ವಿಜಯಪುರ ತಾಲೂಕಿನ ಅರಕೇರಿ ಗ್ರಾಮದ ಮಾನೆ ಬಂಡಾರಿ ವಸತಿ ಶಾಲೆ ಎದುರು ವಿದ್ಯಾರ್ಥಿಗಳು ಹಾಗೂ ಪಾಲಕರು ಎಐಡಿಎಸ್‌ಒ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಸಿದ್ದಲಿಂಗ ಬಾಗೇವಾಡಿ, ಬಾಲಕೃಷ್ಣ ಬಂಡಾರಿ, ಶೀನು ರಾಠೋಡ ಇತರರಿದ್ದಾರೆ. 
ವಿಜಯಪುರ

ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹೆಸರಲ್ಲಿ ಶಾಲೆ ಮುಚ್ಚುವ ಹುನ್ನಾರ, ಅರಕೇರಿಯಲ್ಲಿ ಎಐಡಿಎಸ್‌ಒ ನೇತೃತ್ವ ಪ್ರತಿಭಟನೆ

ಪ್ರಮುಖ ಮುಖ್ಯಾಂಶಗಳು

  • ಕೆಪಿಎಸ್ ಮ್ಯಾಗ್ನೆಟ್ ಯೋಜನೆ
  • ಸರ್ಕಾರಿ ಶಾಲೆ ಮುಚ್ಚುವ ಹುನ್ನಾರ
  • ವಿದ್ಯಾರ್ಥಿ-ಪಾಲಕರಿಂದ ವಿರೋಧ
  • ಎಐಡಿಎಸ್‌ಒ ನೇತೃತ್ವ ಪ್ರತಿಭಟನೆ
ವಿಜಯಪುರ: ಕೆಪಿಎಸ್ ಮ್ಯಾಗ್ನೆಟ್ ಯೋಜನೆಗಾಗಿ ಅರಕೇರಿ ಗ್ರಾಮದ ವಿವಿಧ ವಸತಿ ಹಾಗೂ ತಾಂಡಾದ ಶಾಲೆಗಳ ಮುಚ್ಚುತ್ತಿರುವ ಕ್ರಮ ವಿರೋಧಿಸಿ ವಿದ್ಯಾರ್ಥಿಗಳು ಹಾಗೂ ಪಾಲಕರು ಎಐಡಿಎಸ್‌ಒ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಅರಕೇರಿ ಗ್ರಾಮದ ಮಾನೆ ಬಂಡಾರಿ ವಸತಿ ಶಾಲೆ ಎದುರು ಜಮಾಯಿಸಿದ ವಿದ್ಯಾರ್ಥಿಗಳು ಹಾಗೂ ಪಾಲಕರು ಸರ್ಕಾರದ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಯಾವುದೇ ಕಾರಣಕ್ಕೂ ವಸತಿ ಶಾಲೆಗಳನ್ನು ಬಂದ್‌ಗೊಳಿಸದಂತೆ ಆಗ್ರಹಿಸಿದರು.
ಎಸ್‌ಡಿಎಂಸಿ ಅಧ್ಯಕ್ಷ ಬಾಲಕೃಷ್ಣ ಬಂಡಾರಿ ಮಾತನಾಡಿ, ಕೆಪಿಎಸ್ ಮ್ಯಾಗ್ನೆಟ್ ಯೋಜನೆಗಾಗಿ ಅರಕೇರಿ ಗ್ರಾಮದ ಮಾನೆಬಂಡಾರಿ ಹಾಗೂ ಸೋಂಪುರ ವಸತಿ(ತೋಟದ) ಶಾಲೆ ಮತ್ತು ತಾಂಡಾ ನಂ. 6ರ ಶಾಲೆ ಸೇರಿ ಸುತ್ತಲಿನ 10 ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ಮುಚ್ಚಲು ಸರ್ಕಾರ ಮುಂದಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಹಾಗೂ ಪಾಲಕರು ಶಾಲೆ ಮುಚ್ಚಲು ಬಿಡುವುದಿಲ್ಲವೆಂದರು.
ಎಐಡಿವೈಒ ನಾಯಕ ಸಿದ್ದಲಿಂಗ ಬಾಗೇವಾಡಿ ಮಾತನಾಡಿ, ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳ ಹೆಸರಿನಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುವ ಹುನ್ನಾರ ನಡೆದಿದೆ. ರಾಜ್ಯಾದ್ಯಂತ 40 ಸಾವಿರಕ್ಕೂ ಅಧಿಕ ಶಾಲೆಗಳನ್ನು ವಿಲೀನಗೊಳಿಸಲು ಮತ್ತು ಅವುಗಳನ್ನು ಸಂಪೂರ್ಣವಾಗಿ ಮುಚ್ಚಲು ಸಿದ್ಧತೆ ನಡೆದಿದೆ. ಗುಣಮಟ್ಟ ಮತ್ತು ಮಾದರಿ ಶಾಲೆಗಳು ಎಂಬ ಆಕರ್ಷಕ ಪದಗಳ ಹಿಂದೆ, ಉಚಿತ ಮತ್ತು ಸಾರ್ವತ್ರಿಕ ಶಿಕ್ಷಣದ ನಮ್ಮ ನವೋದಯ ಚಿಂತಕರು, ಕ್ರಾಂತಿಕಾರಿಗಳು ಕಷ್ಟಪಟ್ಟು ಗಳಿಸಿದ ವ್ಯವಸ್ಥೆಯನ್ನು ನಾಶಪಡಿಸುವ ಒಂದು ನಿಷ್ಕರುಣ ಪ್ರಯತ್ನ ನಡೆದಿದೆ ಎಂದರು.
ಅರಕೇರಿ ತಾಂಡಾ ನಂ.6ರ ಗ್ರಾಪಂ ಸದಸ್ಯ ಶೀನು ರಾಠೋಡ ಮಾತನಾಡಿ, ನಮ್ಮ ಮಕ್ಕಳು ಸಂಪೂರ್ಣವಾಗಿ ಸರ್ಕಾರಿ ಶಾಲೆಯ ಮೇಲೆಯೇ ಅವಲಂಬಿಸಿದ್ದು, ಯಾವುದೇ ಕಾರಣಕ್ಕೂ ನಾವು ಶಾಲೆ ಮುಚ್ಚಲು ಬಿಡುವುದಿಲ್ಲ ಎಂದರು.
ಪಾಲಕರಾದ ಚಂದ್ರಬಾನ ಬಂಡಾರಿ, ಎಐಎಂಎಸ್‌ಎಸ್‌ನ ಜಿಲ್ಲಾ ಜಂಟಿ ಕಾರ್ಯದರ್ಶಿ ಶಿವರಂಜನಿ ಎಸ್. ಬಿ, ಹಿರಿಯರಾದ ಅಡಿವೆಪ್ಪ ತಿಪ್ಪಣ್ಣ ಚನಬಸಪ್ಪಗೋಳ, ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ಕಾವೇರಿ ರಜಪೂತ, ಶ್ರೀಕಾಂತ ಕೊಂಡಗೂಳಿ ಮತ್ತಿತರರಿದ್ದರು.