ವಿಜಯಪುರ ನಗರದ ಪ್ರಕೃತಿ ಕಾಲನಿಯಲ್ಲಿ ಬಿಎಲ್ಡಿಇ ಸಂಸ್ಥೆ ಮತ್ತು ಸಂಭವ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಪ್ರಾರಂಭಿಸಲಾಗಿರುವ ಬಿಎಲ್‌ಡಿಇ- ರಘುಕುಲ ಸಮನ್ವಯ ಶಾಲೆ ಉದ್ಟಾಟನೆಯನ್ನು ಸಚಿವ ಎಂ.ಬಿ. ಪಾಟೀಲ ನೆರವೇರಿಸಿದರು. ವಿಪ ಸದಸ್ಯ ಸುನೀಲಗೌಡ ಪಾಟೀಲ, ಮಾಜಿ ಶಾಸಕ ರಾಜು ಆಲಗೂರ, ಸೋಮನಗೌಡ ಪಾಟೀಲ, ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಗಂಗಾಧರ ಎಸ್.ಸಂಬಣ್ಣಿ ಇತರರಿದ್ದಾರೆ. 
ವಿಜಯಪುರ

ಅಂಗವಿಕಲ ಮಕ್ಕಳ ಕಲ್ಯಾಣಕ್ಕೆ ಪಣ; ಸಚಿವ ಎಂ.ಬಿ. ಪಾಟೀಲ

ಪ್ರಮುಖ ಮುಖ್ಯಾಂಶಗಳು

  • ಬಿಎಲ್‌ಡಿಇ- ರಘುಕುಲ ಸಮನ್ವಯ ಶಾಲೆ ಉದ್ಟಾಟನೆ
  • ಪ್ರಕೃತಿ ಕಾಲನಿಯಲ್ಲಿ ಕಾರ್ಯಕ್ರಮ
  • ನಾಡಿನ ಮಠಾಧೀಶರು-ಗಣ್ಯಾತಿ ಗಣ್ಯರು ಭಾಗಿ
ವಿಜಯಪುರ: ‘ಅಂಗವಿಕಲ ಮಕ್ಕಳು ನಮ್ಮ ಸಮಾಜದ ಅವಿಭಾಜ್ಯ ಅಂಗವಾಗಿದ್ದು, ಅವರಿಗೂ ಎಲ್ಲ ಮಕ್ಕಳಂತೆ ಸಮಾನ ಶಿಕ್ಷಣ, ಸಮಾನ ಅವಕಾಶ ಹಾಗೂ ಗೌರವಯುತ ಬದುಕು ದೊರೆಯುವಂತೆ ಮಾಡುವುದು ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿಯಾಗಿದೆ’ ಎಂದು ಬಿಎಲ್‌ಡಿಇ ಸಂಸ್ಥೆಯ ಅಧ್ಯಕ್ಷ, ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.
ಸೋಮವಾರ ನಗರದ ಪ್ರಕೃತಿ ಕಾಲನಿಯಲ್ಲಿ ಬಿಎಲ್ಡಿಇ ಸಂಸ್ಥೆ ಮತ್ತು ಸಂಭವ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಪ್ರಾರಂಭಿಸಲಾಗಿರುವ ಬಿಎಲ್‌ಡಿಇ- ರಘುಕುಲ ಸಮನ್ವಯ ಶಾಲೆ ಉದ್ಟಾಟಿಸಿ ಅವರು ಮಾತನಾಡಿದರು.
‘ಅಂಗವಿಕಲ ಮಕ್ಕಳ ಸಬಲೀಕರಣಕ್ಕೆ ಸಮರ್ಪಕ ಹೆಜ್ಜೆಯಾಗಿ ಬಿ.ಎಲ್.ಡಿ.ಇ-ರಘುಕುಲ ಸಮನ್ವಯ ಶಾಲೆ ಪ್ರಾರಂಭಿಸಲಾಗಿದೆ. ಪ್ರತಿಯೊಂದು ಮಗುವಿನ ಕನಸಿಗೆ ರೆಕ್ಕೆ ನೀಡಿ ಅವರಲ್ಲಿ ಆತ್ಮವಿಶ್ವಾಸ ಬೆಳೆಸುವ ಮೂಲಕ ಸಮಾಜದ ಮುಖ್ಯವಾಹಿನಿಯಲ್ಲಿ ಗೌರವದಿಂದ ಬದುಕಲು ಅವಕಾಶ ಕಲ್ಪಿಸುವ ಶಿಕ್ಷಣ ಕೇಂದ್ರವಾಗಿ ಈ ಶಾಲೆ ರೂಪುಗೊಳ್ಳಲಿದೆ. ಇದು ರಾಷ್ಟ್ರಕ್ಕೆ ಮಾದರಿಯಾಗುವ ವಿಶ್ವಾಸವಿದೆ’ ಎಂದರು.
‘ಇಲ್ಲಿರುವ ಆಧುನಿಕ ವಿಶಾಲ ಕಟ್ಟಡ, ಸಕಲ ಸೌಕರ್ಯಗಳನ್ನು ಹೊಂದಿರುವ ಕೊಠಡಿಗಳು, ಬೋಧಕ ಮತ್ತು ಆರೈಕೆ ಸಿಬ್ಬಂದಿಯ ನಿಸ್ವಾರ್ಥ ಸೇವೆ, ಅಂಗವಿಕಲ ಮಕ್ಕಳ ಅಭಿವೃದ್ಧಿಗೆ ಪೂರಕವಾಗಿವೆ. ಬಿಎಲ್ಡಿಇ ಸಂಸ್ಥೆಯ ಮೆಡಿಕಲ್ ಕಾಲೇಜಿನಿಂದ ಇಲ್ಲಿನ ಮಕ್ಕಳಿಗೆ ಎಲ್ಲ ರೀತಿಯ ಚಿಕಿತ್ಸೆಗೆ ನೆರವು ನೀಡಲಾಗುವುದು. ಇಂಥ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾದಂತೆ ಅಗತ್ಯಕ್ಕೆ ತಕ್ಕಂತೆ ಸೌಲಭ್ಯಗಳನ್ನು ಒದಗಿಸಲಾವುದು. ಇಂಥ ಮಕ್ಕಳಿಗೆ ನಾವು ಸೇವೆ ಮಾಡಿದರೆ ನಮ್ಮ ಮಕ್ಕಳಿಗೂ ಪುಣ್ಯ ಬರುತ್ತದೆ’ ಎಂದರು.
ಬಿಎಲ್ಡಿಇ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಮಾತನಾಡಿ, ‘ಬಸವ ನಾಡಿನಲ್ಲಿ ಇದು ಅಪರೂಪದ ಶಾಲೆಯಾಗಿದೆ. ಅಂಗವಿಕಲ ಮಕ್ಕಳನ್ನು ಸಾಕಿ ಸಲಹುವುದು ಮತ್ತು ಅವರಿಗೆ ಕಲಿಸುವುದು ಸವಾಲಿನ ಕೆಲಸವಾಗಿದೆ. ಅಂಥ ಮಕ್ಕಳಿಗೆ ಈ ಶಾಲೆ ಸಂಜೀವಿನಿಯಾಗಿದೆ’ ಎಂದು ಹೇಳಿದರು.
ಶಿವಮೊಗ್ಗ ಬೆಕ್ಕಿನ ಕಲ್ಮಠದ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು, ಜಡೆ-ಸೊರಬ ಮಠದ ಮಹಾಂತ ಸ್ವಾಮೀಜಿ, ನಿಡೋಣಿಯ ಎರಡೆತ್ತಿನ ಮಠದ ಸಿದ್ಧಲಿಂಗ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.
ಮಾಜಿ ಶಾಸಕ ರಾಜು ಆಲಗೂರ, ಸೋಮನಗೌಡ ಪಾಟೀಲ, ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಗಂಗಾಧರ ಎಸ್.ಸಂಬಣ್ಣಿ, ಸಂಭವ ಶಿಕ್ಷಣ ಮತ್ತು ಸಾಂಸ್ಕೃತಿಕ ಸಂಸ್ಥೆಯ ನಿರ್ದೇಶಕ ರಾಜೇಂದ್ರ ರುಣವಾಲ, ಬಿಎಲ್ಡಿಇ ಸಂಸ್ಥೆಯ ಮುಖ್ಯ ಸಲಹೆಗಾರ ಡಾ. ಆರ್.ವಿ. ಕುಲಕರ್ಣಿ, ಆಸ್ಪತ್ರೆಯ ವೈದ್ಯಕೀಯ ಅಧಿಕ್ಷಕ ಡಾ. ಎನ್. ಬೆಂಟೂರ, ಸಂಸ್ಥೆಯ ಆಡಳಿತಾಧಿಕಾರಿ ಐ.ಎಸ್. ಕಾಳಪ್ಪನವರ, ಮುಖಂಡರಾದ ನಿರ್ಮಲ ರುಣವಾಲ, ನರೇಂದ್ರ ಓಸ್ವಾಲ್, ಕೆಎಲ್‌ಇ ವಿವಿಯ ಡಾ. ಅವಿನಾಶ ಕವಿ, ಏಕನಾಥ ಜಾಧವ, ಈಶ್ವರ ಬಾಗೋಜಿ, ಸವಿತಾ ದೇಶಮುಖ, ದಾನಮ್ಮ ಮಜ್ಜಗಿ ಇತರರಿದ್ದರು.
ಬಿಎಲ್ಡಿಇ ಆಸ್ಪತ್ರೆಯ ವತಿಯಿಂದ ಅಂಗವಿಕಲ ಮಕ್ಕಳ ಆರೋಗ್ಯ ತಪಾಸಣೆ ಉಚಿತ ಶಿಬಿರ ನಡೆಯಿತು.