ವಿಜಯಪುರ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಹಿಳಾ ಘಟಕದ ಪದಾಧಿಕಾರಿಗಳು ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿದರು. ಕಾಂತಾ ನಾಯಕ, ಸಂಯುಕ್ತಾ ಪಾಟೀಲ, ರುಕ್ಸಾನಾ ಉಸ್ತಾದ್ ಇತರರಿದ್ದಾರೆ.
- ಮಹಿಳೆಯರಿಗೆ ಮೀಸಲಾತಿ ಕಲ್ಪಿಸಲು ವಿರೋಧವಿಲ್ಲ
- ಕೇಂದ್ರ ಸರ್ಕಾರದ ನಡೆ ಹಿಂದೆ ದುರುದ್ದೇಶವಿದೆ
- ಪಂಚ ರಾಜ್ಯಗಳ ಚುನಾವಣೆಯ ಗಿಮಿಕ್ ಅಡಗಿದೆ
ವಿಜಯಪುರ: ಮಹಿಳಾ ಮೀಸಲಾತಿ ಹಾಗೂ ಕ್ಷೇತ್ರ ಮರು ವಿಂಗಡಣೆಯ ಹಿಂದೆ ಬಿಜೆಪಿಯ ರಾಜಕೀಯ ಲಾಭ ಅಡಗಿತ್ತು. ಹೀಗಾಗಿ ಕಾಂಗ್ರೆಸ್ ಕೇಂದ್ರ ಸರ್ಕಾರದ ಧೋರಣೆಯನ್ನು ಖಂಡಿಸಿದೆ ಎಂದು ಕಾಂಗ್ರೆಸ್ ಮಹಿಳಾ ಘಟಕದ ಪದಾಧಿಕಾರಿಗಳು ತಿಳಿಸಿದರು.
ಮಹಿಳಾ ಮೀಸಲಾತಿ ಹಾಗೂ ಕ್ಷೇತ್ರ ಮರು ವಿಂಗಡಣೆ ಬೇರೆ-ಬೇರೆ ವಿಷಯ. ಆದರೆ, ಈಗ ಪಂಚ ರಾಜ್ಯ ಚುನಾವಣೆಗಳ ಸಮಯದಲ್ಲಿ ರಾಜಕೀಯ ಲಾಭಕ್ಕಾಗಿ ಬಿಜೆಪಿ ಸರ್ಕಾರ ಏಕಾಏಕಿ ಕ್ಷೇತ್ರ ಮರು ವಿಂಗಡಣೆ ಮಸೂದೆಯೊಂದಿಗೆ ಮಾಹಿಳಾ ಮೀಸಲಾತಿ ಮಸೂದೆ ತಂದಿತ್ತು. ಆ ಕಾರಣಕ್ಕಾಗಿ ಕಾಂಗ್ರೆಸ್ ಬೆಂಬಲ ಸೂಚಿಸಿಲ್ಲವೆಂದು ಸೋಮವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಕಾಂತಾ ನಾಯಕ ಮಾತನಾಡಿ, ಮಹಿಳಾ ಮೀಸಲಾತಿ ಹೆಸರಿನಲ್ಲಿ ಕೇಂದ್ರ ಸರ್ಕಾರ ಮೋಸದ ಮೂರು ಮಸೂದೆ ತಂದಿತ್ತು. ಮಸೂದೆ ಹಿಂದಿನ ಉದ್ದೇಶವೇ ಬೇರೆಯಾಗಿತ್ತು. ಆದ್ದರಿಂದ ಕಾಂಗ್ರೆಸ್ ಸೇರಿ ಎಲ್ಲ ವಿರೋಧ ಪಕ್ಷಗಳು ತಕ್ಕ ಉತ್ತರ ಕೊಟ್ಟಿವೆ ಎಂದರು.
ಶೇ.33ರಷ್ಟು ಮಹಿಳಾ ಮೀಸಲಾತಿ ಬಗ್ಗೆ ನಿರಂತರವಾಗಿ ಕಾಂಗ್ರೆಸ್ ಧ್ವನಿ ಎತ್ತಿದಾಗ ಇದೇ ಬಿಜೆಪಿಯವರು ವಿರೋಧಿಸುತ್ತಲೇ ಬಂದಿದ್ದರು. 2023ರಲ್ಲಿ ನಾರಿ ಶಕ್ತಿ ಅಭಿವಂದನ ಮಸೂದೆಯನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು. ಹೊಸ ಜನಸಂಖ್ಯೆ ಆಧಾರದ ಮೇಲೆ ಇದನ್ನು ಜಾರಿಗೆ ತರಲು ನಿರ್ಧಾರ ಮಾಡಲಾಗಿತ್ತು ಎಂದರು.
ಕ್ಷೇತ್ರ ಮರು ವಿಂಗಡನೆ ಮಸೂದೆಯೊಂದಿಗೆ ಮಹಿಳಾ ಮೀಸಲಾತಿ ಮಸೂದೆ ತಂದು ದಕ್ಷಿಣ ಭಾರತದ ರಾಜ್ಯಗಳಿಗೆ ಕೇಂದ್ರ ಸರ್ಕಾರ ಅನ್ಯಾಯ ಮಾಡಲು ಮುಂದಾಗಿತ್ತು. ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು ಮಹಿಳಾ ಮೀಸಲಾತಿಯನ್ನು 543 ಕ್ಷೇತ್ರಗಳಿಗೆ ಈಗಲೇ ಅನುಷ್ಠಾನ ಮಾಡಿ ಎಂದು ಹೇಳಿದ್ದರು. ಜತೆಗೆ ಶೇ.50ರಷ್ಟು ಮೀಸಲಾತಿಯನ್ನು ಮಹಿಳೆಯರಿಗೆ ಕೊಟ್ಟರೂ ಕಾಂಗ್ರೆಸ್ ಸ್ವಾಗತ ಮಾಡಲಿದೆ ಎಂದು ಹೇಳಿದರು.
ಈಗ ಮಹಿಳೆಯರ ಬಗ್ಗೆ ಕಾಳಜಿಯ ಮಾತನಾಡುವ ಪ್ರಧಾನಿ ಮೋದಿ ಹತ್ರಾಸ್ ಪ್ರಕರಣ, ಮಣಿಪುರದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಮಹಿಳಾ ಕ್ರೀಡಾಪಟುಗಳು ರಸ್ತೆಗೆ ಇಳಿದು ಹೋರಾಡಿದಾಗ ಯಾಕೆ ಸುಮ್ಮನೆ ಇದ್ದರು ಎಂದೂ ಪ್ರಶ್ನಿಸಿದರು.
ಸಂಯುಕ್ತಾ ಪಾಟೀಲ ಮಾತನಾಡಿ, ಮಹಿಳಾ ಮೀಸಲಾತಿ ಮಸೂದೆಯನ್ನು 2023ರಲ್ಲಿ ಸರ್ಕಾರ ಹಾಗೂ ಪ್ರತಿಪಕ್ಷಗಳು ಒಗ್ಗೂಡಿ ಅಂಗೀಕಾರ ಮಾಡಿದ್ದವು. ಅಂದು ಸಹ ತಕ್ಷಣವೇ ಜಾರಿ ಮಾಡಿ, 2024ರ ಲೋಕಸಭಾ ಚುನಾವಣೆಗೆ ಅನುಷ್ಠಾನ ಆಗಲಿ ಎಂಬ ಬೇಡಿಕೆಯನ್ನು ಕಾಂಗ್ರೆಸ್ ಮಂಡಿಸಿತ್ತು. ಆದರೆ, ಈಗ ಕ್ಷೇತ್ರ ಮರು ವಿಂಗಡಣೆ ಹಾಗೂ ಮಹಿಳಾ ಮೀಸಲಾತಿ ಜೋಡಣೆ ಮಾಡುವ ಅವಶ್ಯಕತೆ ಇರಲಿಲ್ಲ. ಕ್ಷೇತ್ರ ಮರು ವಿಂಗಡಣೆ ವಿಷಯವು ರಾಜಕೀಯವಾಗಿ ಜಟಿಲವಾದ ವಿಷಯವಾಗಿದೆ. ಹೀಗಾಗಿ ಎಲ್ಲರೂ ಒಮ್ಮತದಿಂದ ಒಪ್ಪುವ ಮಹಿಳಾ ಮೀಸಲಾತಿಯನ್ನು ಅದರೊಂದಿಗೆ ತಂದಿದ್ದು ಸರಿಯಾದ ಕ್ರಮವಾಗಿರಲಿಲ್ಲ ಎಂದರು.
ರುಕ್ಸಾನಾ ಚಪ್ಪರಬಂದ್, ವಿದ್ಯಾರಾಣಿ ತುಂಗಳ, ಲಲಿತಾ ಅಂಕಲಗಿ, ಮಹಾದೇವಿ ಗೋಕಾಕ, ಆರತಿ ಶಹಾಪುರ ಇತರರಿದ್ದರು.