ವಿಜಯಪುರ ನಗರದ ಕಸಾಪ ಭವನದಲ್ಲಿ ಎಐಡಿಎಸ್‌ಒ ರಾಜ್ಯ ಖಜಾಂಚಿ ಸುಭಾಷ ಬೆಟ್ಟದಕೊಪ್ಪ ಸುದ್ದಿಗೋಷ್ಠಿ ನಡೆಸಿದರು. ಸಂಘಟನೆಯ ಜಿಲ್ಲಾ ಜಂಟಿ ಕಾರ್ಯದರ್ಶಿ ಶಿವರಂಜನಿ ಎಸ್.ಬಿ, ಕಾವೇರಿ ರಜಪೂತ ಇದ್ದಾರೆ.
- ಕೆಪಿಎಸ್ ಮ್ಯಾಗ್ನೇಟ್ ಯೋಜನೆಗೆ ವಿರೋಧ
- ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ
- ಎಐಡಿಎಸ್‌ಒ ನೇತೃತ್ವ ಸಮಾವೇಶ
- ಸರ್ಕಾರಿ ಶಾಲೆ ಉಳಿವಿಗಾಗಿ ಹೋರಾಟ
ವಿಜಯಪುರ: ‘ಕೆಪಿಎಸ್-ಮ್ಯಾಗ್ನೆಟ್ ಯೋಜನೆ’ಯಡಿ ರಾಜ್ಯದ 40,000 ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವ ರಾಜ್ಯ ಸರ್ಕಾರದ ಕ್ರಮ ವಿರೋಧಿಸಿ ಮಾ.16 ರಂದು ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಎಐಡಿಎಸ್‌ಒ ರಾಜ್ಯ ಖಜಾಂಚಿ ಸುಭಾಷ ಬೆಟ್ಟದಕೊಪ್ಪ ತಿಳಿಸಿದರು.
ಅಂದು ಬೆಳಗ್ಗೆ 11ಕ್ಕೆ ಕೇಂದ್ರ ಬಸ್ ನಿಲ್ದಾಣದ ಎದುರು ಇರುವ ಸಹಕಾರಿ ಯೂನಿಯನ್ ಹಾಲ್‌ನಲ್ಲಿ ಸಮಾವೇಶ ನಡೆಯಲಿದೆ. ಅದೇ ರೀತಿ ರಾಜ್ಯಾದ್ಯಂತ ಈ ಸಮಾವೇಶ ನಡೆಯಲಿದ್ದು, ಸರ್ಕಾರದ ನಡೆಗೆ ವ್ಯಾಪಕ ಖಂಡನೆ ವ್ಯಕ್ತವಾಗಲಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ರಾಜ್ಯದಲ್ಲಿ 800 ಕೆಪಿಎಸ್- ಮ್ಯಾಗ್ನೆಟ್ ಶಾಲೆಗಳನ್ನು ಆರಂಭಿಸಲು ಸರ್ಕಾರ ನಿರ್ಧರಿಸಿದೆ. ಆದೇಶದಲ್ಲಿ ತಿಳಿಸಿರುವಂತೆ, ಮ್ಯಾಗ್ನೆಟ್ ಶಾಲೆಯ 3 ರಿಂದ 5 ಕಿಲೋ ಮೀಟರ್ ವ್ಯಾಪ್ತಿಯ ಶಾಲೆಗಳನ್ನು ಈ ಮ್ಯಾಗ್ನೇಟ್ ಶಾಲೆಗಳಲ್ಲಿ ಸಮ್ಮಿಳಿತಗೊಳಿಸಲಾಗುತ್ತದೆ. ಈಗಾಗಲೇ ಈ ಮಾದರಿಯಲ್ಲಿ ಚನ್ನಪಟ್ಟಣ ತಾಲೂಕಿನ ಹೊಂಗನೂರಿನ ಸರ್ಕಾರಿ ಶಾಲೆಯನ್ನು ಮ್ಯಾಗ್ನೆಟ್ ಶಾಲೆಯೆಂದು ಗುರುತಿಸಲಾಗಿದೆ. ಹೊಂಗನೂರಿನಿಂದ 6 ಕಿಮೀ ವ್ಯಾಪ್ತಿಯೊಳಗಿರುವ, 77 ವಿದ್ಯಾರ್ಥಿಗಳಿರುವ ಹೊಡಿಕೆ ಹೊಸಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆ, 82 ವಿದ್ಯಾರ್ಥಿಗಳಿರುವ ಕನ್ನಿದೊಡ್ಡಿ ಶಾಲೆ, 31 ವಿದ್ಯಾರ್ಥಿಗಳಿರುವ ಅಮ್ಮಳ್ಳಿ ದೊಡ್ಡಿ ಶಾಲೆ, 100 ವಿದ್ಯಾರ್ಥಿಗಳಿರುವ ಸಂತೆಮೊಗೇನಹಳ್ಳಿ ಶಾಲೆ, 20 ವಿದ್ಯಾರ್ಥಿಗಳಿರುವ ಮೊಗೇನಹಳ್ಳಿ ದೊಡ್ಡಿ, 80 ವಿದ್ಯಾರ್ಥಿಗಳಿರುವ ಸುಣ್ಣಘಟ್ಟ ಶಾಲೆ ಗಳನ್ನು ಹೊಂಗನೂರಿನ ಕೆಪಿಎಸ್‌ಗೆ ತುರ್ತಾಗಿ ವಿಲೀನಗೊಳಿಸಿ ಕ್ರಮಕೈಗೊಳ್ಳಲು ಆದೇಶ ನೀಡಲಾಗಿದೆ. ತತ್ಪರಿಣಾಮ, ಈ ಊರುಗಳ ಜನರಲ್ಲಿ ಈಗಾಗಲೇ ಆತಂಕ ಸೃಷ್ಟಿಯಾಗಿದೆ ಮತ್ತು ತಮ್ಮ ಊರಿನ ಶಾಲೆಗಳು ಉಳಿಯಬೇಕು ಮತ್ತು ಅವುಗಳನ್ನು ಅಭಿವೃದ್ಧಿಪಡಿಸಿ ಊರಿನ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಖಾತ್ರಿಪಡಿಸಬೇಕೆಂಬುದು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆಂದು ತಿಳಿಸಿದರು.
ಇದೇ ರೀತಿ 900 ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳಡಿ ರಾಜ್ಯದ ಸಾವಿರಾರು ಶಾಲೆಗಳು ವಿಲೀನಗೊಳ್ಳುತ್ತವೆ. ಸಮುದಾಯದ ನಡುವಿನ ಶಾಲೆ ಊರು ದಾಟಿ ಪಕ್ಕದೂರಿಗೆ ಹೋಗುತ್ತದೆ. ಪ್ರತಿ ಗ್ರಾಮ ಪಂಚಾಯಿತಿಗೆ ಒಂದರಂತೆ 6,000 ಕೆಪಿಎಸ್- ಮ್ಯಾಗ್ನೆಟ್ ಶಾಲೆಗಳನ್ನು ಆರಂಭಿಸುವ ಉದ್ದೇಶವನ್ನು ರಾಜ್ಯ ಸರ್ಕಾರವು ಹೊಂದಿದೆ. ಹೀಗಾದಲ್ಲಿ ಸರ್ಕಾರಿ ಪದವಿ ಕಾಲೇಜು ಸೇರಿದಂತೆ 40,000 ಸರ್ಕಾರಿ ಶಾಲೆಗಳು ಮುಚ್ಚಿಹೋಗುವ ಅಪಾಯಕ್ಕೆ ತುತ್ತಾಗುತ್ತವೆ ಎಂದರು.
ಈಗಾಗಲೇ ಸರ್ಕಾರಿ ಶಾಲೆಗಳಲ್ಲಿ ಗಣನೀಯವಾಗಿ ದಾಖಲಾತಿ ಕುಸಿಯುತ್ತಿರುವುದರ ಕುರಿತು ಸರ್ಕಾರವು ಕಾಳಜಿ ವ್ಯಕ್ತಪಡಿಸಿದೆ. ಹೆಚ್ಚಿನ ಗುಣಮಟ್ಟದ ಶಿಕ್ಷಣ ಒದಗಿಸಬಹುದಾದ ಶಾಲೆಯನ್ನು ಈಗಿರುವ ಶಾಲೆಗಿಂತ ಇನ್ನಷ್ಟು ದೂರದಲ್ಲಿ ಸ್ಥಾಪಿಸಿದರೆ ಯಾವ ರೀತಿ ದಾಖಲಾತಿ ಹೆಚ್ಚಾಗಲು ಸಾಧ್ಯ ಎಂಬ ಗಂಭೀರವಾದ ಪ್ರಶ್ನೆ
ರಾಜ್ಯದ ವಿದ್ಯಾರ್ಥಿಗಳು ಹಾಗೂ ಜನತೆಯನ್ನು ಕಾಡುತ್ತಿದೆ ಎಂದರು.
ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 60 ಸಾವಿರಕ್ಕೂ ಅಧಿಕ ಶಿಕ್ಷಕರ ಹುದ್ದೆಗಳು ಖಾಲಿಯಿವೆ. ಕೇವಲ ಒಬ್ಬರೇ ಶಿಕ್ಷಕರನ್ನು ಹೊಂದಿರುವ ಏಕೋಪಾಧ್ಯಾಯ ಶಾಲೆಗಳ ಸಂಖ್ಯೆ 7ಸಾವಿರ. 22 ಸಾವಿರಕ್ಕೂ ಅಧಿಕ ಶಾಲೆಗಳ ಕಟ್ಟಡಗಳು ಸೋರುವ ಛಾವಣಿ, ಬಿರಕುಬಿಟ್ಟ ಗೋಡೆ, ಕಿತ್ತು ಹೋಗಿರುವ ನೆಲದ ಹಾಸು ಸೇರಿದಂತೆ ಅನೇಕ ಸಮಸ್ಯೆಗಳನ್ನು ಹೊಂದಿದ್ದು ವರ್ಷಗಳಿಂದ ದುರಸ್ತಿ ಕಂಡಿಲ್ಲ. 3500ಕ್ಕೂ ಅಧಿಕ ಶಾಲೆಗಳಲ್ಲಿ ಬಳಕೆಗೆ ಯೋಗ್ಯ ಶೌಚಗೃಹ ವ್ಯವಸ್ಥೆಯಿಲ್ಲ. ಆದ್ದರಿಂದ, ರಾಜ್ಯ ಸರ್ಕಾರ ಕೂಡಲೇ ಕೆಪಿಎಸ್-ಮ್ಯಾಗ್ನೆಟ್ ಯೋಜನೆ ಕೈಬಿಡಬೇಕು ಮತ್ತು ಶಿಕ್ಷಕರ ನೇಮಕಾತಿಯನ್ನು ಖಾತ್ರಿಪಡಿಸುವುದರೊಂದಿಗೆ ಮೂಲ ಸೌಲಭ್ಯಗಳನ್ನು ಒದಗಿಸಿ ಸರ್ಕಾರಿ ಶಾಲೆಗಳನ್ನು ರಕ್ಷಿಸಿ ಬಲಪಡಿಸಬೇಕೆಂದು ಆಗ್ರಹಿಸಿದರು.
ಸಂಘಟನೆಯ ಜಿಲ್ಲಾ ಜಂಟಿ ಕಾರ್ಯದರ್ಶಿ ಶಿವರಂಜನಿ ಎಸ್.ಬಿ, ಜಿಲ್ಲಾ ಕಾರ್ಯದರ್ಶಿ ಸಿದ್ದರಾಮಯ್ಯ ಹಿರೇಮಠ, ಕಾವೇರಿ ರಜಪೂತ ಇತರರಿದ್ದರು.