ವಿಜಯಪುರ ನಗರದ ಖಾಸಗಿ ಹೊಟೇಲ್‌ನಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷರ ಸಂಘದ ಬಬಲೇಶ್ವರ ತಾಲೂಕು ಮಾಜಿ ಅಧ್ಯಕ್ಷ ರವಿಂದ್ರ ಹೂಗಾರ ಸುದ್ದಿಗೋಷ್ಠಿ ನಡೆಸಿದರು. ಪ್ರಮುಖರಾದ ಮುತ್ತಪ್ಪ ಪೂಜಾರಿ, ಉದಯಕುಮಾರ ಕೊಟ್ಯಾಳ, ನಿಜಪ್ಪ ಮೇಲಿನಕೇರಿ ಇತರರಿದ್ದಾರೆ. 
ವಿಜಯಪುರ

ಶಿಕ್ಷಕರ ಸಂಘದ ಚುನಾವಣೆಗೆ ಆಕ್ಷೇಪ, ಮತದಾರರ ಪಟ್ಟಿ ಪ್ರಕಟಗೊಳಿಸದೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭ

ಪ್ರಮುಖ ಮುಖ್ಯಾಂಶಗಳು

  • ಶಿಕ್ಷಕರ ಸಂಘದ ಚುನಾವಣೆಗೆ ಆಕ್ರೋಶ
  • ವಾಮ ಮಾರ್ಗದಲ್ಲಿ ಅಧಿಕಾರಿ ಹಿಡಿಯುವ ಯತ್ನ
  • ಅನುಮಾನಕ್ಕೆ ಎಡೆ ಮಾಡಿದ ಪ್ರಕ್ರಿಯೆ
  • ಅಧಿಕಾರ ದುರ್ಬಳಕೆಯ ಆರೋಪ
ವಿಜಯಪುರ: ಮತದಾರರ ಕರಡು ಪಟ್ಟಿ ಹಾಗೂ ಅಂತಿಮ ಪಟ್ಟಿ ಪ್ರಕಟಿಸದೇ ಏಕಾಏಕಿ ಶಿಕ್ಷಕರ ಸಂಘದ ಚುನಾವಣೆ ಪ್ರಕ್ರಿಯೆ ನಡೆಸುತ್ತಿರುವುದಕ್ಕೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷರ ಸಂಘದ ಬಬಲೇಶ್ವರ ತಾಲೂಕು ಮಾಜಿ ಅಧ್ಯಕ್ಷ ರವಿಂದ್ರ ಹೂಗಾರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
‘ಶಿಕ್ಷಕ ಸಂಘದ ಚುನಾವಣೆಗೆ ನಾಮಪತ್ರ ಪ್ರಕ್ರಿಯೆ ಆರಂಭವಾಗಿದ್ದರೂ ಸಹ ಕರಡು ಮತದಾರರ ಪಟ್ಟಿ ಹಾಗೂ ಅಂತಿಮ ಮತದಾರರ ಪಟ್ಟಿಯನ್ನೇ ಪ್ರಕಟಿಸಿಲ್ಲ. ಹಾಲಿ ಇರುವ ಆಡಳಿತ ಮಂಡಳಿ ಈ ರೀತಿ ಮತದಾರರ ಪಟ್ಟಿಯನ್ನೇ ಪ್ರಕಟಿಸದೇ ಬೇರೊಂದು ರೀತಿಯಲ್ಲಿ ಸಂಘದ ಅಧಿಕಾರ ಚುಕ್ಕಾಣಿ ಹಿಡಿಯಲು ಹವಣಿಸುತ್ತಿದೆ’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಆರೋಪಿಸಿದರು.
‘ನಾಮ ಪತ್ರ ಸಲ್ಲಿಕೆಗೂ ಮುನ್ನವೇ ಕರಡು ಮತದಾರರ ಪಟ್ಟಿ ಪ್ರಕಟಿಸಿ ಆಕ್ಷೇಪಣೆಗೆ ಆಹ್ವಾನಿಸಬೇಕಿತ್ತು, ಆದರೆ ನಾಮಪತ್ರ ಸಲ್ಲಿಕೆಗೆ ಮುಹೂರ್ತ ನಿಗದಿಯಾದರೂ ಸಹ ಇಲ್ಲಿಯವರೆಗೆ ಮತದಾರರ ಪಟ್ಟಿಯೇ ಪ್ರಕಟಣೆಯಾಗದಿರುವುದು ದೊಡ್ಡ ಅನುಮಾನ ಮೂಡಿಸಿದೆ’ ಎಂದರು.
‘ಈಗಿರುವ ಆಡಳಿತ ಮಂಡಳಿ ಹಾಗೂ ಅಧ್ಯಕ್ಷರು ಬೇರೊಂದು ಮಾರ್ಗದಿಂದ ಚುನಾವಣೆಯಲ್ಲಿ ಮರು ಆಯ್ಕೆ ಮಾಡುವ ಷಡ್ಯಂತ್ರ ರೂಪಿಸಿದ್ದಾರೆ, ಅನ್ಯ ಮಾರ್ಗದಿಂದ ಅಧಿಕಾರಕ್ಕೆ ಬರಲು ಹಾಲಿ ಇರುವ ರಾಜ್ಯಾಧ್ಯಕ್ಷರು ಹಾಗೂ ಜಿಲ್ಲಾಧ್ಯಕ್ಷರು ಸೇರಿ ಹಲವಾರು ಪದಾಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಶೈಕ್ಷಣಿಕ ಹಾಗೂ ಶಿಕ್ಷಕರ ಪ್ರಗತಿಗಾಗಿ ಇತಿಹಾಸ ಹೊಂದಿರುವ ಶಿಕ್ಷಕರ ಸಂಘವು ಕೆಲವೇ ಜನರು ತಮ್ಮ ಸೊತ್ತಿನಂತೆ ವರ್ತಿಸುತ್ತಿರುವುದು ದುರಂತ ಎಂದರು.
ಶಿಕ್ಷಕರ ಸದಸ್ಯತ್ವದಿಂದ ನಡೆಯುವ ಶಿಕ್ಷಕರ ಸಂಘದ ಘನತೆಗೆ ಧಕ್ಕೆ ಭಾರದಂತೆ ತಕ್ಷಣವೇ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರು ಪ್ರಜಾಪ್ರಭುತ್ವದ ಮಾದರಿಯಲ್ಲಿ ಮತದಾರರ ಪಟ್ಟಿ ಪ್ರಕಟಿಸಿ, ಚುಣಾವಣಾಧಿಕಾರಿಯನ್ನು ನೇಮಿಸಿ, ಚುನಾವಣೆ ಕಚೇರಿ ಪ್ರಾರಂಭಿಸಬೇಕು ಎಂದರು.
‘ಅಧಿಕಾರದ ಲಾಲಸೆಗಾಗಿ ಅಧಿಕಾರ ದುರ್ಬಳಕೆ ಮಾಡಿಕೊಂಡು ಚುಣಾವಣೆಯ ಕಾರ್ಯ ಮುಂದುವರೆಸಿದಲ್ಲಿ ಉಗ್ರ ರೂಪದ ಹೋರಾಟಕ್ಕೆ ಅಣಿಯಾಗಬೇಕಾಗುತ್ತದೆ’ ಎಂದರು.
ಪ್ರಮುಖರಾದ ಮುತ್ತಪ್ಪ ಪೂಜಾರಿ, ಉದಯಕುಮಾರ ಕೊಟ್ಯಾಳ, ನಿಜಪ್ಪ ಮೇಲಿನಕೇರಿ, ವಸೀಂ ಚಟ್ಟರಕಿ, ಬೀಲಾ ಇಂಗಳೆ, ಹಣಮಂತ ಇಂಡಿ, ಬಸವರಾಜ ಅಮರಪ್ಪಗೋಳ, ಎಂ.ಎಚ್. ಮಾದರ, ಸುನೀಲಕುಮಾರ ಬಿರಾದಾರ ಪಾಟೀಲ, ಎಚ್.ಕೆ. ಬೂದಿಹಾಳ, ಶ್ರೀನಿವಾಸ ಬೊಮ್ಮನಹಳ್ಳಿ, ಎಂ.ಎನ್. ಪಾಟೀಲ, ಸಂತೋಷ ಕುಲಕರ್ಣಿ, ಸುರೇಶಕುಮಾರ ಮಾಕಾಳಿ ಇತರರಿದ್ದರು.