲ್ಲಿ ಕ್ರಮ ಜರುಗಿಸಬೇಕು ಎಂದರು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಸಾಬು ಮಾಶ್ಯಾಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈರಣ್ಣ ರಾವೂರ, ಮಾಧ್ಯಮ ಪ್ರಮುಖ ವಿಜಯ ಜೋಶಿ ಇತರರಿದ್ದರು.